Advertisement

ಕನಕದಾಸರ ಮೌಲ್ಯ ಜೀವನದಲ್ಲಿ ರೂಢಿಸಿಕೊಳ್ಳಿ

01:30 PM Nov 16, 2019 | Naveen |

ಬಳ್ಳಾರಿ: ಸಮಾಜದಲ್ಲಿನ ಜಾತಿಗಳನ್ನು ಮೀಟಿ ವಿಶ್ವಮಾನವರಾಗಬೇಕು. ಯುವಜನತೆ ಕನಕದಾಸರ ಜೀವನದ ಮೌಲ್ಯಗಳನ್ನು ರೂಢಿಸಿಕೊಂಡು ಜೀವನ ನಡೆಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಎನ್‌.ರಾಜಪ್ಪ ಹೇಳಿದರು.

Advertisement

ನಗರದ ಜೋಳದರಾಶಿ ದೊಡ್ಡನಗೌಡ ರಂಗಂಮದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಾಲಿಕೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರು ಅಸಾಮಾನ್ಯ ಸಂತ. ದಾಸ ಸಾಹಿತ್ಯ ಪರಂಪರೆಯನ್ನು ಹುಟ್ಟು ಹಾಕಿದ ಕನಕದಾಸರು, ಇಂದಿನ ಪೀಳಿಗೆಗೆ ಆದರ್ಶಯಮಯವಾದ ವ್ಯಕ್ತಿತ್ವ. ಯುವ ಜನತೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಾತಿಯನ್ನು ಮೀರಿದ ಸಮಾಜ ನಿರ್ಮಾಣಕ್ಕೆ ಸನ್ನದ್ಧರಾಗಬೇಕು ಎಂದು ಹೇಳಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ. ಎರ್ರೆಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಕೆರೆಕೋಡಪ್ಪ, ಮುಖಂಡರಾದ ಕೆ.ರಾಮಕೃಷ್ಣ ಬೆಣಕಲ್‌ಬಸವನಗೌಡ, ಮೋಹನ್‌, ಹೊನ್ನೂರಸ್ವಾಮಿ ಮತ್ತಿತರರು ಇದ್ದರು. ಗಮನಸೆಳೆದ ಮೆರವಣಿಗೆ: ಸಂತಶ್ರೇಷ್ಠ ಭಕ್ತ ಕನಕದಾಸ ಜಯಂತಿ ನಿಮಿತ್ತ ನಗರದ ಅಗ್ನಿಶಾಮಕದಳದ ಕಚೇರಿ ಬಳಿಯ ಕನಕದಾಸರ ಪುತ್ಥಳಿ ಆವರಣದಿಂದ ಆರಂಭವಾದ ಮೆರವಣಿಗೆ ಗಮನಸೆಳೆಯಿತು.

ಮೆರವಣಿಗೆಗೆ ವಿವಿಧ ಕಲಾತಂಡಗಳ ಪ್ರದರ್ಶನ ಮೆರಗು ನೀಡಿದವು. ಕನಕದಾಸರ ಪುತ್ಥಳಿಯಿಂದ ಆರಂಭವಾದ ಮೆರವಣಿಗೆಯು ವಾಲ್ಮೀಕಿ ವೃತ್ತದ ಮಾರ್ಗವಾಗಿ ಕನಕದುರ್ಗಮ್ಮ ದೇವಸ್ಥಾನದ ಮೂಲಕ, ಗಡಗಿಚನ್ನಪ್ಪ ವೃತ್ತದ ಮುಖಾಂತರ ಬೆಂಗಳೂರು ರಸ್ತೆ ಮಾರ್ಗವಾಗಿ ಎಚ್‌.ಆರ್‌. ಗವಿಯಪ್ಪ ವೃತ್ತದ ಮೂಲಕ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ತಲುಪಿತು. ಮೆರವಣಿಗೆಯಲ್ಲಿ ಶಾಸಕ ಸೋಮಶೇಖರ್‌ ರೆಡ್ಡಿ, ಸಂಸದ ವೈ. ದೇವೇಂದ್ರಪ್ಪ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ವಿವಿಧ ಸ್ಥಳೀಯ ಸಂಸ್ಥೆಗಳ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು, ಕುರುಬ ಸಮಾಜದ ಮುಖಂಡರು ಹಾಗೂ ಪ್ರತಿನಿ ಧಿಗಳು ಇದ್ದರು. ಮೆರವಣಿಗೆಗೆ ಚಾಲನೆ ನೀಡುವುದಕ್ಕಿಂತ ಮುಂಚೆ ಗಣ್ಯರು ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next