ಬಳ್ಳಾರಿ: ಚಾರಿತ್ರಿಕ ಘಟನೆಯಾಗಿದ್ದ ‘ಹೈದ್ರಾಬಾದ್ ಕರ್ನಾಟಕ ವಿಮೋಚನೆ ಚಳುವಳಿ’ಯಲ್ಲಿ ಹಿಂದು ಮತ್ತು ಮುಸಲ್ಮಾನರು ಐಕ್ಯತೆಯಿಂದ ನಿರ್ವ ಹಿಸಿದ ಪಾತ್ರ ಅತ್ಯಂತ ಮಹತ್ತರವಾದದ್ದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಸಿ. ಮಹಾಬಲೇಶ್ವರಪ್ಪ ಸ್ಮರಿಸಿದರು.
ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ದೇಶದ ಅಖಂಡತೆ ಮತ್ತು ಐಕ್ಯತೆ, ಸಮಗ್ರತೆಯ ದೃಷ್ಟಿಯಿಂದ ಹೈದರಾಬಾದ್ ಸಂಸ್ಥಾನದ ವಿಲೀನತೆಯು, ಅಂದು ಅತ್ಯಂತ ಅವಶ್ಯಕತೆಯಾಗಿತ್ತು. ಇದನ್ನು ಸರ್ದಾರ್ ವಲ್ಲಭಾಯಿ ಪಟೇಲ್ರ ನೇತೃತ್ವದಲ್ಲಿ ನಮ್ಮ ದೇಶಪ್ರೇಮಿಗಳು ಸಾಕಾರಗೊಳಿಸಿದರು. ಈವರೆಗಿನ ಈ ಭಾಗದ ಇತಿಹಾಸವನ್ನು ಕೆಲ ಇತಿಹಾಸಕಾರರು ತಪ್ಪಾಗಿ ರಚಿಸಿದ್ದು, ಆ ಇತಿಹಾಸವನ್ನು ಮತ್ತೇ ಪ್ರಾದೇಶಿಕ ಹಿನ್ನೆಲೆಯಿಂದ ನಿಸ್ಪಕ್ಷಪಾತವಾಗಿ ಪುನರ್ ರಚಿಸಬೇಕಾದ ಅವಶ್ಯಕತೆ ಇದೆ. ಇತಿಹಾಸ ರಚನೆಯಲ್ಲಿ ಇತಿಹಾಸಕಾರರ ಪಾತ್ರ ಬಹು ಮುಖ್ಯವಾಗಿದ್ದು, ಅವರು ಇತಿಹಾಸವನ್ನು ಪಾರದರ್ಶಕವಾಗಿ ವಿಶ್ಲೇಷಿಸಬೇಕಾದ ಅಗತ್ಯವಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಮೌಲ್ಯಮಾಪನ ಕುಲಚಿವ ಪ್ರೊ. ರಮೇಶ್, ಸರ್ಕಾರವು ಈ ಆಚರಣೆಯನ್ನು ”ಕಲ್ಯಾಣ ಕರ್ನಾಟಕ ಉತ್ಸವ” ಎಂದು ಆಚರಿಸುತ್ತಿರುವುದು ಅತ್ಯಂತ ಹೆಚ್ಚು ಅರ್ಥಪೂರ್ಣವಾಗಿದೆ. ಇದರ ಭಾಗವಾಗಿ ನಮ್ಮ ವಿಶ್ವವಿದ್ಯಲಯವು ಹೈದರಾಬಾದ್ ಕರ್ನಾಟಕ ವಿಮೋಚನೆ ಇತಿಹಾಸವನ್ನು ಇಂದಿನ ಯುವಜನಾಂಗಕ್ಕೆ, ವಿಧ್ಯಾರ್ಥಿಗಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಮಹಮದ್ ಜುಬೇರ್, ಸಿಡಿಸಿ ವಿಭಾಗದ ನಿರ್ದೇಶಕ ಡಾ| ಸಿ.ವೆಂಕಟಯ್ಯ, ಪ್ರಾಧ್ಯಾಪಕರಾದ ಪ್ರೊ. ಶಾಂತನಾಯ್ಕ, ಡಾ| ಕೆ.ವಿ.ಪ್ರಾಸಾದ್, ಡಾ| ಲೋಕೇಶ್, ಡಾ| ಭೀಮನಗೌಡ, ಡಾ| ಗೌರಿಮಾನಸ, ಡಾ| ಕುಮಾರ್, ಡಾ| ಎಚ್.ತಿಪ್ಪೇಸ್ವಾಮಿ, ಡಾ| ಸಾಹೀಬ್ ಆಲಿ, ರಾಮದಾಸ್ ಇತರರಿದ್ದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ಅನಂತ್ ಝೆಂಡೆಕರ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸಿ. ಸಂತೋಷ್‌ಕುಮಾರ್ ವಂದಿಸಿದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ| ಹನುಮಂತಯ್ಯ ಪೂಜಾರ್ ನಿರೂಪಿಸಿದರು.