Advertisement

ಉತ್ತರಾಖಂಡದಲ್ಲಿದ್ದ ಜಿಲ್ಲಾ ಪ್ರವಾಸಿಗರು ರಾಜ್ಯದತ್ತ

05:31 PM May 02, 2020 | Naveen |

ಬಳ್ಳಾರಿ: ಪ್ರವಾಸಕ್ಕೆಂದು ತೆರಳಿ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಉತ್ತರಾಖಂಡ್‌ದಲ್ಲಿ ಸಿಲುಕಿಕೊಂಡಿದ್ದ ಬಳ್ಳಾರಿ ಮತ್ತು ನೆರೆಯ ಆಂಧ್ರದ ಕಣೇಕಲ್‌ನ 18 ಜನರನ್ನು ಜಾರ್ಖಂಡ್‌ನ‌ಲ್ಲಿರುವ ಬಳ್ಳಾರಿಯ ಐಪಿಎಸ್‌ ಅಧಿಕಾರಿ ವೈ.ಎಸ್‌.ರಮೇಶ್‌ ಅವರು, ಪ್ರವಾಸಿಗಳನ್ನು ಬಸ್‌ನಲ್ಲಿ ಬಳ್ಳಾರಿಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

Advertisement

ಬಳ್ಳಾರಿ ನಗರದ ಕೌಲ್‌ಬಜಾರ್‌ನ 10 ಜನರು ಮತ್ತು ನೆರೆಯ ಆಂಧ್ರಪ್ರದೇಶದ ಕಣೇಕಲ್‌ ಮಂಡಲಂಗೆ ಸೇರಿದ್ದ 8 ಜನರು ಸೇರಿ ಒಟ್ಟು 18 ಜನರು ದರ್ಗಾವೊಂದರ ದರ್ಶನಕ್ಕೆಂದು ಪ್ರವಾಸ ಕೈಗೊಂಡಿದ್ದರು. ಹೋಗುವ ಮುನ್ನವೇ ವಾಪಸ್‌ ಬರಲು ರೈಲಿನಲ್ಲಿ ರಿಟನ್‌ ಟಿಕೆಟ್‌ನ್ನು ಸಹ ಬುಕ್‌ ಮಾಡಿದ್ದರು. ಮಾ.25ರಿಂದ ವಾಪಸ್‌ ಬರಬೇಕಿತ್ತು. ಆದರೆ, ಕೋವಿಡ್ ವೈರಸ್‌ ನಿಯಂತ್ರಣಕ್ಕಾಗಿ ಮಾ.23ರಿಂದಲೇ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಿ, ಬಸ್‌, ರೈಲು ಸಂಚಾರ ಸ್ಥಗಿತಗೊಳಿಸಿತು. ಪರಿಣಾಮ ಉತ್ತರಾಖಂಡದ ರೂರ್‌ಕೆನಲ್ಲಿ ಸಿಕ್ಕಿಕೊಂಡಿದ್ದ ಇವರು, ತಾತ್ಕಾಲಿಕ ಲಾಡ್ಜ್ನಲ್ಲೆ ಉಳಿದಿದ್ದರು. ಏ.14ಕ್ಕೆ ಲಾಕ್‌ಡೌನ್‌ ಮುಗಿಯಲಿದ್ದು, ನಂತರ ಹೋದರಾಯಿತು ಎಂದು ಅಲ್ಲಿವರೆಗೂ ಲಾಡ್ಜ್ನಲ್ಲೇ ಕಾಲ ಕಳೆದಿದ್ದರು. ಆದರೆ, ಏ.15 ರಿಂದ ಎರಡನೇ ಹಂತದ ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಯಿತು. ಪ್ರವಾಸಕ್ಕೆಂದು ಕೊಂಡೊಯ್ದಿದ್ದ ಹಣವೂ ಖರ್ಚಾಯಿತು.

ಸ್ಥಳೀಯ ಆಡಳಿತವೂ ಇವರ ನೆರವಿಗೆ ಬರದೆ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನೆಲೆಯಲ್ಲಿ ಏನೂ ತೋಚದ ಪ್ರವಾಸಿಗಳಿಗೆ ನೆರೆಯ ಆಂಧ್ರಪ್ರದೇಶದ ರಾಯದುರ್ಗಂ ಮತ್ತು ಅನಂತಪುರಂ ಶಾಸಕರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಕರೆ ಮಾಡಿ ನಮ್ಮನ್ನು ಬಳ್ಳಾರಿಗೆ ಕರೆತರುವ ವ್ಯವಸ್ಥೆ ಮಾಡಲು ಮನವಿ ಮಾಡಿದರೂ ಸ್ಪಂದಿಸಲಿಲ್ಲ ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ಕೊನೆಗೆ ಬಳ್ಳಾರಿಯಲ್ಲಿರುವ ನಗರಸಭೆಯ ಮಾಜಿ ಉಪಾಧ್ಯಕ್ಷ ಕಣೇಕಲ್‌ ಮಾಬುಸಾಬ್‌ ಅವರ ಸಹಕಾರ ಕೋರಿದ್ದಾರೆ. ಅವರು ತಮ್ಮ ಸ್ನೇಹಿತ ಕಾವೇರಿ ಹ್ಯಾಂಡ್‌ ಲೂಮ್‌ ಅಧ್ಯಕ್ಷ ವಿರೂಪಾಕ್ಷಪ್ಪ ಬಳಿ ಪ್ರವಾಸಿಗಳ ಸಮಸ್ಯೆ ವಿವರಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ವಿರೂಪಾಕ್ಷಪ್ಪ ಜಾರ್ಖಂಡ್‌ನ‌ಲ್ಲಿರುವ ತಮ್ಮ ಮಗ ಐಪಿಎಸ್‌ ಅಧಿಕಾರಿ ವೈ.ಎಸ್‌.ರಮೇಶ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಆಗ ಅವರು ಪ್ರವಾಸಿಗಳ ಸಮಸ್ಯೆ ಬಗೆಹರಿಸಿ ಬಳ್ಳಾರಿಗೆ ತೆರಳಲು ವ್ಯವಸ್ಥೆ ಮಾಡಿದ್ದಾರೆ ಎಂದು ಪ್ರವಾಸಿಗಳಲ್ಲಿ ಒಬ್ಬರಾದ ಖಾಜಾ ಮಯಿನುದ್ದೀನ್‌ ತಿಳಿಸಿದ್ದಾರೆ.

ಪುತ್ರ ರಮೇಶ್‌ ತನ್ನ ಶಿಫಾರಸ್ಸಿನಿಂದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, 70 ಸಾವಿರ ರೂಪಾಯಿಗೆ ಬಾಡಿಗೆ ಬಸ್‌ ಮಾಡಿ 18 ಜನರನ್ನು ಕಳಿಸುವ ವ್ಯವಸ್ಥೆ ಮಾಡಿದ್ದಾರೆ. ಗುರುವಾರ ಬಳ್ಳಾರಿಯತ್ತ ಪ್ರಯಾಣ ಬೆಳೆಸಿದ್ದಾರೆ. ಶೀಘ್ರ ಬರಲಿದ್ದಾರೆಂದು ಐಪಿಎಸ್‌ ಅಧಿಕಾರಿ ಅವರ ತಂದೆ ಎನ್‌.ವಿರೂಪಾಕ್ಷಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next