Advertisement
ದಸರಾ ಎಂದಾಕ್ಷಣ ಮಹಾರಾಜರ ಅರಮನೆ, ವೈಭವದಿಂದ ಝಗಮಗಿಸುವ ದೀಪಾಲಂಕಾರ, ಜಗದ್ವಿಖ್ಯಾತ ಜಂಬೂಸವಾರಿ ಮೆರವಣಿಗೆ ಹೀಗೆ ಮೈಸೂರಿನ ದಸರಾ ಹಬ್ಬದ ಆಚರಣೆ ಕಣ್ಮುಂದೆ ಬರುತ್ತದೆ. ಇತ್ತ ಗಣಿನಾಡು ಬಳ್ಳಾರಿಯಲ್ಲೂ ಮಂಗಳವಾರ ಸಡಗರ ಸಂಭ್ರಮದಿಂದ ವಿಜಯದಶಮಿಯನ್ನು ಬರಮಾಡಿಕೊಂಡ ಜನತೆ, ತಮ್ಮ ಕುಟುಂಬ ಪರಿವಾರದೊಂದಿಗೆ ದೇಗುಲಗಳಿಗೆ ತೆರಳಿ ದುರ್ಗಾಮಾತೆ ದರ್ಶನ ಪಡೆದು ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಸಂತಸದಿಂದ ಆಚರಿಸಿದರು.
Related Articles
Advertisement
ಅಲ್ಲದೇ, ಪೂಜೆಗೆ ಅಗತ್ಯವಾದ ಮಾವಿನ ಎಲೆ, ಬಾಳೆಗಂಬ, ಹೂವು, ಚೆಂಡು ಹೂಗಳಿಗೆ ಎಲ್ಲಿಲ್ಲದ ಬೇಡಿಕೆಬಂದಿದ್ದು, ಹಬ್ಬದ ನಿಮಿತ್ತ ಆಯುಧ ಪೂಜೆಯಂದು ಇವುಗಳ ಖರೀದಿ ಜೋರು ಪಡೆದಿತ್ತು. ನಗರದ ಬೆಂಗಳೂರು ರಸ್ತೆಯಲ್ಲಿ ಮಾವಿನ ಎಲೆ, ಬಾಳೆದಿಂಡು ಖರೀದಿಸಲು ಸೋಮವಾರ ಇಡೀ ದಿನ ಜನರು ಕಿಕ್ಕರಿದು ನೆರೆದಿದ್ದರು.
ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ: ದಸರಾ ಹಬ್ಬದ ನಿಮಿತ್ತ ನಗರದ ವಿವಿಧ ಕನಕದುರ್ಗಮ್ಮ ದೇವಸ್ಥಾನ, ಪಟೇಲ್‌ನಗರದ ಸಣ್ಣ ದುರ್ಗಮ್ಮ ದೇವಸ್ಥಾನ, ಮೋತಿ ವೃತ್ತದ ಬಳಿಯ ಏಳುಮಕ್ಕಳ ತಾಯಮ್ಮ ದೇವಿ, ಹವಂಬಾವಿ ಪ್ರದೇಶದಲ್ಲನ ಸೀತಾರಾಮ ಆಶ್ರಮ ಸೇರಿದಂತೆ ವಿವಿಧ ದೇವಿಯರ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಹೋಮ, ಪೂಜಾ ಕಾರ್ಯಕ್ರಮಗಳು ಜರುಗಿದವು.
ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ನವರಾತ್ರಿ ದಿನಗಳಲ್ಲಿ ಸೆ. 29ರಿಂದ ಅ. 5ರವರೆಗೆ ಮೂಲ ವಿಗ್ರಹಕ್ಕೆ ಬೆಳ್ಳಿ ಆಭರಣಗಳಿಂದಅಲಂಕರಿಸಲಾಗಿದ್ದು, ಅ. 6ರಿಂದ ಚಿನ್ನದ ಆಭರಣಗಳಿಂದ ಅಲಂಕರಿಸಲಾಗಿತ್ತು. ಅಲ್ಲದೇ, ಹಬ್ಬದ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಿಯ ಉತ್ಸವ ಮೂರ್ತಿಗೆ ಪ್ರತಿದಿನ ಒಂದೊಂದು ಅಲಂಕಾರ ಮಾಡಲಾಗಿದ್ದು, ಭಕ್ತರ ವಿಶೇಷ ಆಕರ್ಷಣೆಯಾಗಿತ್ತು. ಅದೇ ರೀತಿ ಇಲ್ಲಿನ ಪಟೇಲ್ ನಗರದಲ್ಲಿನ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲೂ ಒಂಭತ್ತು ದಿನಗಳ ಕಾಲ ವಿಶೇಷ ಅಲಂಕಾರ ಹೋಮ ಕಾರ್ಯಕ್ರಮ ಮಾಡಲಾಯಿತು. ಇನ್ನು ಏಳು ಮಕ್ಕಳ ತಾಯಮ್ಮ ದೇವಸ್ಥಾನದಲ್ಲಿ ಹಬ್ಬದ ನಿಮಿತ್ತ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಪ್ರತಿದಿನ ಒಂದೊಂದು ವಿಧದಲ್ಲಿ ಅಲಂಕರಿಸಿ ಭಕ್ತರ ಗಮನ ಸೆಳೆಯಿತು. ಪಲ್ಲಕ್ಕಿ ಉತ್ಸವ: ದಸರಾ ಹಬ್ಬದ ನಿಮಿತ್ತ ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಗರದ ಕೌಲ್‌ಬಜಾರ್, ಹಣ್ಣಿನ ಮಾರುಕಟ್ಟೆ ಬಳಿಯ ಸಣ್ಣ ದುರ್ಗಮ್ಮ ದೇವಸ್ಥಾನಗಳಿಗೆ ತೆರಳಿ ಬನ್ನಿ ಮುಡಿಯಲಾಯಿತು. ಅದೇ ರೀತಿ ಇಲ್ಲಿನ ಚಲುವಾದಿ ಬೀದಿ, ಬಾಪೂಜಿನಗರ, ಮರಿಸ್ವಾಮಿ ಮಠ ಸೇರಿದಂತೆ ಬಹುತೇಕ ಏರಿಯಾ, ಬಡಾವಣೆಗಳಲ್ಲಿನ ದೇವಸ್ಥಾನದಲ್ಲಿ ಆಯುಧ ಪೂಜೆಯಂದು ಇಡೀ ರಾತ್ರಿ ಭಜನೆ ಮಾಡಿದ ಭಕ್ತರು, ಹಬ್ಬದಂದು ದೇವರ ಫೋಟೋ, ಮೂರ್ತಿಗಳನ್ನು ಮೆರವಣಿಗೆ ಮೂಲಕ ತೆರಳಿದ ಭಕ್ತರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ, ಬನ್ನಿ ಮುಡಿದು ಪುನಃ ದೇವಸ್ಥಾನಗಳಿಗೆ
ಮರಳುವ ಮೂಲಕ ದಸರಾ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು. ಸಂಜೆ ಹೊಸ ಬಟ್ಟೆಗಳನ್ನು ಧರಿಸಿ ಹಿರಿಯರಿಗೆ ಕಿರಿಯರು, ಮಹಿಳೆಯರು, ಸಮಾನ ಮನಸ್ಕರರು ಬನ್ನಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.