ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ವೈದ್ಯರಿಗೇ ಸವಾಲಾಗಿದ್ದ ಕಾಯಿಲೆಗಳಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಯೋಗಾಭ್ಯಾಸದ ಮೂಲಕ ದೀರ್ಘಕಾಲಿಕ ಕಾಯಿಲೆಗಳನ್ನೂ ಜಯಿಸಿದ್ದಾರೆ.
ಹೌದು…! ಅಚ್ಚರಿ ಎನಿಸಿದರೂ ಇದು ಸತ್ಯ. ನಗರದ ನಿವಾಸಿ 70 ವರ್ಷದ ಚಂದ್ರಾವತಿ ಗುಪ್ತಾ ಎನ್ನುವವರು ಕಳೆದ 16 ವರ್ಷಗಳಿಂದ ಯೋಗ ಮಾಡುವ ಮೂಲಕ ಹೃದಯ, ಶ್ವಾಸಕೋಶ ಸಂಬಂಧಿ ಕಾಯಿಲೆ, ಉಸಿರಾಟದ ಸಮಸ್ಯೆಯುಳ್ಳ ಕಾಯಿಲೆಗಳಿಂದ ಮುಕ್ತರಾಗಿ ಇದೀಗ ಆರೋಗ್ಯವಾಗಿದ್ದಾರೆ.
ಸತತ ಮೂರ್‍ನಾಲ್ಕು ವರ್ಷಗಳಿಂದ ಹೃದಯ, ಶ್ವಾಸಕೋಶ ಸಂಬಂಧಿ ಕಾಯಿಲೆ, ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದ ಚಂದ್ರಾವತಿ ಗುಪ್ತಾ ಅವರು, ಹೈದ್ರಾಬಾದ್ ಸೇರಿದಂತೆ ಹಲವು ಕಡೆ ಚಿಕಿತ್ಸೆ ಪಡೆದಿದ್ದಾರೆ. ಸ್ವತಃ ಚಂದ್ರಾವತಿಯವರ ಮಗನೇ ಅಮೆರಿಕದಲ್ಲಿ ವೈದ್ಯರಾಗಿದ್ದರೂ, ತಾಯಿಯ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಾಗಿಲ್ಲ. ಕೊನೆಗೆ ನಿತ್ಯ ಯೋಗಾಭ್ಯಾಸವೇ ಈ ಕಾಯಿಲೆಗೆ ಮದ್ದು ಎಂಬುದನ್ನು ಅರಿತ ಮಗ, ತಾಯಿಗೆ ಸಲಹೆ ನೀಡಿದ್ದಾನೆ.
ಮಗನ ಸಲಹೆಯಿಂದಾಗಿ ಕಳೆದ 16 ವರ್ಷಗಳ ಹಿಂದೆ ಇಲ್ಲಿನ ನೆಹರು ಕಾಲೋನಿಯಲ್ಲಿನ ಸಾಧನಾ ಯೋಗ ಕೇಂದ್ರಕ್ಕೆ ಸೇರಿದ್ದಾರೆ. ಆರಂಭದಲ್ಲಿ ಚಂದ್ರಾವತಿಯವರ ವೈದ್ಯಕೀಯ ವರದಿ ನೋಡಿದ ಯೋಗ ಕೇಂದ್ರದ ಯೋಗ ಶಿಕ್ಷಕಿ ರೂಪಾ ಮುರಳೀಧರ್ ಅವರು, ಚಂದ್ರಾವತಿಯವರಿಗೆ ಯೋಗ ಕಲಿಸಿಕೊಡುವುದು ಬೇಡ ಎಂದು ನಿರ್ಧರಿಸಿದ್ದರು. ಆದರೆ, ಚಂದ್ರಾವತಿಯವರು ಪಟ್ಟು ಬಿಡದ ಹಿನ್ನೆಲೆಯಲ್ಲಿ ಕೊನೆಗೆ ರೂಪಾ ಅವರೇ ಮೊದಲು ವಾರಕ್ಕೊಮ್ಮೆ ಉಸಿರಾಟದ ಬಗ್ಗೆ ತರಬೇತಿ ನೀಡಿದರು. ಅದನ್ನು ಎರಡು ತಿಂಗಳು ಕಾಲ ಮನೆಯಲ್ಲೇ ಸತತವಾಗಿ ಯೋಗಾಭ್ಯಾಸ ಮಾಡಿದ ಬಳಿಕ ಉಸಿರಾಟದಲ್ಲಿ ಒಂದಷ್ಟು ಚೇತರಿಕೆಯಾಯಿತು. ಇದರಿಂದ ಚಂದ್ರಾವತಿ ಗುಪ್ತಾ ಅವರಿಗೂ ಮತ್ತು ಯೋಗ ಶಿಕ್ಷಕಿ ರೂಪಾ ಅವರಿಗೂ ಕಾಯಿಲೆಗಳು ಗುಣಮುಖವಾಗಲಿವೆ ಎಂಬ ವಿಶ್ವಾಸ ಮೂಡಿತು. ನಂತರ ನಿಧಾನವಾಗಿ ಪ್ರಾಣಾಯಾಮಾ, ಸೂಕ್ಷ್ಮ ಆಯಾಮಗಳನ್ನು ಹೇಳಿಕೊಡಲಾಯಿತು. ಇದೀಗ ಎಲ್ಲ ಕಾಯಿಲೆಗಳಿಂದ ಗುಣಮುಖವಾಗಿದ್ದು, ವೈದ್ಯರೇ ಖಚಿತ ಪಡಿಸಿದ್ದಾರೆ. ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ವೃದ್ಧಿಯಾಗಿದ್ದು, 70 ವರ್ಷದಲ್ಲೂ 15 ನಿಮಿಷದಲ್ಲಿ 50 ಸೂರ್ಯನಮಸ್ಕಾರ ಮಾಡುತ್ತೇನೆ. ಇದೀಗ ಪ್ರತಿದಿನ ಮನೆಯಲ್ಲಿ ಮತ್ತು ಯೋಗ ಕೇಂದ್ರದಲ್ಲಿ ನಿರಂತರವಾಗಿ ಯೋಗಾಭ್ಯಾಸ ಮಾಡುತ್ತೇನೆ ಎಂದು ಚಂದ್ರಾವತಿ ಗುಪ್ತಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಕಳೆದ 22 ವರ್ಷಗಳ ಅವಧಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ವೈದ್ಯರಿಗೇ ಸವಾಲಾಗಿದ್ದ ರೋಗಿಗಳನ್ನು ಯೋಗಾಭ್ಯಾಸ ಮೂಲಕ ಗುಣಮುಖರನ್ನಾಗಿಸಿದ ಕೀರ್ತಿ ಕೇಂದ್ರಕ್ಕೆ ಸಲ್ಲುತ್ತದೆ. ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ಸತತ ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಹಿಳೆಯೊಬ್ಬರು ಯೋಗಾಭ್ಯಾಸದಿಂದ ಗುಣವಾಗಿ ಇಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಕೆಲಸದಲ್ಲಿ ತೊಡಗುತ್ತಿದ್ದಾರೆ. ನಡೆಯಲು ಬಾರದ ಹುಟ್ಟು ಅಂಗವಿಕಲರೊಬ್ಬರು ಯೋಗಾಭ್ಯಾಸ ನಂತರ ಸೈಕ್ಲಿಂಗ್ ಸ್ಪರ್ಧೆಯಲ್ಲಿ ತೊಡಗಿದ್ದಾರೆ. ಇಂಥ ಸಾಕಷ್ಟು ರೋಗಿಗಳನ್ನು ಯೋಗದ ಮೂಲಕ ಗುಣಮುಖರನ್ನಾಗಿಸಲಾಗಿದೆ ಎಂದು ರೂಪಾ ಮುರಳೀಧರ್ ತಿಳಿಸುತ್ತಾರೆ.