ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹಾಗೂ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್, ಬ್ರಹ್ಮಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ನಕುಲ್, ಬ್ರಹ್ಮಶ್ರೀಗಳ ಕಾಲದಲ್ಲಿ ಅಸ್ಪೃಶ್ಯರು ಮತ್ತು ಇತರೆ ಜನಾಂಗದವರಿಗೆ ದೇವಸ್ಥಾನದ ಒಳಗೆ ಹೋಗಲು ಅನುಮತಿ ನೀಡುತ್ತಿರಲಿಲ್ಲ್ಲ. ಅಸ್ಪೃಶ್ಯರ ನೆರಳು ಮೇಲ್ವರ್ಗದವರ ಮೇಲೆ ಬೀಳಬಾರದು ಎಂಬ ಸ್ಥಿತಿ ಇತ್ತು. ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿ ಅಸ್ಪೃಶ್ಯರು ಮತ್ತು ಕೆಳವರ್ಗದವರಿಗಾಗಿಯೇ ದೇವಸ್ಥಾನಗಳನ್ನು ಸ್ಥಾಪಿಸಿ ಸಂಚಲನ ಮೂಡಿಸಿದ್ದರು ಎಂದು ಸ್ಮರಿಸಿದರು.
ಗಾಂಧಿಧೀಜಿಯವರಿಗೂ ಕೂಡ ಬ್ರಹ್ಮಶ್ರೀ ನಾರಾಯಣ ಗುರು ಆದರ್ಶವಾಗಿದ್ದರು. ಅವರ ನಡೆನುಡಿ ಮತ್ತು ಆದರ್ಶಗಳನ್ನು ಮೆಚ್ಚುಕೊಂಡಿದ್ದರು. ನಾರಾಯಣ ಗುರೂಜಿಯವರ ತತ್ವಾದರ್ಶಗಳನ್ನು ಯುವಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರಾಜ್ಯದೆಲ್ಲೆಡೆ ಮಳೆಯಿಂದ ಹಾನಿಗೀಡಾಗಿ ಜನರು ತೀವ್ರ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಈ ಬಾರಿ ಜಯಂತಿ ಸರಳವಾಗಿ ಆಚರಿಸಲಾಗುತ್ತದೆ. ಜಯಂತಿಗೆ ಬಿಡುಗಡೆಯಾದ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿತರಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶಬಾಬು, ತಹಶೀಲ್ದಾರ್ ವಿಶ್ವಜೀತ್ ಮೆಹತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಈಡಿಗ ಸಮುದಾಯದ ಮುಖಂಡರು ಇದ್ದರು.