Advertisement

ಬೆಳ್ಳಾರೆ: ದಿ.ಪ್ರವೀಣ್‌ ನೆಟ್ಟಾರು ನೂತನ ಮನೆಗೆ ಶಂಕುಸ್ಥಾಪನೆ  

04:48 PM Nov 02, 2022 | Team Udayavani |

ಸುಳ್ಯ: ಜುಲೈನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು(34ವ) ಅವರ ಕನಸಿನ ಮನೆಗೆ ಬುಧವಾರ ಶಂಕುಸ್ಥಾಪನೆ ನೆರೆವೇರಿಸಲಾಯಿತು. ಪುರೋಹಿತರಾದ ಸುರೇಶ್‌ ಗುರಿಕಾರ ನೇತೃತ್ವದಲ್ಲಿ ವೈಧಿಕ ವಿಧಿ ವಿಧಾನಗಳು, ಭೂಮಿ ಪೂಜೆ ಜರುಗಿತು. ಪ್ರವೀಣ್‌ ನೆಟ್ಟಾರು ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ ಕುಮಾರಿ ಹಾಗೂ ಕುಟುಂಬ ವರ್ಗದವರು ಜತೆಗಿದ್ದರು.

Advertisement

ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿರುವ ಪ್ರವೀಣ್‌ ನೆಟ್ಟಾರು ಅವರ ಹಳೆ ಮನೆಯ ಜಾಗದಲ್ಲಿ ಹೊಸ ಮನೆ ನಿರ್ಮಾಣವಾಗಲಿದೆ. 60 ಲಕ್ಷ ರೂ ವೆಚ್ಚದಲ್ಲಿ 2700 ಚದರ ಅಡಿಯ ಮನೆ ನಿರ್ಮಾಣ ಆಗಲಿದ್ದು, ಬಿಜೆಪಿ ಪಕ್ಷದ ವತಿಯಿಂದ ನೀಡಲಾಗಿದ್ದ ಭರವಸೆಯಿಂದ ಮನೆ ನಿರ್ಮಾಣ ಮಾಡಲಾಗುತ್ತಿದ್ದು, ಮುಗ್ರೋಡಿ ಕನ್ಸ್ಟ್ರಕ್ಷನ್ ಸಂಸ್ಥೆಯವರು ಮನೆ ನಿರ್ಮಿಸಲಿದ್ದಾರೆ.

ಶಂಕುಸ್ಥಾಪನೆ ಬಳಿಕ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌, ಪ್ರವೀಣ್‌ ನೆಟ್ಟಾರು ಕನಸು ನನಸು ಮಾಡಲು ಪಕ್ಷ ಹೆಜ್ಜೆ ಇಟ್ಟಿದೆ. ಪ್ರವೀಣ್‌ ಬಿಜೆಪಿ ಪಕ್ಷ, ಸಂಘಟನೆಗಾಗಿ ದುಡಿದವರು. ಅವರ ಕುಟುಂಬಕ್ಕೆ ಬೇಕಾದ ಎಲ್ಲಾ ಸಹಾಯ, ನೆರವು ನೀಡಲು ಬದ್ಧರಾಗಿದ್ದೇವೆ ಎಂದ ಅವರು ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಈ ಮನೆ ನಿರ್ಮಾಣ ಆಗುತ್ತಿದೆ. ಹಲವಾರು ಮಂದಿ ಮನೆ ಕಟ್ಟಿ ಕೊಡಲು ಮುಂದೆ ಬಂದಿದ್ದರು. ಆದರೆ ಮನೆಯವರ ಅಭಿಪ್ರಾಯದಂತೆ ಪಕ್ಷವೇ ಮನೆ ಕಟ್ಟಿ ಕೊಡುತ್ತಿದೆ. ಇಡೀ ಮನೆಯ ವೆಚ್ಚವನ್ನು ಬಿಜೆಪಿ ಭರಿಸುತ್ತದೆ ಎಂದರು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಎ.ವಿ.ತೀರ್ಥರಾಮ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಪನ್ನೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಕರಣದ ಎಲ್ಲರ ಮೇಲೂ ಕ್ರಮ;
ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತಂಡ ತನಿಖೆ ಕೈಗೆತ್ತಿಕೊಂಡಿದೆ. ಈಗಾಗಲೇ ಹಂತಕರ ಬಂಧನ ಆಗಿದೆ, ಕೊಲೆಗೆ ಆರ್ಥಿಕ ಸಹಕಾರ ಕೊಟ್ಟವರಿಗೆ ಲುಕ್‌ ಔಟ್‌ ನೋಟೀಸ್‌ ಜಾರಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿದೆ. ಕೊಲೆಯ ಹಿಂದೆ ಇರುವ ಎಲ್ಲಾ ಶಕ್ತಿಗಳನ್ನು ಬಂಧಿಸುವ ಕೆಲಸ ಆಗುತ್ತಿದೆ. ಪ್ರಮುಖ ಆರೋಪಿಗಳು ಜೈಲಿನಲ್ಲಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಆರ್ಥಿಕ ಸಹಕಾರ, ವಾಹನ ಕೊಟ್ಟವರು, ಮಾನಸಿಕವಾಗಿ ಆರೋಪಿಗಳ ಜೊತೆ ನಿಂತವರನ್ನೂ ಬಿಡುವುದಿಲ್ಲ. ಎನ್‌ಐಎ ತಪ್ಪಿಸಿಕೊಂಡವರ ಪತ್ತೆಗೆ ಬಹುಮಾನ ಘೋಷಿಸಿದೆ. ಈಗಾಗಲೇ ಪ್ರವೀಣ್‌ ಹತ್ಯೆ ಬಳಿಕ ಪಿಎಫ್ಐ ನಿಷೇಧ ಆಗಿದೆ.

ಸದ್ಯ ಹತ್ಯೆ ಕೇಸ್‌ ಆರೋಪಿಗಳು ಯಾವ ಕೋರ್ಟ್‌ನಲ್ಲೂ ಹೊರ ಬರದ ಹಾಗೆ ಪ್ರಕರಣ ದಾಖಲಿಸಲಾಗಿದೆ. ಎನ್‌ಐಎ ಇದಕ್ಕೆ ಸಂಬಂಧಿಸಿ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next