Advertisement
ಸುಳ್ಯ ತಾಲೂಕಿನ ಬೆಳ್ಳಾರೆ ಕೇಂದ್ರ ಬಸ್ ನಿಲ್ದಾಣದ ಬಳಿಯಿಂದ ಕವಲೊಡೆದು ತಡಗಜೆ ಮೂಲಕ ಕೊಡಿಯಾಲ ಗ್ರಾಮಕ್ಕೆ ಸಂಪರ್ಕ ಬೆಸೆಯುವ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆ ಇದು. ದಿನಂಪ್ರತಿ ನೂರಾರು ಮಂದಿ ಈ ರಸ್ತೆಯನ್ನು ಅವಲಂಬಿಸಿದ್ದರೂ, ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದರೂ ಕಳೆದ ಕೆಲ ವರ್ಷಗಳಿಂದ ತೀರಾ ಹದಗೆಟ್ಟು ಸಂಚಾರಕ್ಕೆ ಅಸಾಧ್ಯ ಎನ್ನುವ ಸ್ಥಿತಿಗೆ ತಲುಪಿತ್ತು. ಸ್ಥಳೀಯರ ನಿರಂತರ ಒತ್ತಡದಿಂದ ಕೆಲವು ತಿಂಗಳ ಹಿಂದೆ ಅನುದಾನ ಬಿಡುಗಡೆಗೊಂತ್ತು.
ಹತ್ತು ದಿನಗಳ ಹಿಂದೆ ಬೆಳ್ಳಾರೆ ಜಂಕ್ಷನ್‌ನಿಂದ 230 ಮೀಟರ್ ದೂರದ ತನಕ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ಪ್ರಾರಂಭಗೊಂಡಿತ್ತು. ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ರಸ್ತೆ ಫಲಾನುಭವಿಯಾಗಿರುವ ಕೃಷಿಕ ದಿಲೀಪ್ ಗಟ್ಟಿಗಾರು ನಿರ್ಧರಿಸಿದರು. ಸ್ವ ಇಚ್ಛೆಯಿಂದ, ಉಚಿತವಾಗಿ ಕಳೆದ ಹತ್ತು ದಿನಗಳಿಂದ ಕಾಮಗಾರಿಯ ಪ್ರತೀ ಕ್ಷಣವನ್ನೂ ವೀಕ್ಷಿಸುತ್ತಾ ಗುಣಮಟ್ಟದ ಬಗ್ಗೆ ಗುತ್ತಿಗೆದಾರ, ಎಂಜಿನಿಯರ್ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ. ಅನುಮಾನ ಬಂದಲ್ಲಿ ಕಾರ್ಮಿಕರ ಬಳಿ ವಿಚಾರಿಸಿ ಮಾಹಿತಿ ಪಡೆಯುತ್ತಾರೆ. ಈ ಕೆಲಸಕ್ಕಾಗಿ ಇಡೀ ದಿನವನ್ನು ಮೀಸಲಿಟ್ಟಿದ್ದಾರೆ. ನನ್ನೂರಿನ ರಸ್ತೆಯ ಕಾಮಗಾರಿ ನಡೆಯುತ್ತಿದ್ದು ಇದರ ಮೇಲೆ ನಿತ್ಯವೂ ನಿಗಾ ಇರಿಸಿದ್ದೇನೆ. ಗುಣಮಟ್ಟದಲ್ಲಿ ರಾಜೀ ಮಾಡದೆ ಕಾಮಗಾರಿ ಮಾಡಬೇಕು ಅನ್ನುವುದೇ ನನ್ನ ಉದ್ದೇಶ. ಸಮರ್ಪಕ ರೀತಿಯಲ್ಲಿ ಕೆಲಸ ನಡೆದಿದೆ. -ದಿಲೀಪ್, ಗಟ್ಟಿಗಾರು
Related Articles
ಪ್ರತೀ ದಿನ ರಸ್ತೆ ಕಾರ್ಮಿಕರು ಬೆಳಗ್ಗೆ 9.30ಕ್ಕೆ ಸ್ಥಳಕ್ಕೆ ಬಂದರೆ, ದಿಲೀಪ್ ಗಟ್ಟಿಗಾರು 8.45 ಕ್ಕೆ ಹಾಜರಿರುತ್ತಾರೆ. ಕಾರ್ಮಿಕರಿಗೆ ಫೋನ್ ಮಾಡಿ ಅವರು ಬರುವುದನ್ನು ಖಾತರಿ ಮಾಡುತ್ತಾರೆ. ಅಲ್ಲಿಂದ ಕಾಮಗಾರಿ ಮುಗಿಯುವ ತನಕವೂ ಇರುತ್ತಾರೆ. ಜಲ್ಲಿ, ಸಿಮೆಂಟ್ ಮಿಕ್ಸಿಂಗ್ ಸರಿಯಾಗಿದೆಯೋ ಎಂದು ಪರಿಶೀಲಿಸುತ್ತಾರೆ. ರಸ್ತೆಯ ಎತ್ತರ, ಅಗಲಕ್ಕೆ ಸಮ ಪ್ರಮಾಣದಲ್ಲಿ ಜಲ್ಲಿ ಮಿಶ್ರಣ ಹಾಕಿರುವ ಬಗ್ಗೆಯು ಮಾಹಿತಿ ಪಡೆಯುತ್ತಾ ರಸ್ತೆ ಗುಣಮಟ್ಟದ ಬಗ್ಗೆ ಹದ್ದಿನ ಕಣ್ಣಿರಿಸಿದ್ದಾರೆ. ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು ಅದಾದ ಬಳಿಕದ ಪ್ರಕ್ರಿಯೆಗಳ ಬಗ್ಗೆಯು ನಿಗಾ ಇರಿಸಲು ದಿಲೀಪ್ ನಿರ್ಧರಿಸಿದ್ದಾರೆ.
Advertisement
ಪೈಪ್ ಅಳವಡಿಕೆರಸ್ತೆ ಕಾಮಗಾರಿ ಆದ ಬಳಿಕ ಕುಡಿಯುವ ನೀರಿಗಾಗಿ, ಕೇಬಲ್ ಅಳವಡಿಕೆಗಾಗಿ ರಸ್ತೆಯನ್ನೇ ಅಗೆಯುವುದನ್ನು ಕಂಡಿದ್ದೇವೆ. ಇದರಿಂದ ರಸ್ತೆ ಹಾಳಾದ ನೂರಾರು ಉದಾಹರಣೆಗಳು ಇವೆ. ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡಿರುವ ದಿಲೀಪ್ ಗುತ್ತಿಗೆದಾರರ ಗಮನಕ್ಕೆ ತಂದು ರಸ್ತೆಯ ಬದಿಗಳಲ್ಲಿ ಪೈಪ್ ಅಳವಡಿಸಿದ್ದಾರೆ. ಭವಿಷ್ಯದ ದಿನಗಳಲ್ಲಿ ನಳ್ಳಿ ನೀರಿನ ಸಂಪರ್ಕ ಪಡೆಯಲು ಬೇಕಾದ ಹಾಗೇ ಪೈಪ್ ಜೋಡಿಸಿದ್ದಾರೆ. -ಕಿರಣ್ ಪ್ರಸಾದ್ ಕುಂಡಡ್ಕ