ಪುತ್ತೂರು: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆ ಖಂಡಿಸಿ ಪುತ್ತೂರು, ಉಪ್ಪಿನಂಗಡಿ, ಕಡಬ ತಾಲೂಕುಗಳಲ್ಲಿ ಬುಧವಾರ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದೆ.
ಮುಂಜಾನೆ ಮಂಗಳೂರಿಗೆ ಸಂಚರಿಸುತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಕಲ್ಲೆಸೆದು ಹಾನಿಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಯುವ ಮುಖಂಡ 29 ವರ್ಷದ ಪ್ರವೀಣ್ ನೆಟ್ಟಾರು ಅವರನ್ನು ನಗರದ ಬೆಳ್ಳಾರೆ ಪೇಟೆಯಲ್ಲಿ ಹತ್ಯೆ ಮಾಡಲಾಗಿದೆ. ಈ ಬರ್ಬರ ಹತ್ಯೆಯನ್ನು ಖಂಡಿಸಿ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ಸ್ವಯಂಪ್ರೇರಿತ ಬಂದ್‌ಗೆ ವಿಎಚ್‌ಪಿ, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.
ಇದನ್ನೂ ಓದಿ: ಅಶ್ಲೀಲವಾಗಿ ಫೋಟೋ ಮಾರ್ಫಿಂಗ್ ಮಾಡಿ ಸಂದೇಶ ರವಾನೆ
ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರು ನಿವಾಸಿಯಾಗಿರುವ ಪ್ರವೀಣ್ ಅವರು ಎಂದಿನಂತೆ ಮಂಗಳವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ತನ್ನ ಚಿಕನ್ ಸೆಂಟರ್ ಅನ್ನು ಮುಚ್ಚುವ ತಯಾರಿಯಲ್ಲಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಘಟನೆ ನಡೆದ ರಾತ್ರಿಯೇ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರು. ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.