Advertisement

ಬೆಳ್ಳಾರೆ: ಬಸ್‌ ನಿಲ್ದಾಣಕ್ಕೆ ಬೇಕು ಕಾಯಕಲ್ಪ 

10:58 AM Aug 29, 2018 | |

ಬೆಳ್ಳಾರೆ: ಬೆಳ್ಳಾರೆ ಮೇಲಿನ ಪೇಟೆ ಯಲ್ಲಿರುವ ಮುಖ್ಯ ಬಸ್ಸು ನಿಲ್ದಾಣ ಹೊಂಡ -ಗುಂಡಿಗಳಿಂದ ಕೂಡಿದ್ದು ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಬಸ್ಸು ನಿಲ್ದಾಣದ ಎದುರಿನ ಭಾಗ ಚರಂಡಿ ಸಮೀಪ ಹೊಂಡ -ಗುಂಡಿಗಳು ನಿರ್ಮಾಣವಾಗಿದ್ದು, ಬಸ್ಸು ಸರಾಗವಾಗಿ ನಿಲ್ದಾಣದ ಒಳಗೆ ಹಾಗೂ ಹೊರಗೆ ಸಂಚರಿಸಲು ಅಸಾಧ್ಯವಾಗುತ್ತಿದೆ. ಇಲ್ಲಿಯ ಹೊಂಡದಲ್ಲಿ ಕೆಸರು ನೀರು ತುಂಬಿದ್ದು, ಪಾದಚಾರಿಗಳಿಗೆ ಕೆನ್ನೀರಿನ ಅಭಿಷೇಕ ಆಗುತ್ತಿದೆ.

Advertisement

ಕಿರಿದಾದ ಬಸ್ಸು ನಿಲ್ದಾಣ
ಬೆಳ್ಳಾರೆ ಬಸ್ಸು ನಿಲ್ದಾಣ ತುಂಬಾ ಕಿರಿದಾಗಿದೆ. ಅಭಿವೃದ್ಧಿ ಹೊಂದುತ್ತ ವಾಣಿಜ್ಯ ಕೇಂದ್ರವಾಗಿ ಬೆಳ್ಳಾರೆ ಬೆಳೆಯುತ್ತಿದ್ದು, ಜನರ ಓಡಾಟವೂ ಜಾಸ್ತಿಯಿದೆ. ಬಸ್ಸಿಗೆ ಕಾಯುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಒಂದು ಕೋಣೆ ಮಾತ್ರವಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲ. ಕೆಲವೊಮ್ಮೆ ಪಾನಮತ್ತರು ಇಲ್ಲಿ ತೂರಾಡುತ್ತಾ ಅಡ್ಡಾಡಿ, ಅಸಭ್ಯವಾಗಿ ವರ್ತಿಸಿ, ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ವಿದ್ಯಾರ್ಥಿನಿಯರೂ ಸಮಸ್ಯೆ ಎದುರಿಸುವಂತಾಗಿದೆ. ಬಸ್‌ ನಿಲ್ದಾಣದಲ್ಲಿ ಐದು ಕೋಣೆಗಳಿದ್ದರೂ ಒಂದನ್ನು ಮಾತ್ರ ಪ್ರಯಾಣಿಕರಿಗೆ ಬಿಟ್ಟುಕೊಡಲಾಗಿದೆ. ಒಂದು ಕೋಣೆಯಲ್ಲಿ ಕೆಎಸ್‌ಆರ್‌ಟಿಸಿ ಕಚೇರಿ, ಇನ್ನೊಂದು ಕಡೆ ಖಾಸಗಿ ಕಚೇರಿ. ಎರಡು ಕೋಣೆಗಳಲ್ಲಿ ಅಂಗಡಿಗಳಿವೆ.

ಶೌಚಾಲಯಕ್ಕೆ ಬೀಗ
ಬಸ್‌ ನಿಲ್ದಾಣದಲ್ಲಿರುವ ಶೌಚಾಲಯದ ಬೇಸಿನ್‌ನಗಳಲ್ಲಿ ಕೆಲವರು ಮದ್ಯದ ಖಾಲಿ ಬಾಟಲಿಗಳನ್ನು ಎಸೆದು, ಶೌಚಾಲಯ ಆಗಾಗ ಬ್ಲಾಕ್‌ ಆಗುತ್ತಿತ್ತು. ಹೀಗಾಗಿ, ಗ್ರಾ.ಪಂ. ಶೌಚಾಲಯಕ್ಕೆ ಬೀಗ ಹಾಕಿದೆ. ಪ್ರಯಾಣಿಕರಿಗೆ ಬಳಕೆಗೆ ಸಿಗದಂತಾಗಿದೆ. ದೂರದಲ್ಲಿರುವ ಸಂತೆ ಮಾರುಕಟ್ಟೆ ಸಮೀಪದ ಶೌಚಾಲಯವನ್ನೇ ಬಳಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಅಪಾಯಕಾರಿ
ಬೆಳ್ಳಾರೆ ಬಸ್ಸು ನಿಲ್ದಾಣದ ಎದುರು ಭಾಗ ಹೊಂಡ-ಗುಂಡಿಗಳಿಂದ ಕೂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಇಲ್ಲಿ ಶೌಚಾಲಯ ಇಲ್ಲ. ಜನರಿಗೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶ ಇಲ್ಲ. ಸ್ಥಳೀಯ ಗ್ರಾ.ಪಂ. ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾಗಿದೆ.
 - ಹರಿಪ್ರಸಾದ್‌ ಬೆಳ್ಳಾರೆ, ಸ್ಥಳೀಯರು

 ಅಭಿವೃದ್ಧಿ ಮಾಡುತ್ತೇವೆ
ಬೆಳ್ಳಾರೆ ಪೇಟೆ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಬಸ್‌ ನಿಲ್ದಾಣದಲಲಿ ಕೆಲವು ಸಮಸ್ಯೆಗಳಿರುವುದು ನಮ್ಮ ಗಮನಕ್ಕೆ ಬಂದಿದೆ. ಮಳೆಗಾಲ ಕಳೆದ ಕೂಡಲೇ ಬಸ್‌ ನಿಲ್ದಾಣವನ್ನು ಸುಸಜ್ಜಿತಗೊಳಿಸಲಾಗುವುದು. ನಿಲ್ದಾಣದ ಆವರಣಕ್ಕೆ ಇಂಟರ್‌ ಲಾಕ್‌ ಅಳವಡಿಸುತ್ತೇವೆ. ಹೊಸ ಶೌಚಾಲಯ ನಿರ್ಮಾಣ ಮಾಡುತ್ತೇವೆ.
– ಶಕುಂತಳಾ ನಾಗರಾಜ್‌,
ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next