Advertisement

ಬೆಳೆಯುತ್ತಿರುವ ಬೆಳ್ಳಾರೆ ಪಟ್ಟಣದಬಸ್‌ ನಿಲ್ದಾಣದಲ್ಲಿ ಇಲ್ಲಗಳೇ ಎಲ್ಲ!

05:32 AM Jan 07, 2019 | |

ಸುಳ್ಯ : ಅತಿ ವೇಗವಾಗಿ ಬೆಳೆಯುತ್ತಿರುವ ಬೆಳ್ಳಾರೆ ಪಟ್ಟಣದ ಬಸ್‌ ನಿಲ್ದಾಣವಂತೂ ನಿರ್ವಹಣೆ, ಸ್ಥಳಾವಕಾಶದ ಕೊರತೆಯಿಂದ ಸೊರಗಿದೆ. ದಿನಂಪ್ರತಿ ನೂರಾರು ಪ್ರಯಾಣಿಕರು, ಹಲವು ಬಸ್‌ಗಳು ಪ್ರವೇಶಿಸುವ ಈ ನಿಲ್ದಾಣದಲ್ಲಿ ಸ್ವಚ್ಛತೆಯ ಕೊರತೆ, ಪ್ರಯಾಣಿಕರ ವಿಶ್ರಾಂತಿಗೆ ಬೇಕಿರುವ ಜಾಗದ ಕೊರತೆ, ಬಸ್‌ ನಿಲುಗಡೆಗೆ ಜಾಗದ ಕೊರತೆ ಹೀಗೆ ಸಮಸ್ಯೆಗಳ ಪಟ್ಟಿಯೇ ಇದೆ. ಇದು ಪ್ರಯಾಣಿಕರ ಕ್ಷೇಮ ಸಂಚಾರಕ್ಕೆ ಅಡ್ಡಿಯಾಗಿದೆ.

Advertisement

ಎರಡನೇ ವಾಣಿಜ್ಯ ಪಟ್ಟಣ
ಸುಳ್ಯ ತಾಲೂಕಿನ ಎರಡನೇ ವಾಣಿಜ್ಯ ಪಟ್ಟಣ ಎಂಬ ಹೆಗ್ಗಳಿಕೆ ಬೆಳ್ಳಾರೆಗಿದೆ. ಅನೇಕ ಸರಕಾರಿ, ಖಾಸಗಿ ವಿದ್ಯಾಸಂಸ್ಥೆ, ಹಲವು ಬ್ಯಾಂಕು, ವಾಣಿಜ್ಯ ಮಳಿಗೆಗಳು ಇರುವ ಈ ಪಟ್ಟಣ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಪುತ್ತೂರು-ಸುಳ್ಯ ತಾಲೂಕಿನ ಗಡಿ ಗ್ರಾಮವದ ಇಲ್ಲಿಗೆ ನಿತ್ಯ ಸಾವಿರಾರು ಜನರು ಬರುತ್ತಾರೆ. ಬಹುತೇಕರು ಕೆಎಸ್‌ಆರ್‌ಟಿಸಿ ಬಸ್‌ ಅವಲಂಬಿಸಿದ್ದಾರೆ.

ಬಸ್‌ ಪಾಸ್‌ ಹೊಂದಿರುವ ನೂರಾರು ವಿದ್ಯಾರ್ಥಿಗಳು ಬೆಳಗ್ಗೆ, ಸಂಜೆ ಬಸ್‌ಗಾಗಿ ಕಾಯುತ್ತಾರೆ. ಈ ಎರಡು ಹೊತ್ತು ನಿಲ್ದಾಣ ಕಿಕ್ಕಿರಿದು ತುಂಬಿರುತ್ತದೆ. ವಾರದ ಸಂತೆ ದಿನ ಶನಿವಾರ ಟ್ರಾಫಿಕ್‌ ಜಾಮ್‌ ಇಲ್ಲಿ ಮಾಮೂಲಿ ಆಗಿದೆ. ಆ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ಆಗಿಲ್ಲ.

ನಿರ್ವಹಣೆ ಕೊರತೆ
ಬೆಳ್ಳಾರೆ ಗ್ರಾ.ಪಂ. ವತಿಯಿಂದ 12 ವರ್ಷಗಳ ಹಿಂದೆ ಬಸ್‌ ನಿಲ್ದಾಣ ನಿರ್ಮಿಸಲಾಗಿತ್ತು. ಬಸ್‌ ನಿಲ್ದಾಣ, ಪ್ರಯಾಣಿಕರ ತಂಗುದಾಣ, ಟಿ.ಸಿ. ಪಾಯಿಂಟ್, ಶೌಚಾಲಯ ಹಾಗೂ ವಾಣಿಜ್ಯ ಕೊಠಡಿಗಳ ಕಟ್ಟಡ ನಿರ್ಮಿಸಲಾಗಿತ್ತು. ಅಂದಿನ ಜನಸಂಖ್ಯೆಗೆ ತಕ್ಕಂತೆ ಇದ್ದ ಈ ನಿಲ್ದಾಣ ಈಗ ಸ್ಥಳಾವಕಾಶ ಸಾಲದಂತಹ ಸ್ಥಿತಿಗೆ ತಲುಪಿದೆ. ಪ್ಲಾಸ್ಟಿಕ್‌ ಸಹಿತ ತ್ಯಾಜ್ಯ ವಸ್ತುಗಳು ನಿಲ್ದಾಣ, ಪ್ರಯಾಣಿಕರ ವಿಶ್ರಾಂತಿ ಕೊಠಡಿಯೊಳಗೆ ಎಲ್ಲೆಂದರಲ್ಲಿ ತುಂಬಿವೆ. ಕುಡಿಯುವ ನೀರಿನ ಯಂತ್ರ ನಿರುಪಯುಕ್ತವಾಗಿದೆ. ಶೌಚಾಲಯ ಶಿಥಿಲಾವಸ್ಥೆಗೆ ಬಿದ್ದು, ಬಳಸದ ಸ್ಥಿತಿಯಲ್ಲಿದೆ.

ಇಕ್ಕಟ್ಟು ಇಲ್ಲಿನ ಬಿಕ್ಕಟ್ಟು
ಬೆಂಗಳೂರು, ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು, ಕಡಬ ಸಹಿತ ವಿವಿಧ ಭಾಗಕ್ಕೆ ಈ ನಿಲ್ದಾಣದಿಂದ ಬಸ್‌ ಓಡಾಟ ನಡೆಸುತ್ತವೆ. ಪ್ರತಿ ದಿನ 50ಕ್ಕಿಂತ ಅಧಿಕ ಬಸ್‌ ಟ್ರಿಪ್‌ ಇವೆ. ಏಕಕಾಲದಲ್ಲಿ ಐದು ಬಸ್‌ ಮಾತ್ರ ನಿಲ್ಲುವ ಸಾಮರ್ಥ್ಯ ಇಲ್ಲಿದೆ. ಒಂದು ಬಸ್‌ ಹೆಚ್ಚಾದರೂ ಟ್ರಾಫಿಕ್‌ ಕಿರಿ-ಕಿರಿ ತಪ್ಪದು. ಮುಖ್ಯವಾಗಿ ಬಸ್‌ ನಿಲ್ದಾಣಕ್ಕೆ ಪ್ರವೇಶ ಅಥವಾ ತೆರಳುವ ಬಸ್‌ಗಳಿಗೆ ಅಗತ್ಯ ಸ್ಥಳವಕಾಶದ ಕೊರತೆ ಇದೆ. ಮುಖ್ಯ ರಸ್ತೆಯಲ್ಲಿ ಇತರೆ ವಾಹನ ನಿಲುಗಡೆ ಮಾಡಿ, ಬಸ್‌ ಸಂಚಾರಕ್ಕೆ ಅನುವು ಮಾಡಿಕೊಡುವುದು ಅನಿವಾರ್ಯವಾಗಿದೆ. ಇದು ಇಲ್ಲಿನ ನಿತ್ಯದ ಗೋಳಾಗಿದೆ.

Advertisement

3.5 ಲಕ್ಷ ರೂ.ಗಳಲ್ಲಿ ದುರಸ್ತಿ
ನಿಲ್ದಾಣದಲ್ಲಿ ಸಮಸ್ಯೆಗಳು ಇರುವುದು ನಮ್ಮ ಗಮನಕ್ಕೆ ಬಂದಿದೆ. 3.5 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಈಗಿನ ಟಿ.ಸಿ. ಕೊಠಡಿಯನ್ನು ತೆರವು ಮಾಡಿ ಪ್ರಯಾಣಿಕರ ವಿಶ್ರಾಂತಿ ಕೊಠಡಿ ವಿಸ್ತರಿಸುವುದು, ಹೊಸ ಟಿ.ಸಿ. ಕೊಠಡಿ ರಚನೆ, ಶೌಚಾಲಯ ನಿರ್ಮಾಣ, ಛಾವಣಿ ದುರಸ್ತಿ, ಬಣ್ಣ ಬಳಿಯುವಿಕೆ ಇತ್ಯಾದಿ ಕಾಮಗಾರಿ ನಡೆಸಲಾಗುವುದು.
ಧನಂಜಯ,
ಪಿಡಿಒ, ಬೆಳ್ಳಾರೆ ಗ್ರಾ.ಪಂ.

ಸಮಸ್ಯೆಗಳ ಸರಮಾಲೆ 
ಸ್ವಚ್ಛತೆ, ಸ್ಥಳಾವಕಾಶದ ಕೊರತೆಯ ಜತೆಗೆ ಇತರೆ ಸಮಸ್ಯೆಗಳು ನಿಲ್ದಾಣವನ್ನು ಕಾಡುತ್ತಿವೆ. ರಸ್ತೆ ಸಾರಿಗೆ ಸಿಬಂದಿಗಳಿಗೆ ವಿಶ್ರಾಂತಿ ಕೊಠಡಿ, ಮಹಿಳಾ ವಿಶ್ರಾಂತಿ ಕೊಠಡಿ, ಶೌಚಾಲಯ ಇಲ್ಲದಿರುವುದು, ಟಿ.ಸಿ.ಪಾಯಿಂಟ್‌ಗೆ ಕಚೇರಿ ಕೊರತೆ ಇವೆಲ್ಲವೂ ಇಲ್ಲಿನ ಪ್ರಮುಖ ಮೂಲ ಸೌಕರ್ಯದ ಕೊರತೆ ಆಗಿದೆ. ಈ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಪ್ರಯಾಣಿಕ ಸಂತೋಷ್‌ ಕುಮಾರ್‌ ಕೊಡಿಯಾಲ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next