ಬೆಂಗಳೂರು: ರಾಜಧಾನಿ ಬೆಂಗಳೂರಿನ ಬೆಳ್ಳಂದೂರು ಕೆರೆಯ ಜೊತೆಗೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಕೆರೆಗಳನ್ನು ಅರಣ್ಯ ಮತ್ತು ಪರಿಸರ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವ ಚಿಂತನೆ ನಡೆದಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಅರಣ್ಯ ಸಚಿವ ಆರ್. ಶಂಕರ್ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆಗಳಿಗೆ ತ್ಯಾಜ್ಯ ನೀರು ಹರಿದು ಬರುವುದರಿಂದ ನೀರು ಕಲ್ಮಶವಾಗಿ ಮಾಲಿನ್ಯ ಮತ್ತು ಪರಿಸರದ ಸಮಸ್ಯೆಗಳು ಉದ^ವಿಸುತ್ತವೆ. ಆದ್ದರಿಂದ ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ನಿರ್ವಹಣೆಯನ್ನು ಅರಣ್ಯ ಮತ್ತು ಪರಿಸರ ಇಲಾಖೆಯ ಸುಪರ್ದಿಗೆ ವಹಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ ಎಂದರು.
ಬೆಳ್ಳಂದೂರು ಕೆರೆಯ ಮಾಲಿನ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಸಿರು ಪೀಠ, ಸುಪ್ರೀಂಕೋರ್ಟ್ ಸಹ ಮಧ್ಯಪ್ರವೇಶಿಸಿ ನಿರ್ದೇಶನ ಮತ್ತು ಎಚ್ಚರಿಕೆಗಳನ್ನೂ ಕೊಟ್ಟಿದೆ. ಸದ್ಯ ಈ ಕೆರೆ ಬಿಬಿಎಂಪಿ ಮತ್ತು ಬಿಡಿಎ ನಿರ್ವಹಣೆಯಲ್ಲಿದೆ. ಪರಿಸರದ ದೃಷ್ಟಿಯಿಂದ ಇದನ್ನು ನಮ್ಮ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವ ಚಿಂತನೆಯಿದ್ದು, ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದೇನೆ. ಅವರೂ ಸಹ ಇದಕ್ಕೆ ಒಪ್ಪಿಕೊಂಡಿದ್ದಾರೆ. ಜೊತೆಗೆ ಬಿಬಿಎಂಪಿ ಅರಣ್ಯ ವಿಭಾಗವನ್ನು ಇಲಾಖೆಯ ಹತೋಟಿಗೆ ತೆಗೆದುಕೊಳ್ಳಲಾಗುವುದು. ಅದೇ ರೀತಿ ಸಣ್ಣ ನೀರಾವರಿ ಇಲಾಖೆಗೊಳಪಡುವ ಉಳಿದ ಕೆರೆಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಮನವಿ ಮಾಡಲಾಗಿದೆ ಎಂದು ಶಂಕರ್ ತಿಳಿಸಿದರು.
ಹೆಚ್ಚುವರಿ ಅನುದಾನ: ಇಲಾಖೆಗೆ ಪ್ರಸಕ್ತ ಬಜೆಟ್‌ನಲ್ಲಿ 1,500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಹೊಸದಾಗಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ 560 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಹಸಿರೀಕರಣ ಹೆಚ್ಚಿಸಲು 5 ಕೋಟಿ ಸಸಿ ನೆಡುವ ಉದ್ದೇಶ ಹೊಂದಲಾಗಿತ್ತು. ಈಗ ಅದನ್ನು ಹೆಚ್ಚಿಸಿ 10 ಕೋಟಿ ಸಸಿ ನೆಡುವ ಗುರಿ ಇಟ್ಟುಕೊಳ್ಳಲಾಗಿದೆ. ಹಸಿರೀಕರಣ ಕಡಿಮೆ ಇರುವ ಬಯಲುಸೀಮೆ ಮತ್ತು ಹೈದರಾಬಾದ ಕರ್ನಾಟಕ ಭಾಗಕ್ಕೆ ಹೆಚ್ಚು ಒತ್ತು ಕೊಡಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಅರಣ್ಯ ಪ್ರದೇಶದಲ್ಲಿ “ವನ್ಯಧಾಮ’ ನಿರ್ಮಿಸಲು ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಅನುಮತಿ ನೀಡುವ ಪ್ರಸ್ತಾವನೆ ಬಗ್ಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಸರ್ಕಾರದ ಯಾವುದೇ ತೀರ್ಮಾನವಾಗಿಲ್ಲ. ಏನೇ ತೀರ್ಮಾನ ತೆಗೆದುಕೊಂಡರೂ ಪರಿಸರವಾದಿಗಳು ಜೊತೆಗೆ ಚರ್ಚಿಸಿಯೇ ಮುಂದುವರಿಯುತ್ತೇನೆ. ಈ ಕುರಿತು ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆಯಲಿದ್ದೇನೆ. ಯಾವುದೇ ಕಾರಣಕ್ಕೂ ಅರಣ್ಯ ಭೂಮಿಯನ್ನು ಬಂಡವಾಳಶಾಹಿಗಳಿಗೆ ಬಿಟ್ಟುಕೊಡುವುದಿಲ್ಲ. ಆನೆ-ಮಾನವ ಸಂಘರ್ಷ ಕೊನೆಗಾಣಿಸಲು ಹೆಚ್ಚು ಒತ್ತು ಕೊಡುತ್ತೇನೆ. 15 ವರ್ಷ ಮೇಲ್ಪಟ್ಟ ವಾಹನಗಳನ್ನು ನಿಷ್ಕ್ರಿàಯಗೊಳಿಸಿದರೆ ಸದ್ಯ ನೀಡಲಾಗುತ್ತಿರುವ ಪರಿಹಾರವನ್ನು ದುಪ್ಪಟ್ಟುಗೊಳಿಸಬೇಕು ಎಂಬ ಬೇಡಿಕೆಯಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಂಕರ್ ತಿಳಿಸಿದರು.