Advertisement

ಬೆಳ್ಳಳ್ಳಿ ಕ್ವಾರಿಯಲ್ಲಿ ಬೆಂಕಿ, ಮತ್ತೆ ತ್ಯಾಜ್ಯ ಸಮಸ್ಯೆ

06:35 AM Mar 18, 2019 | |

ಬೆಂಗಳೂರು: ರಾಜಧಾನಿ ಬೆಂಗಳೂರಿನ ತ್ಯಾಜ್ಯ ವಿಲೇವಾರಿಯ ಪ್ರಮುಖ ಮೂಳವಾಗಿರುವ ಬೆಳ್ಳಳ್ಳಿ ಕ್ವಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕಳೆದ ಕೆಲ ದಿನಗಳಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ನಗರದಲ್ಲಿ ಮತ್ತೆ ತ್ಯಾಜ್ಯ ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ.

Advertisement

ಈಗಾಗಲೇ ಪಾಲಿಕೆಗೆ ಆಹ್ವಾನಿಸಿರುವ ವಾರ್ಡ್‌ವಾರು ಟೆಂಡರ್‌ ಪ್ರಕ್ರಿಯೆಯಲ್ಲಿನ ಷರತ್ತುಗಳಿಗೆ ವಿರೋಧ ವ್ಯಕ್ತಪಡಿಸಿದರುವ ಗುತ್ತಿಗೆದಾರರು ಹಲವಾರು ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದ್ದಾರೆ. ಇದೀಗ ತ್ಯಾಜ್ಯ ವಿಲೇವಾರಿಯ ಏಕೈಕ ಮೂಲವಾದ ಬೆಳ್ಳಳ್ಳಿ ಕ್ವಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಂಗ್ರಹಿಸಿರುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವಂತಾಗಿದೆ. 

ನಗರದಲ್ಲಿ ಹೆಚ್ಚುತ್ತಿರುವ ಬಿಸಲಿನ ತಾಪಕ್ಕೆ ಬೆಳ್ಳಳ್ಳಿ ಭೂ ಭರ್ತಿ ಕ್ವಾರಿಯಲ್ಲಿ ಮಿಥೇನ್‌ ಅನಿಲ ಹೊರಬಂದಿದ್ದು, ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಕ್ವಾರಿ ನಿರ್ವಹಣೆ ಮಾಡುವ ಸಿಬ್ಬಂದಿ ಕಳೆದ ನಾಲ್ಕೈದು ದಿನಗಳಿಂದ ಬೆಂಕಿ ನಂದಿಸುವ ಪ್ರಯತ್ನ ನಡೆಸುತ್ತಿದ್ದು, ಶನಿವಾರ ಸ್ವಲ್ಪಮಟ್ಟಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಮತ್ತೆ ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಪಾಲಿಕೆ ಮುಂದಾಗಿದೆ. 

ಇದರೊಂದಿಗೆ ಲಿಂಗದೀರಹಳ್ಳಿ ಹಾಗೂ ಚಿಕ್ಕನಾಗಮಂಗಲ ಕಸ ಸಂಸ್ಕರಣಾ ಘಟಕ ಸ್ಥಗಿತಗೊಂಡಿದ್ದು, ಕನ್ನಳ್ಳಿ ಹಾಗೂ ಸೀಗೇಹಳ್ಳಿಗಳಿಗೆ ನಿಗದಿತ ಪ್ರಮಾಣದಲ್ಲಿ ತ್ಯಾಜ್ಯ ಹೋಗುತ್ತಿಲ್ಲ. ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದ ಕಡೆಗಳಲ್ಲಿ ಸಾರ್ವಜನಿಕರೇ ಬ್ಲಾಕ್‌ಸ್ಪಾರ್ಟ್‌ಗಳನ್ನು ಸೃಷ್ಟಿಸುತ್ತಿರುವುದು ಒಂದೆಡೆಯಾದರೆ, ಪಾಲಿಕೆಯ ಸಿಬ್ಬಂದಿ ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಕ್ವಾರಿಗೆ ತೆಗೆದುಕೊಂಡು ಹೋಗಲಾಗದೆ ರಸ್ತೆಬದಿಗಳಲ್ಲಿ ಸುರಿಯಲಾಗಿದೆ. ಪರಿಣಾಮ ನಗರದಲ್ಲೇ ತ್ಯಾಜ್ಯ ರಾಶಿ ಹೆಚ್ಚುತ್ತಿದೆ.

ಪಾದರಾಯನಪುರ ರೈಲ್ವೆ ಸೇತುವೆಯ ಬಳಿ, ಆನಂದರಾವ್‌ ವೃತ್ತ, ಚಾಮರಾಜಪೇಟೆ, ಕೆ.ಆರ್‌.ಮಾರುಕಟ್ಟೆ, ಜೆಸಿ ರಸ್ತೆ, ಶಿವಾಜಿನಗರ, ಜೆಪಿನಗರ, ರಾಜರಾಜೇಶ್ವರಿ ನಗರ, ಹೆಬ್ಟಾಳ, ಕುರುಬರಹಳ್ಳಿ, ಶಿವನಗರ, ಗುಟ್ಟಹಳ್ಳಿ, ಹನುಮಂತ ನಗರ, ವಿದ್ಯಾಪೀಠ, ಕೆ.ಆರ್‌.ಪುರ, ಕಮರ್ಷಿಯಲ್‌ಸ್ಟ್ರೀಟ್‌, ಹಲಸೂರು ಸೇರಿದಂತೆ ನಗರದ ವಿವಿಧೆಡೆ ರಸ್ತೆಬದಿಯಲ್ಲಿ ಭಾರಿ ಗಾತ್ರದ ತ್ಯಾಜ್ಯ ರಾಶಿ ಕಂಡುಬರುತ್ತಿವೆ. ಕಸಕ್ಕೆ ಬೆಂಕಿ ಹಚ್ಚುವುದೂ ನಡೆಯುತ್ತಿದೆ. 

Advertisement

ನಿರ್ವಹಣೆ ವೆಚ್ಚ ನೀಡಿಲ್ಲ: ಬೆಳ್ಳಳ್ಳಿ ಕ್ವಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೆ, ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಚಿಕ್ಕನಾಗಮಂಗಲ ಘಟಕದ ನಿರ್ವಹಣೆ ವೆಚ್ಚವನ್ನು ಪಾಲಿಕೆಯಿಂದ ಪಾವತಿಸಿಲ್ಲ. ಪರಿಣಾಮ ಲಿಂಗಧೀರನಹಳ್ಳಿ ಹಾಗೂ ಚಿಕ್ಕನಾಗಮಂಗಲ ಘಟಕ ಸ್ಥಗಿತಗೊಳಿಸಲಾಗಿದೆ. ಇದು ಕಸದ ಸಮಸ್ಯೆ ಉಲ್ಬಣಕ್ಕೆ ಕಾರಣವೆಂಬ ಆರೋಪಗಳು ಕೇಳಿಬಂದಿವೆ. 

ಪಾಲಿಕೆಯಿಂದ ಸದ್ಯ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬೆಳ್ಳಳ್ಳಿ ಕ್ವಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾಂಪ್ಯಾಕ್ಟರ್‌ಗಳು ತ್ಯಾಜ್ಯ ವಿಲೇವಾರಿಗೆ ಹೋಗುತ್ತಿಲ್ಲ. ಕ್ವಾರಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು 48 ಗಂಟೆಗಳಲ್ಲಿ ಪರಿಹರಿಸಲಾಗುವುದು.
-ರಂದೀಪ್‌, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) 

ವಿಶೇಷ ಆಯುಕ್ತ ರಂದೀಪ್‌ ಅವರು ತ್ಯಾಜ್ಯ ಘಟಕಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿತು ಆದೇಶಗಳನ್ನು ಮಾಡಬೇಕು. ಆದರೆ, ಸ್ಥಳಕ್ಕೆ ಭೇಟಿ ನೀಡದೆ ಆದೇಶಗಳನ್ನು ಹೊರಡಿಸಿದರೆ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ಹೀಗಾಗಿ ವಾಸ್ತವ ಸ್ಥಿತಿ ಅರಿಯಲು ಅವರ ಘಟಕಗಳಿಗೆ ಭೇಟಿ ನೀಡಬೇಕಾಗಿದೆ. 
-ಬಾಲಸುಬ್ರಮಣ್ಯ, ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ

Advertisement

Udayavani is now on Telegram. Click here to join our channel and stay updated with the latest news.

Next