Advertisement

ನಂಬಿದವರ ವಂಚಿಸುವುದಿಲ್ಲ ಭೂ ತಾಯಿ

12:12 PM Jun 11, 2018 | |

ದಾವಣಗೆರೆ: ಭೂಮಿಯನ್ನು ನಂಬಿ ಬೆವರು ಹರಿಸಿದವರನ್ನು ಭೂಮಿ ತಾಯಿ ಎಂದೆಂದಿಗೂ ವಂಚನೆ ಮಾಡುವುದೇ ಇಲ್ಲ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಲವಾಗಿ ಪ್ರತಿಪಾದಿಸಿದರು.

Advertisement

ಭಾನುವಾರ ದಾವಣಗೆರೆಯ ಸಮಾನ ಮನಸ್ಕರ ಒಕ್ಕೂಟ, ಮೈಕ್ರೋಬಿ ಆಗ್ರೋಟೆಕ್‌, ಕೋಲಾರ್‌ ಆರ್ಗ್ಯಾನಿಕ್ಸ್‌ ಸಂಯುಕ್ತಾಶ್ರಯದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಉಚಿತ ಸಮಗ್ರ ಸುಸ್ಥಿರ ವೈಜ್ಞಾನಿಕ ಸಾವಯವ ಕೃಷಿ… ಕುರಿತಂತೆ ಒಂದು ದಿನದ ಕಾರ್ಯಾಗಾರದ ಸಮಾರೋಪ, ಸಾವಯವ ಕೃಷಿ ತಜ್ಞ ಡಾ| ಕೆ.ಆರ್‌. ಹುಲ್ಲುನಾಚೇಗೌಡ ಅವರಿಗೆ ನಡೆದಾಡುವ ಕೃಷಿ ವಿಶ್ವಕೋಶ… ಬಿರುದು ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾವೆಲ್ಲರೂ ಭೂಮಿಯನ್ನು ಸಂಪೂರ್ಣವಾಗಿ ನಂಬಿ ಬೆವರು ಹರಿಸಿ ದುಡಿಮೆ ಮಾಡಿದಾಗ ಭೂಮಿ ತಾಯಿ ವಂಚನೆ ಮಾಡುವುದೇ ಇಲ್ಲ. ಆದರೆ, ಯಾರು ಸಹ ಭೂಮಿಯನ್ನು ಸಂಪೂರ್ಣವಾಗಿ ನಂಬುವುದೇ
ಇಲ್ಲ ಎಂದು ವಿಷಾದಿಸಿದರು.

ರೈತಾಪಿ ಜನರು ಭೂಮಿಯನ್ನು ಸಂಪೂರ್ಣವಾಗಿ ನಂಬಬೇಕು. ಬೆವರು ಹರಿಸಿ ಸಂತೃಪ್ತ ಜೀವನಕ್ಕೆ ಅಗತ್ಯವಾದಷ್ಟನ್ನು ಬೆಳೆಯಬೇಕು. ಆಗ ಕೃಷಿಯಲ್ಲಿ ನಷ್ಟ ಕಾಣಲಿಕ್ಕೆ ಸಾಧ್ಯವೇ ಇಲ್ಲ. ಆದರೆ, ಅದನ್ನು ಯಾರೂ ಮಾಡುವುದೇ ಇಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬುದನ್ನು ಮೀರುತ್ತಾರೆ. ಒಂದು ಬೆಳೆ ಬೆಳೆಯಲು ಎಷ್ಟು ಖರ್ಚು ಮಾಡಲಾಗಿದೆ ಎಂಬುದರ ದಾಖಲೀಕರಣವೂ ಮುಖ್ಯ. ಬೆಳೆಗೆ ಮಾಡಿದ ಖರ್ಚು ಗೊತ್ತಾಗುತ್ತದೆ. ಪರ್ಯಾಯ ಬೆಳೆಯ ಯೋಚನೆಗೆ ಕಾರಣವಾಗುತ್ತದೆ. ಹಾಗಾಗಿ ಈಗಿನಿಂದ ಎಲ್ಲ ರೈತರು ದಾಖಲೀಕರಣಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು. 

ಈಗಿನ ಕಾಲದಲ್ಲಿ ಯಾರೂ ಸಹ ಕೃಷಿಕರು ಆಗಬೇಕು ಎಂಬುದನ್ನು ಬಯಸುವುದೇ ಇಲ್ಲ. ರೈತರಾಗುವುದೇ ಬೇಡ ಎನ್ನುವರು ಇದ್ದಾರೆ. ಹಳ್ಳಿಯ ಪಟೇಲರ ಮಕ್ಕಳು ದೊಡ್ಡ ದೊಡ್ಡ ನಗರದಲ್ಲಿ ಹಂದಿಗೂಡಿನಂತಹ ಕೊಠಡಿಯಲ್ಲಿ
ಇದ್ದುಕೊಂಡು, ಅಲ್ಲಿಯೇ ಅಡುಗೆ ಮಾಡಿಕೊಂಡು, ಕೆಲಸಕ್ಕೆ ಹೋಗಿ ಬಂದು, ಕೊನೆಗೆ ಅನಾರೋಗ್ಯಕ್ಕೆ ತುತ್ತಾಗಿ, ಮತ್ತೆ ಊರಿಗೆ ಬರುವ ವಾತಾವರಣ ಇದೆ. ಹೊತ್ತು ಬಂದಂತೆ ಕೊಡೆ ಹಿಡಿದು ಬದುಕುವ ಬದಲಿಗೆ ಬದ್ಧತೆಯಿಂದ ಜೀವನ ನಡೆಸಬೇಕು ಎಂದು ಮಾರ್ಮಿಕವಾಗಿ ಎಚ್ಚರಿಸಿದರು.

ಇಂದಿನ ವಾತಾವರಣದಲ್ಲಿ ಮಾತುಗಾರರಿಗೆ ಕೊರತೆಯೇ ಇಲ್ಲ. ಮಾತುಗಳನ್ನು ಕೃತಿಗೆ ತರುವಂತಹವರ ಸಂಖ್ಯೆ ಕಡಿಮೆ ಆಗುತ್ತಿದೆ. ಪ್ರತಿಯೊಬ್ಬರು ಲೆಕ್ಕ ಹಾಕುವುದರಲ್ಲಿ ಭಾರೀ ಪ್ರಾವಿಣ್ಯರು. ಬರೀ ಲೆಕ್ಕ ಹಾಕಿದ ಮಾತ್ರಕ್ಕೆ ಹಣ
ಕೈಗೆ ಬರುವುದಿಲ್ಲ. ಆಸಕ್ತಿ, ಶ್ರದ್ಧೆಯಿಂದ ಕೃಷಿ ಕೆಲಸ ಮಾಡಿದಾಗ ನಾವು ಹಾಕಿರುವ ಲೆಕ್ಕ ಸರಿ ಹೋಗುತ್ತದೆ ಎಂದು ತಿಳಿಸಿದರು. 

Advertisement

ನಮ್ಮ ಮಠ ಹಿಂದಿನಿಂದಲೂ ಕೃಷಿ ಮಾಡಿಕೊಂಡೇ ಬರುತ್ತಿದೆ. ಕೃಷಿಯನ್ನು ಉದ್ಯಮವನ್ನಾಗಿ ಸ್ವೀಕರಿಸಿದೆ. ಹಿರಿಯ ಗುರುಗಳು ಸದಾ ಹೊಲ-ತೋಟದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. 

ಅದು ಏಕೆ ಎಂಬುದು ತಮಗೆ ಈಗ ಗೊತ್ತಾಗುತ್ತಿದೆ. ನಾವು ವರ್ಷಕ್ಕೆ 20 ಲಕ್ಷದಷ್ಟು ತೆಂಗು, 30-35 ಲಕ್ಷದಷ್ಟು ಅಡಕೆ, ಬಾಳೆ ಬೆಳೆಯುತ್ತೇವೆ. ಜೋಳ, ರಾಗಿ ಒಳಗೊಂಡಂತೆ ವೈವಿಧ್ಯಮಯ ಬೆಳೆ ಬೆಳೆಯುತ್ತೇವೆ. ಮುಂದಿನ ದಿನಗಳಲ್ಲಿ 7 ಎಕರೆ ಪ್ರದೇಶದಲ್ಲಿ ಅರಣೀಕರಣ ಮಾಡುವ ಉದ್ದೇಶವೂ ಇದೆ. ಸಾಣೇಹಳ್ಳಿಯಲ್ಲಿ ಸಾವಯವ ಕೃಷಿ ತಜ್ಞ ಡಾ| ಕೆ.ಆರ್‌. ಹುಲ್ಲುನಾಚೇಗೌಡರಿಂದಲೇ ಒಂದು ದಿನದ ಕಾರ್ಯಾಗಾರವನ್ನೂ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಮಕ್ಕಳ ಮದುವೆ, ವಿದ್ಯಾಭ್ಯಾಸಕ್ಕೆ ಹೊಲ-ಗದ್ದೆ ಮಾರುವುದು ಕಂಡು ಬರುತ್ತದೆ. ಈಗ 25 ಲಕ್ಷ ಸಿಗಬಹುದು. ಮುಂದೆ ಅದೇ 25 ಲಕ್ಷ ಕೊಟ್ಟರೂ ಅದೇ ಜಮೀನು ಸಿಕ್ಕುವುದೇ ಇಲ್ಲ. ಏನೇ ಆಗಲಿ ಹೊಲ- ಗದ್ದೆ ಮಾರಾಟ ಮಾಡಬಾರದು ಎಂದು ಸಲಹೆ ನೀಡಿದ ಶ್ರೀಗಳು, ನಮ್ಮ ಮಠದ ಒಂದೇ ಒಂದು ಇಂಚು ಜಮೀನು ಮಾರಾಟ ಮಾಡಿಲ್ಲ ಎಂದು ತಿಳಿಸಿದರು.

ರೈತರಿಂದ ಮಾತ್ರವೇ ಪರಿಸರ ಸಮತೋಲನ ಮಾಡಲಿಕ್ಕೆ ಸಾಧ್ಯ. ಹಾಗಾಗಿ ಹೊಲದ ಬದುಗಳಲ್ಲಿ ವೈವಿಧ್ಯಮಯ ಗಿಡ-ಮರ ಬೆಳೆಯುವಂತಾಗಬೇಕು. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ತಿಳಿಸಿದರು. 

ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಳೆನೀರು ಕೊಯ್ಲು ತಜ್ಞ ಡಾ| ದೇವರಾಜ ರೆಡ್ಡಿ, ಸಾವಯವ ಕೃಷಿ ತಜ್ಞ ಡಾ| ಕೆ.ಆರ್‌. ಹುಲ್ಲುನಾಚೇಗೌಡ, ಸಮಾನ ಮನಸ್ಕರ
ಒಕ್ಕೂಟದ ಕೆ.ಬಿ. ಮಹದೇವಪ್ಪ, ಬಿ.ಸಿ. ವಿಶ್ವನಾಥ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next