ಇಂದು ಮುಗಿಲ್‌ಪೇಟೆ ರಿಲೀಸ್ “ನಾನು ಸಿನಿಮಾದಲ್ಲಿ ಎಲ್ಲವನ್ನೂ ನೋಡಿಕೊಂಡು ಬಂದವನು. ಎಷ್ಟೇ ಕಷ್ಟವಿದ್ದರೂ, ಇಷ್ಟಪಟ್ಟು ಸಿನಿಮಾ ಮಾಡಿದವನು ನಾನು. ನಾವು ಪ್ರೀತಿಯಿಂದ, ಪ್ರಾಮಾಣಿಕವಾಗಿ ಸಿನಿಮಾ ಮಾಡಿದ್ರೆ, ಖಂಡಿತವಾಗಿಯೂ ಸಿನಿಮಾ ನಮ್ಮ ಕೈ ಹಿಡಿಯುತ್ತದೆ. ನಾವು ಮಾಡುವ ಸಿನಿಮಾ ಮೊದಲು ಜನಕ್ಕೆ ಇಷ್ಟವಾಗಬೇಕು. ನನ್ನ ಸಿನಿಮಾಗಳು ಇಷ್ಟವಾದ ಮೇಲೆ ಜನರೇ “ಕ್ರೇಜಿಸ್ಟಾರ್’ ಅಂಥ ಬಿರುದು ಕೊಟ್ಟರು. “ಕ್ರೇಜಿಸ್ಟಾರ್’ ಅಂಥ ಬಿರುದು ಕೊಟ್ಟ ಮೇಲೂ, ಅದೇ ಜನಕ್ಕೆ ಸಿನಿಮಾ ಇಷ್ಟವಾಗದಿದ್ದಾಗ ಸಿನಿಮಾ ಸೋತಿದ್ದೂ ಇದೆ. ಇಲ್ಲಿ ನಮ್ಮ ಕೆಲಸವನ್ನ ನಾವು ಪ್ರಾಮಾಣಿಕವಾಗಿ, ಮೊದಲು ನಮಗೆ ಇಷ್ಟವಾಗುವಂತೆ ಮಾಡಬೇಕು. ಉಳಿದದ್ದು ಜನರಿಗೆ ಬಿಟ್ಟಿದ್ದು…’ – ಇದು ನಟ ಕಂ ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ ಮಾತು
ಅಂದಹಾಗೆ, ರವಿಚಂದ್ರನ್ ಇಂಥದ್ದೊಂದು ಕಿವಿಮಾತು ಹೇಳಿದ್ದು ತಮ್ಮ ಪುತ್ರರಿಗೆ. ಸಾಮಾನ್ಯವಾಗಿ ಯಾವುದೇ ಸ್ಟಾರ್ ಮಕ್ಕಳು ಸಿನಿಮಾರಂಗಕ್ಕೆ ಬರುತ್ತಾರೆ ಅಂದ್ರೆ, ಅವರಿಗೆ ಸಿನಿಮಾರಂಗದಲ್ಲಿ ಗ್ರ್ಯಾಂಡ್ ಎಂಟ್ರಿ, ಬಿಗ್ ಸಪೋರ್ಟ್ ಎಲ್ಲವೂ ಸಿಗುತ್ತದೆ. ಸ್ಟಾರ್ ಮಕ್ಕಳು ಕೂಡ ಜ್ಯೂನಿಯರ್ ಸ್ಟಾರ್ ಆಗಿಯೇ ಸಿನಿಮಾರಂಗಕ್ಕೆ ಪರಿಚಯವಾಗುತ್ತಾರೆ ಎಂಬ ಮಾತಿದೆ. ರವಿಚಂದ್ರನ್ ಪುತ್ರರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾಗುತ್ತಾರೆ ಎಂಬ ಸಮಯದಲ್ಲೂ ಇಂಥದ್ದೇ ಮಾತುಗಳು ಕೇಳಿಬಂದಿದ್ದವು. ಆದರೆ ರವಿಚಂದ್ರನ್ ಎಂದಿಗೂ ಈ ಮಾತನ್ನು ಒಪ್ಪಿದವರಲ್ಲ. ತಂದೆಯ ಹೆಸರು, ಫ್ಯಾಮಿಲಿ ಬ್ಯಾಗ್ರೌಂಡ್ ಯಾವುದೂ ಸಿನಿಮಾದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಇಲ್ಲಿ ಪ್ರತಿಭೆ, ಪರಿಶ್ರಮ, ಪ್ರಾಮಾಣಿಕತೆ ಮತ್ತು ಕೆಲಸದ ಮೇಲೆ ಪ್ರೀತಿ ಇದ್ದರಷ್ಟೇ ಗೆಲ್ಲೋದಕ್ಕೆ ಸಾಧ್ಯ. ನಾವು ಮಾಡುವ ಸಿನಿಮಾ ಮೊದಲು ಪ್ರೇಕ್ಷಕರಿಗೆ ಇಷ್ಟವಾಗಬೇಕು. ಅವರು ಒಪ್ಪಿಕೊಂಡರಷ್ಟೇ ಇಲ್ಲಿ ಸ್ಟಾರ್ ಆಗೋದು ಎಂಬುದು ರವಿಚಂದ್ರನ್ ಅವರ ಬಲವಾದ ನಂಬಿಕೆ. ಹಾಗಾಗಿಯೇ ತಮ್ಮ ಇಬ್ಬರೂ ಪುತ್ರರಿಗೂ ರವಿಚಂದ್ರನ್ ಈ ವಾಸ್ತವವನ್ನು ಅರ್ಥ ಮಾಡಿಸಿದ್ದಾರೆ.
ಇದನ್ನೂ ಓದಿ:ಇಂದು ಮನುರಂಜನ್ ಅಭಿನಯದ ‘ಮುಗಿಲ್‌ಪೇಟೆ’ ರಿಲೀಸ್
ನನ್ನ ಮಕ್ಕಳಿಗೆ “ಕ್ರೇಜಿಸ್ಟಾರ್’ ರವಿಚಂದ್ರನ್ ಮಕ್ಕಳು ಎಂಬ ಕಾರಣಕ್ಕೆ ಇಂಡಸ್ಟ್ರಿಯಲ್ಲಿ ಅವಕಾಶಗಳು ಸಿಗಬಾರದು. ಅವರಲ್ಲಿ ಪ್ರತಿಭೆಯಿದೆ, ಸಿನಿಮಾಕ್ಕಾಗಿ ಪರಿಶ್ರಮ ಹಾಕುತ್ತಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ಸಿಗುವಂತಾಗಬೇಕು. ಅವರು ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಐಡೆಂಟಿಟಿ ಬೆಳೆಸಿಕೊಳ್ಳಬೇಕು. ಅದು ನಿಜವಾದ ಸಾಧನೆ. ಅದೃಷ್ಟದಿಂದ ಬರುವ ಸ್ಟಾರ್‌ಡಮ್ ಗಿಂತ, ತಮ್ಮ ಪ್ರಯತ್ನದ ಮೂಲಕ ಕಷ್ಟಪಟ್ಟು ಸ್ಟಾರ್‌ಡಮ್ ಪಡೆದುಕೊಳ್ಳುವುದು ದೊಡ್ಡ ವಿಷಯ’ ಎನ್ನುವುದು ರವಿಚಂದ್ರನ್ ಮಾತು.
“ನಮ್ಮ ಮನೆಯಲ್ಲಿ ನನ್ನ ತಂದೆ-ತಾಯಿ ಕೊಟ್ಟಷ್ಟೇ ಪ್ರೀತಿಯನ್ನ ಜನ ಕೂಡ ಕೊಟ್ಟಿದ್ದಾರೆ. ನಾನು ಜನರಲ್ಲಿ ಬೇರೇನೂ ಕೇಳ್ಳೋದಿಲ್ಲ, ನೀವು ನನಗೆ ಕೊಟ್ಟ ಪ್ರೀತಿಯಲ್ಲಿ ಸ್ವಲ್ಪದನ್ನ ನನ್ನ ಮಕ್ಕಳಿಗೂ ಕೊಡಿ. ಸಿನಿಮಾ ಚೆನ್ನಾಗಿದ್ರೆ ಖಂಡಿತಾ ನೀವು ನೋಡ್ತೀರಾ ಅನ್ನೋದು ನನ್ನ ನಂಬಿಕೆ. ನಾನು ಏನೇ ಸಿನಿಮಾ ಮಾಡಿದ್ರು ಅದು ಜನರಿಗೋಸ್ಕರ ಮಾಡಿದ್ದು. ನಾನು “ಕ್ರೇಜಿಸ್ಟಾರ್’ ಆಗಿ ಮಾಡಿದ “ಶಾಂತಿ ಕ್ರಾಂತಿ’ ಸಿನಿಮಾವನ್ನೂ ಸೋಲಿಸಿದ್ದೀರಿ. ಜನ ಕೊಟ್ಟಿರುವ ಸೋಲನ್ನೂ ಒಪ್ಪಿಕೊಂಡಿದ್ದೇನೆ, ಗೆಲುವನ್ನೂ ಒಪ್ಪಿಕೊಂಡಿದ್ದೇನೆ. ಜನಕ್ಕೆ ಸಿನಿಮಾ ಇಷ್ಟವಾದ್ರೆ ಮಾತ್ರ ನೋಡೋದು ಅನ್ನೋದು ನನಗೆ ಗೊತ್ತಿದೆ. ನನ್ನ ಮಕ್ಕಳ ಸಿನಿಮಾ ವಿಷಯದಲ್ಲೂ ಅದೇ. ಅವರು “ಕ್ರೇಜಿಸ್ಟಾರ್’ ರವಿಚಂದ್ರನ್ ಮಕ್ಕಳು ಅಂಥ ಅವರ ಸಿನಿಮಾ ನೋಡಬೇಡಿ. ನಿಮಗೆ ಮೆಚ್ಚುಗೆಯಾಗುವಂಥ ಸಿನಿಮಾವಾಗಿದ್ದರೆ, ನೋಡಿ ಅವರನ್ನು ಬೆಳೆಸಿ. ಇದಿಷ್ಟೇ ನಾನು ಜನರಲ್ಲಿ ಕೇಳಿಕೊಳ್ಳೋದು’ ಎನ್ನುವುದು ರವಿಚಂದ್ರನ್ ಮಾತು.
ಇದನ್ನೂ ಓದಿ: ಸಿನಿಮಾದ ಫೀಲ್ ಸದಾ ಕಾಡಬೇಕು: ರಾಜ್ ಶೆಟ್ಟಿ ಡ್ರೀಮ್ ಪ್ರಾಜೆಕ್ಟ್
ಅದೃಷ್ಟದ ದಾರಿಯಲ್ಲಿ ನಡೆಯಬೇಡಿ… “ಸಿನಿಮಾಕ್ಕೆ ಬಂದ ಮೇಲೆ ಕಷ್ಟಪಡಲೇಬೇಕು ಅದು ಡ್ಯೂಟಿ. ಅದನ್ನ ಕಷ್ಟಪಟ್ಟೆ ಅಂಥ ಹೇಳಬಾರದು. ಇಷ್ಟಪಟ್ಟೆ ಅಂಥ ಹೇಳಬೇಕ ಶ್ರದ್ಧೆ, ಭಕ್ತಿಯಿಂದ ಪರಿಶ್ರಮ ಹಾಕಿದ್ರೆನೇ ಅಲ್ಲಿ ಏನಾದ್ರೂ ಮಾಡೋದಕ್ಕೆ ಆಗೋದು. ನನ್ನ ಮಕ್ಕಳಿಗೆ ನಾನು ಯಾವಾಗಲೂ ಹೇಳ್ಳೋದು ಇದನ್ನೇ. ಅದೃಷ್ಟದ ದಾರಿ ಬೇಡ. ಈ ವಯಸ್ಸಲ್ಲಿ ನೀವು ಕಷ್ಟಪಟ್ಟರೆ ಮುಂದಿನ ಜರ್ನಿ ಸುಲಭವಾಗುತ್ತೆ. ನಾವೆಲ್ಲ ಈ ಕಷ್ಟ, ನಷ್ಟಗಳನ್ನ ದಾಟಿ ಬಂದವರು. ಸಿನಿಮಾ ಜೀವನದಲ್ಲಿ ಎಲ್ಲವನ್ನೂ ನೋಡಬೇಕು. ಅದೃಷ್ಟದ ದಾರಿಯಲ್ಲಿ ನಡೆಯುವುದು ಬೇಡ. ಆಗಲೇ ಬೆಳೆಯೋದಕ್ಕೆ ಸಾಧ್ಯವಾಗೋದು. ನೀವು ಏನೇ ಮಾಡಿದ್ರೂ, ಕೊನೆಗೆ ಎಷ್ಟರ ಮಟ್ಟಿಗೆ ಜನಕ್ಕೆ ಇಷ್ಟವಾಗುವಂಥ ಸಿನಿಮಾ ಮಾಡ್ತೀರ ಅನ್ನೋದಷ್ಟೇ ಇಲ್ಲಿ ಮುಖ್ಯವಾಗುತ್ತದೆ’ ಎನ್ನುವುದು ತಮ್ಮ ಮಕ್ಕಳಿಗೆ ರವಿಚಂದ್ರನ್ ನೀಡುವ ಟಿಪ್ಸ್.
ನಾನು ವೀಕ್ ಅನಿಸಿದ ದಿನವದು…
“ನಾನು ಇಂಡಸ್ಟ್ರಿಗೆ ಬಂದು ಸಾಕಷ್ಟು ವರ್ಷವಾಯ್ತು, ಸಾಕಷ್ಟು ನೋವು ಅನುಭವಿಸಿದ್ದೇನೆ. ಸಾಕಷ್ಟು ಕಷ್ಟಗಳನ್ನು ಎದುರಿಸಿಕೊಂಡು ಬಂದಿದ್ದೇನೆ. ಆದ್ರೆ ಯಾವತ್ತಿಗೂ ನನಗೆ ನಾನು ವೀಕ್ ಅಂಥ ಅನಿಸಿಯೇ ಇರಲಿಲ್ಲ. ಆದ್ರೆ ಫಸ್ಟ್‌ಟೈಮ್ ನಾನು ವೀಕ್ ಅಂಥ ಅನಿಸಿದ್ದು, ಅಪ್ಪು (ಪುನೀತ್ ರಾಜಕುಮಾರ್) ಅವರಿಗೆ ಸೀರಿಯಸ್ ಆಗಿದೆ ಅಂಥ ಗೊತ್ತಾಗಿ, ಅವರನ್ನ ವಿಕ್ರಂ ಆಸ್ಪತ್ರೆಗೆ ನೋಡಲು ಹೋಗುತ್ತಿದ್ದಾಗ. ಆವತ್ತು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಾನು ಡಬ್ಬಿಂಗ್‌ನಲ್ಲಿದ್ದೆ. ಒಂದು ಕಡೆ ನಮ್ಮ ತಾಯಿಗೆ ಹುಷಾರಿಲ್ಲ ಐಸಿಯುಗೆ ಅಡ್ಮಿಟ್ ಮಾಡಬೇಕು ಅಂತ ಪೋನ್ ಬರುತ್ತೆ. ಇನ್ನೊಂದು ಕಡೆ ಅಪ್ಪು ಆಸ್ಪತ್ರೆ ಸೇರಿದ್ದಾರೆ ಅಂತ ಪೋನ್ ಬರುತ್ತೆ. ಆಗ ನನಗೆ ಏನ್ ಮಾಡಬೇಕು ಅಂಥ ಗೊತ್ತಾಗ್ಲಿಲ್ಲ. ಕೂಡಲೇ ನನ್ನ ಹೆಂಡತಿಗೆ ಪೋನ್ ಮಾಡಿ, ಅಮ್ಮನ್ನ ನೋಡ್ಕೊ ಅಂತ ಹೇಳಿ, ನಾನು ವಿಕ್ರಂ ಆಸ್ಪತ್ರೆಗೆ ಹೋದೆ. ಆ ದಿನ ನಿಜಕ್ಕೂ ಫಸ್ಟ್ ಟೈಮ್ ನನಗೆ ನಾನು ತುಂಬ ವೀಕ್ ಅಂಥ ಅನಿಸಿತು.
ಜಿ.ಎಸ್.ಕಾರ್ತಿಕ ಸುಧನ್