ಬೆಳಗಾವಿ: ಹೊಸ ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳ ಪರಾರಿ ಹಿನ್ನೆಲೆಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಸಿಐಡಿ ಅ ಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇನ್ನೊಂದೆಡೆ ಬಾಲಕ ಸೇರಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ನಗರಕ್ಕೆ ಗುರುವಾರ ಆಗಮಿಸಿದ್ದ ಸಿಐಡಿ ಎಡಿಜಿಪಿ ಬಿಜಯ್ ಕುಮಾರ ಸಿಂಗ್ ಅವರು ಮಹಾನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ, ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹ, ಬೆಳಗಾವಿ ಗ್ರಾಮೀಣ ಎಸಿಪಿ ಎಸ್.ವಿ. ಗಿರೀಶ ಅವರಿಂದ ಮಾಹಿತಿ ಸಂಗ್ರಹಿಸಿದರು.
ಈ ಪ್ರಕರಣದ ಆರೋಪಿಗಳ ಹಿನ್ನೆಲೆ, ಘಟನೆ ನಡೆದ ಸ್ಥಳಕ್ಕೆ ಬೀಟ್ ಪೊಲೀಸರು ಎಷ್ಟು ಸಮಯಕ್ಕೆ ಹಾಜರಾಗಿದ್ದರು. ಕಾಕತಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ವಿಷಯ ತಿಳಿದರೂ ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರಿದ್ದು, ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪೊಲೀಸರನ್ನು ಆರೋಪಿಗಳು ಬೆದರಿಸಿದ್ದಾರೆ ಎಂಬ ವರದಿಗಳು ಬಿತ್ತರವಾಗಿದ್ದರ ಮಾಹಿತಿ ದಾಖಲಿಸಿದ್ದಾರೆಂದು ಹೇಳಲಾಗಿದೆ.
ಸಿಐಡಿ ಎಸ್‌ಪಿಗಳಾದ ಪೃಥ್ವಿಕುಮಾರ, ರಶ್ಮಿ, ಡಿವೈಎಸ್‌ಪಿ ಅಂಜುಮಾಲಾ ಅವರೊಂದಿಗೆ ಎಡಿಜಿಪಿ ಸಭೆ ನಡೆಸಿದ್ದು, ತನಿಖೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದರ ಮಾಹಿತಿ ಪಡೆದರು. ಪ್ರಕರಣದಲ್ಲಿ ಎಷ್ಟು ಆರೋಪಿಗಳ ಬಂಧನವಾಗಿದೆ ಎಂಬ ಮಾಹಿತಿ ಪಡೆದರು. ಆರೋಪಿಗಳನ್ನು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಬೇಕೆ ಎಂಬ ಬಗ್ಗೆಯೂ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.
ಪೊಲೀಸ್ ಭದ್ರತೆ: ಇನ್ನೊಂದೆಡೆ ಪ್ರೀತಿಸಿ ಓಡಿಹೋಗಿದ್ದ ಪ್ರೇಮಿಗಳು ಪೊಲೀಸರ ರಕ್ಷಣೆಯಲ್ಲೇ ಇದ್ದಾರೆ. ಗ್ರಾಮದಲ್ಲಿ ತಾಯಿಯ ಮೇಲೆ ಹಲ್ಲೆ ಆಗಿರುವುದಕ್ಕೆ ತೀವ್ರ ನೊಂದಿದ್ದ ಯುವಕ ಮೂರ್‍ನಾಲ್ಕು ದಿನಗಳ ಬಳಿಕ ಪೊಲೀಸರಿಗೆ ಶರಣಾಗಿದ್ದ. ಸದ್ಯ ಈ ಜೋಡಿಗಳಿಗೆ ಪೊಲೀಸ್ ಭದ್ರತೆ ಒದಗಿಸಿದೆ. ಬೆಳಗಾವಿಯಿಂದ ಅನತಿ ದೂರದಲ್ಲೇ ಗೌಪ್ಯ ಸ್ಥಳದಲ್ಲಿ ಅವರನ್ನು ಇರಿಸಲಾಗಿದ್ದು, ಯಾವುದೇ ಸಮಸ್ಯೆ ಆಗದಂತೆ ಪೊಲೀಸರು ಕಣ್ಗಾವಲು ಹಾಕಿದ್ದಾರೆಂದು ತಿಳಿದುಬಂದಿದೆ.
ಹೈಕೋರ್ಟ್ ಮೆಚ್ಚುಗೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್‌ಗೆ ಬೆಳಗಾವಿ ಪೊಲೀಸ್ ಕಮಿಷನರ್ ಎಸ್.ಎನ್. ಸಿದ್ದರಾಮಪ್ಪ ಮಾಹಿತಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಹೈಕೋರ್ಟ್, ಪೊಲೀಸರ ತನಿಖೆಗೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಮಹಿಳೆಯನ್ನು ರಕ್ಷಣೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಪೊಲೀಸ್ ಕಮಿಷನರ್ ಸಿದ್ದರಾಮಪ್ಪ ಉದಯವಾಣಿ’ಗೆ ತಿಳಿಸಿದ್ದಾರೆ.
ಬಂಧಿತರ ಸಂಖ್ಯೆ 13ಕ್ಕೆ ಏರಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಘಟನೆ ನಡೆದ ಕೆಲ ಗಂಟೆಯಲ್ಲಿಯೇ ಏಳು ಜನ ಆರೋಪಿಗಳನ್ನು ಬಂಧಿಸಿದ್ದರು. ಮರುದಿನವೇ ಮತ್ತೂಬ್ಬ ಆರೋಪಿಯನ್ನು ಸೆರೆ ಹಿಡಿಯಲಾಗಿತ್ತು. ನಂತರದಲ್ಲಿ ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಈಗ ನೆರೆಯ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಬಾಲಕ ಹಾಗೂ ಸಂತೋಷ ಬಸಪ್ಪ ನಾಯಕ (19) ಎಂಬಾತನನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 13ಕ್ಕೇರಿದೆ. ಅಲ್ಲದೇ ಎಲ್ಲ ಆರೋಪಿಗಳ ಬಂಧನವಾದಂತಾಗಿದೆ.