Advertisement

ಬೆಳಗಾವಿ ಮಹಾರಾಷ್ಟ್ರಕ್ಕೆ: ಡಿಸಿಎಂ ಅಜಿತ್ ಪವಾರ್ ವಿರುದ್ಧ ಕನ್ನಡಿಗರ ಆಕ್ರೋಶ

06:42 PM May 01, 2022 | Team Udayavani |

ಬೆಂಗಳೂರು : ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ನಮ್ಮ ಸರಕಾರದ ಬೆಂಬಲವಿದೆ ಎಂದು‌ ಪುಣೆಯಲ್ಲಿ ಮಹಾರಾಷ್ಟ ಉಪಮುಖ್ಯಮಂತ್ರಿ , ಎನ್ ಸಿಪಿ ನಾಯಕ ಅಜಿತ್ ಪವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಕನ್ನಡ ಪರ ಸಂಘಟನೆಗಳು ಸೇರಿದಂತೆ ರಾಜ್ಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Advertisement

62 ನೇ ಮಹಾರಾಷ್ಟ್ರ ಸಂಸ್ಥಾಪನಾ ದಿನದಂದು ಪವಾರ್ , ಬೆಳಗಾವಿ, ಕಾರವಾರ , ನಿಪ್ಪಾಣಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹೋರಾಟ ನಡೆಸಲಾಗುತ್ತಿದೆ. ಅವರೊಂದಿಗೆ ನಾವಿದ್ದೇವೆ ಎಂದು ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಸಿಲುಕಿದ್ದಾರೆ. ಹಲವು ಕನ್ನಡ ಪರ ಹೋರಾಟಗಾರರರು ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕುಮಾರಸ್ವಾಮಿ ಕಿಡಿ

”ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ. ಹಿಂದೆ; ಕರ್ನಾಟಕ & ಕನ್ನಡಿಗರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದ ಅವರು, ಮತ್ತೊಮ್ಮೆ  ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಖಂಡನೀಯ” ಎಂದು ಟ್ವೀಟ್ ಮಾಡಿದ್ದಾರೆ.

”ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ನಮ್ಮ ಸರಕಾರದ ಬೆಂಬಲವಿದೆ ಎಂದು‌ ಪುಣೆಯಲ್ಲಿ ಅವರಿಂದು ʼಅಪರಿಪಕ್ವʼ ಹೇಳಿಕೆ ನೀಡಿದ್ದಾರೆ.‌ ಹಾಗೆ ನೋಡಿದರೆ, ಕನ್ನಡಿಗರೇ ಹೆಚ್ಚಿರುವ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೂ ಸೇರ್ಪಡೆಯಾಗಿವೆ ಎಂಬುದನ್ನು ಪವಾರ್‌ ಮರೆಯಬಾರದು” ಎಂದು ಟ್ವೀಟ್ ನಲ್ಲಿ ಸೇರಿಸಿದ್ದಾರೆ.

Advertisement

”1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. 1950ರಲ್ಲಿ ಭಾರತ ಗಣರಾಜ್ಯವಾಗಿ ಅವತರಿಸಿತು. ಅದಾದ ಮೇಲೆ ಭಾಷಾವಾರು ಪ್ರಾಂತ್ಯಗಳು ರಾಜ್ಯಗಳಾದವು. ಸ್ವಾತಂತ್ರ್ಯದ ʼಅಮೃತ ಮಹೋತ್ಸವʼ ಈ ಕಾಲದಲ್ಲೂ ಅಜಿತ್‌ ಪವಾರ್‌ ಇನ್ನೂ ಗಡಿ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದರೆ, ಅವರ ಮಿದುಳು ಹಿಮ್ಮುಖವಾಗಿ ಚಲಿಸುತ್ತಿರಬೇಕಷ್ಟೇ” ಎಂದು ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಕಿತಾಪತಿ ಕಾರಣ

”2006ರಲ್ಲಿ ಕೇಂದ್ರದ ಯುಪಿಎ ಸರಕಾರದಲ್ಲಿ ಗೃಹ ಸಚಿವರಾಗಿದ್ದ ತಮ್ಮದೇ ರಾಜ್ಯದ ನಾಯಕರನ್ನು ʼಕೀಲಿಕೈʼ ಮಾಡಿಕೊಂಡು ಇದೇ ಅಜಿತ್ ಪವಾರ್ʼರಂಥ ನಾಯಕರು ನಡೆಸಿದ ಕಿತಾಪತಿ ಕಾರಣಕ್ಕೆ, ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾನು, ಅವರೆಲ್ಲರಿಗೂ ಸಡ್ಡು ಹೊಡೆದು ಬೆಳಗಾವಿಯಲ್ಲಿ ʼಸುವರ್ಣ ವಿಧಾನಸೌಧʼ ನಿರ್ಮಿಸುವ ಐತಿಹಾಸಿಕ ನಿರ್ಧಾರ ಕೈಗೊಂಡೆ” ಎಂದು ಇನ್ನೊಂದು ಟ್ವೀಟ್ ನಲ್ಲಿ ಕುಮಾರಸ್ವಾಮಿ ಬರೆದಿದ್ದಾರೆ.

”ಬೆಳಗಾವಿ ಬಗ್ಗೆ ಬೇಳೆ ಬೇಯಿಸಿಕೊಳ್ಳುವ ʼಒಡಕು ಪ್ರವೃತ್ತಿʼಯನ್ನು ಮರಾಠಿ ನಾಯಕರು ಬಿಡಬೇಕು. ಇಲ್ಲವಾದರೆ, ದೇಶದ ಉದ್ದಗಲಕ್ಕೂ ಈಗಲೂ ಬೂದಿಮುಚ್ಚಿದ ಕೆಂಡದಂತಿರುವ ಇಂಥ ಸೂಕ್ಷ್ಮ ವಿಷಯಗಳು ಮುಂಚೂಣಿಗೆ ಬಂದು ದೇಶವೇ ಛಿದ್ರವಾಗುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಂಡು, ಕೇಂದ್ರವು ಇಂಥ ʼಆಕ್ರಮಣಶೀಲʼ ಮನಃಸ್ಥಿತಿಯುಳ್ಳವರ ಕಿವಿ ಹಿಂಡಬೇಕು” ಎಂದು ಹೆಚ್ ಡಿಕೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next