Advertisement

ಬೆಳಗಾವಿಯಲ್ಲಿ ಕೆನ್ನೆ ಸವರಿದ್ದು ಬೆಂಗಳೂರಿನಲ್ಲಿ ಫಲ ಕೊಟ್ಟಿತು!

03:48 PM Sep 19, 2018 | Team Udayavani |

ಬೆಳಗಾವಿ: ಕಳೆದ ಎರಡು ವಾರಗಳಿಂದ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಆತಂಕ ಉಂಟುಮಾಡಿದ್ದ ಜಾರಕಿಹೊಳಿ ಸಹೋದರರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತುಗಳಿಂದ ತಕ್ಷಣಕ್ಕೆ ಸಮಾಧಾನಗೊಂಡಂತೆ ಕಂಡುಬಂದಿದ್ದಾರೆ. ಕುಮಾರಸ್ವಾಮಿ ಅವರ ಈ ಯಶಸ್ವಿ ಸಂಧಾನಕ್ಕೆ ನಾಲ್ಕು ದಿನಗಳ ಹಿಂದಿನ ಬೆಳಗಾವಿಯ ಭೆಟ್ಟಿ ಮುಖ್ಯ ಕಾರಣ ಎಂದರೂ ತಪ್ಪಿಲ್ಲ. ತಮ್ಮ ನಿಗದಿತ ಕಾರ್ಯಕ್ರಮಗಳ ಮಧ್ಯೆಯೇ ಸಿಎಂ ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ಮಾಡಿದ್ದು ಬಿಕ್ಕಟ್ಟಿಗೆ ತೇಪೆ ಹಾಕುವಲ್ಲಿ ಅನುಕೂಲವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಆದರೆ ಬೆಳಗಾವಿ ತಾಲೂಕಿನ ಪಿಎಲ್‌ಡಿ ಬ್ಯಾಂಕಿನ ಚುನಾವಣೆ ನೆಪದಲ್ಲಿ ಜಿಲ್ಲೆಯ ರಾಜಕಾರಣದ ಮೇಲೆ ಹಿಡಿತ ಹಾಗೂ ಅಧಿಕಾರಿಗಳ ವರ್ಗಾವಣೆ ವಿಷಯವನ್ನೇ ಮುಖ್ಯ ದಾಳವನ್ನಾಗಿ ಮಾಡಿಕೊಂಡು ಸಮ್ಮಿಶ್ರ ಸರಕಾರದ ನಿದ್ದೆಹಾರುವಂತೆ ಮಾಡಿದ ಜಾರಕಿಹೊಳಿ ಸಹೋದರರ ನಡೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಜಿಲ್ಲೆಯ ಅಧಿಕಾರಿಗಳ ವರ್ಗಾವಣೆಗಾಗಿ ಸಮ್ಮಿಶ್ರ ಸರಕಾರವನ್ನೇ ಉರುಳಿಸುವ ಪ್ರಯತ್ನಕ್ಕೆ ಕೈಹಾಕಿದ್ದು ಸರಿಯಲ್ಲ. ಇದೇ ವಿಷಯದಲ್ಲಿ ಜಾರಕಿಹೊಳಿ ಸಹೋದರರು ಸರಕಾರ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಒಂದು ರೀತಿಯ ಬ್ಲಾಕ್‌ಮೇಲ್‌ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಕೆನ್ನೆ ಸವರಿದ್ದರ ಫಲ: ಕುಮಾರಸ್ವಾಮಿ ಬೆಳಗಾವಿ ಭೇಟಿ ಸಂದರ್ಭ ಸಚಿವ ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ಅವರ ಅಸಮಾಧಾನ ಸಾಕಷ್ಟು ಬಿಸಿ ಬಿಸಿ ಸುದ್ದಿಗೆ ಕಾರಣವಾಗಿತ್ತು. ರಮೇಶ ಜಾರಕಿಹೊಳಿ ಮುಖ್ಯಮಂತ್ರಿಗಳ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸಲು ಬಂದಿದ್ದ ರಮೇಶ ಜಾರಕಿಹೊಳಿ ಅವರನ್ನು ಆತ್ಮೀಯವಾಗಿ ಮಾತನಾಡಿಸಿದ್ದ ಕುಮಾರಸ್ವಾಮಿ ಕೆನ್ನೆ ಸವರಿ ಪ್ರೀತಿ ತೋರಿಸಿದ್ದರು. ಇದು ಈಗ ಬೆಂಗಳೂರಿನಲ್ಲಿ ಫಲ ಕೊಟ್ಟಿದೆ. ಪರಿಣಾಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಆಗದ ಸಂಧಾನ ಮುಖ್ಯಮಂತ್ರಿಗಳ ಜೊತೆ ಯಶಸ್ವಿಯಾಗಿ ನಡೆದಿದೆ. ಇನ್ನೊಂದು ಕಡೆ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ಜೊತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸತೀಶ ಜಾರಕಿಹೊಳಿ ಆಗಲೇ ಸಂಧಾನಕ್ಕೆ ವೇದಿಕೆ ಸಿದ್ಧಪಡಿಸಿದ್ದರು. ಈಗ ಮಾತುಕತೆಯ ಮೂಲಕ ಎಲ್ಲ ಬಗೆಹರಿದಿದೆ ಎಂಂಬುದು ಕಾಂಗ್ರೆಸ್‌ ಮುಖಂಡರ ಹೇಳಿಕೆ.

ಮೂಲತಃ ಜನತಾ ಪರಿವಾರದ ಸತೀಶ ಜಾರಕಿಹೊಳಿ ಅವರೊಂದಿಗೆ ಕುಮಾರಸ್ವಾಮಿಗೆ ಒಳ್ಳೆಯ ನಂಟಿದೆ. ಕಳೆದ ಚುನಾವಣೆಯಲ್ಲಿ ರಾಜ್ಯದ ಕೆಲವೆಡೆ ಸತೀಶ ಹೇಳಿದಂತೆಯೇ ಜೆಡಿಎಸ್‌ ಟಿಕೆಟ್‌ ನೀಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಅದೇ ಉತ್ತಮ ಬಾಂಧವ್ಯವನ್ನು ಉಪಯೋಗಿಸಿ ಕೊಂಡ ಕುಮಾರಸ್ವಾಮಿ ಭಿನ್ನಮತವನ್ನು ಕೊಂಚಮಟ್ಟಿಗೆ ಕಡಿಮೆಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಶಮನ ತಾತ್ಕಾಲಿಕವೇ..?: ಈಗ ನಡೆದ ಸಂಧಾನದಂತೆ ಮುಖ್ಯಮಂತ್ರಿಗಳು ಜಾರಕಿಹೊಳಿ ಸಹೋದರರ ಬೇಡಿಕೆಯಂತೆ ಅಧಿಕಾರಿಗಳ ವರ್ಗಾವಣೆ ಮಾಡಬಹುದು. ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬಹುದು. ಆದರೆ ಬೆಳಗಾವಿ ಜಿಲ್ಲೆಯ ರಾಜಕೀಯ ಸಂಘರ್ಷ ಇಷ್ಟಕ್ಕೆ ಸೀಮಿತವಾಗಲಿದೆಯೇ. ಜಾರಕಿಹೊಳಿ ಸಹೋದರರು ಪ್ರಾಬಲ್ಯ ಸಾಧಿಸಲು ಬೆಳಗಾವಿ ಗ್ರಾಮೀಣ ಶಾಸಕರು ಸುಮ್ಮನಿರುವರೇ ಎಂಬ ಅನುಮಾನ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಾಡುತ್ತಿದೆ.

ಕಾಂಗ್ರೆಸ್‌ದಿಂದ ಸಚಿವರು ಯಾರು ಆಗಬೇಕು ಎಂಬುದನ್ನು ನಿರ್ಧರಿಸುವುದು ಕಾಂಗ್ರೆಸ್‌ ವರಿಷ್ಠರೇ ಹೊರತು ಕುಮಾರಸ್ವಾಮಿ ಅಲ್ಲ. ಇಂತಹ ಸ್ಥಿತಿಯಲ್ಲಿ ಕುಮಾರಸ್ವಾಮಿ ಹಾಗೂ ಜಾರಕಿಹೊಳಿ ಸಹೋದರರು ಕುಳಿತು ಈ ಬಿಕ್ಕಟ್ಟನ್ನು ಬಗೆಹರಿಸಲು ಸಾಧ್ಯವೇ ಎಂಬುದು ಕಾಂಗ್ರೆಸ್‌ ಮುಖಂಡರ ಪ್ರಶ್ನೆ. ಹೀಗಾಗಿ ಈಗಿನ ಬಿಕ್ಕಟ್ಟಿಗೆ ತಾತ್ಕಾಲಿಕ ಶಮನ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next