Advertisement

ಸಹಕಾರಿಯಲ್ಲಿ ಮುಂಚೂಣಿ ಸಾಧಿಸಿದ ಬೆಳಗಾವಿ

12:42 PM Nov 15, 2019 | Suhan S |

ಬೆಳಗಾವಿ: ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಗಡಿನಾಡು ಬೆಳಗಾವಿಗೆ ವಿಶಿಷ್ಠ ಸ್ಥಾನ. ರಾಜ್ಯಕ್ಕೆ ಮಾದರಿಯಾಗಿರುವ ಸಹಕಾರಿ ಸಂಸ್ಥೆಗಳನ್ನು ಹೊಂದಿ ಮುಂಚೂಣಿಯಲ್ಲಿರುವ ಜಿಲ್ಲೆ. 1959 ರ ಕಾಯ್ದೆಯಡಿ 4500 ಕ್ಕೂ ಅಧಿಕ ಹಾಗೂ ಸೌಹಾರ್ದ ಸಹಕಾರಿ ಕಾಯ್ದೆಯಡಿ 1200ಕ್ಕೂ ಹೆಚ್ಚು ಸೇರಿದಂತೆ ಒಟ್ಟು 5500 ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

Advertisement

1904 ರಲ್ಲಿ ಪ್ರಥಮ ಸಹಕಾರ ಸಂಘಗಳ ಕಾಯ್ದೆ ಜಾರಿಯಾದಾಗಲೇ ಜಿಲ್ಲೆಯಲ್ಲಿ ಸಹಕಾರ ಚಳವಳಿಯ ಜನ್ಮವಾಯಿತು. ಅದರ ವ್ಯಾಪ್ತಿ ಕೇವಲ ಕೃಷಿ ಸಾಲ ನೀಡಲು ಸೀಮಿತವಾಗಿತ್ತು. 1905 ರಲ್ಲಿ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಂಘ ಸ್ಥಾಪನೆಯಾಯಿತು. ಮುಂದೆ 1912 ರ ಸಹಕಾರ ಸಂಘಗಳ ಕಾಯಿದೆಯೂ ಕೃಷಿಯೇತರ ಸಾಲ ನೀಡುವ ಹಾಗೂ ಇತರ ಸಹಕಾರಿ ಸಂಘಗಳ ಸ್ಥಾಪನೆಗೆ ಅವಕಾಶ ನೀಡಿದ್ದರಿಂದ ಜಿಲ್ಲೆಯ ಸಹಕಾರಿ ಚಳವಳಿ ಇನ್ನಷ್ಟು ಚುರುಕುಗೊಂಡಿತು.

1918 ರಲ್ಲಿ ಜಿಲ್ಲೆಯ ಮಾತೃಸಂಸ್ಥೆಯಾಗಿ ಸ್ಥಾಪನೆಗೊಂಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಜಿಲ್ಲೆಯಲ್ಲಿ ಸಹಕಾರ ಆಂದೋಲನವು ಪರಿಣಾಮಕಾರಿಯಾಗಿ ಸಾಗಲು ಎಲ್ಲ ಸಹಕಾರ ಸಂಘಗಳಿಗೆ ಸಾಲಸೌಲಭ್ಯ ನೀಡಿ ನೆರವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದರೂ ಮೊದಲಿನಂತೆ ಸದೃಢತೆ ಈಗ ಕಾಣುತ್ತಿಲ್ಲ. ಹತ್ತಾರು ಸಮಸ್ಯೆಗಳು ಈ ಕ್ಷೇತ್ರವನ್ನು ಕಾಡುತ್ತಿವೆ. ಈಗಿನ ಡಿಜಿಟಲ್‌ ಯುಗದಲ್ಲಿ ಆರ್ಥಿಕ ಹೊರೆ ಹೆಚ್ಚಾಗುತ್ತಿವೆ. ಸರಕಾರದ ಸಾಲಮನ್ನಾ ಯೋಜನೆಗಳು ಸಹಕಾರ ಸಂಘಗಳು ಮೇಲೇಳದಂತೆ ಮಾಡಿವೆ. ಅದರಲ್ಲೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗಿಂತ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗಳ ಸ್ಥಿತಿ ಬಹಳ ಶೋಚನೀಯವಾಗಿವೆ. ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಈ ಕ್ರೆಡಿಟ್‌ ಸೊಸೈಟಿಗಳು ಸಾಲದ ಮೇಲೆ ಸಾಲ ಕೊಡುತ್ತವೆ. ಆದರೆ ಅದರ ಮರುಪಾವತಿ ಬಹಳ ಕಷ್ಟವಾದ ನಂತರ ಈ ಸೊಸೈಟಿಗಳು ಸಂಕಷ್ಟಕ್ಕೆ ಸಿಲುಕುತ್ತಿವೆ.

ಇದಕ್ಕೆ ಸರಕಾರವೇ ಒಂದು ಸದೃಢ ಕಾನೂನು ರಚಿಸಬೇಕು ಎಂಬುದು ಸಹಕಾರಿ ಮುಖಂಡರ ಅಭಿಪ್ರಾಯ. ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು, ಎಪಿಎಂಸಿ ಪಿಎಲ್‌ಡಿ ಬ್ಯಾಂಕ್‌ ಕ್ಷೇತ್ರಗಳಲ್ಲಿ ಸಮಸ್ಯೆ ಇಲ್ಲ. ಒಳ್ಳೆಯ ವ್ಯವಸ್ಥಿತ ವಾತಾವರಣ ಇದೆ. ಆದರೆ ಸೌಹಾರ್ದ ಸೊಸೈಟಿಗಳಲ್ಲಿ ಇದು ಕಾಣುತ್ತಿಲ್ಲ. ಸಹಕಾರಿ ಹೆಸರಿನಲ್ಲಿ ಬ್ಯಾಂಕ್‌ಗಳನ್ನು ಆರಂಭ ಮಾಡಿರುವ ವ್ಯಕ್ತಿಗಳಿಂದ ಜನರಿಗೆ ಸಹಾಯ ಸೌಲಭ್ಯ ಸಿಗುತ್ತಿಲ್ಲ. ಬದಲಾಗಿ ಅವರ ಹೆಸರಿನಲ್ಲಿ ಕ್ಷೇತ್ರದ ದುರುಪಯೋಗವಾಗುತ್ತಿದೆ ಎಂಬುದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಅಭಿಪ್ರಾಯ.

ನಮ್ಮಲ್ಲಿ ಅಕ್ಷರಸ್ಥರ ಸಂಖ್ಯೆ ಬಹಳ ಕಡಿಮೆ. ತಿಳಿವಳಿಕೆ ಕೊರತೆ ಸಹ ಇದೆ. ಬ್ಯಾಂಕ್‌ ನೋಡಿದ ತಕ್ಷಣ ವಿಚಾರ ಮಾಡದೇ ಹಣ ಹಾಕುತ್ತಾರೆ. ಆದರೆ ಒಂದು ದಿನ ಈ ದುಡ್ಡು ಸಂಗ್ರಹ ಮಾಡಿದವರು ನಾಪತ್ತೆಯಾಗುತ್ತಾರೆ. ಒಂದರ್ಥದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಕಾಯ್ದೆ ಬದ್ಧವಾಗಿ ಲೂಟಿ ಮಾಡುವ ಕೆಲಸ ನಡೆದಿದೆ. ಇದರ ಬಗ್ಗೆ ಸರಕಾರ ಎಚ್ಚರ ವಹಿಸಬೇಕು ಎಂಬುದು ರಮೇಶ ಕತ್ತಿ ಅವರ ಆಗ್ರಹ.

Advertisement

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿಯಂತ್ರಣದಲ್ಲಿರುವುದರಿಂದ ಅವುಗಳ ಸ್ಥಿತಿ ಅಷ್ಟು ಕೆಟ್ಟದಾಗಿಲ್ಲ. ಆದರೆ ಇದೇ ರೀತಿಯ ನಿಯಂತ್ರಣ ಅಥವಾ ನಿರ್ವಹಣೆ ಕ್ರೆಡಿಟ್‌ ಸೌಹಾರ್ದ ಸಂಘಗಳ ಮೇಲೆ ಇಲ್ಲ. ಇದು ಸಮಸ್ಯೆಯ ಮೂಲ ಕಾರಣ ಎಂಬುದು ಕರ್ನಾಟಕ ಸಹಕಾರ ಸೌಹಾರ್ದ ಮಹಾಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ ಅನಿಸಿಕೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಸಹಕಾರಿ ಸಂಘಗಳು ಬಹಳ ಒಳ್ಳೆಯ ಕೆಲಸ ಮಾಡುತ್ತಿವೆ.

ಈ ಸಂಘಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಜಿಲ್ಲೆಯಲ್ಲಿ 5500 ಸಹಕಾರಿ ಸಂಘಗಳು ಹಾಗೂ 1200 ಕ್ಕೂ ಅಧಿಕ ಸೌಹಾರ್ದ ಸೊಸೈಟಿಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಸಂಘಗಳನ್ನು ಸ್ಥಾಪನೆ ಮಾಡಿದ ಮೇಲೆ ವಿವಿಧ ಕಾರಣಗಳಿಂದ ಅವುಗಳನ್ನು ನಡೆಸಲು ಸಾಧ್ಯವಾಗಿರುವುದಿಲ್ಲ, ಅಂತಹ ಸುಮಾರು 270 ಸೊಸೈಟಿಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿವೆ ಎಂದು ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀನಿವಾಸ ಹೇಳಿದರು.

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next