ಬೆಳಗಾವಿ: 21 ದಿನಗಳ ಲಾಕ್‌ಡೌನ್‌ದಿಂದಾಗಿ ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿರುವ ಈ ದಿನಮಾನದಲ್ಲಿ ಮನೆ, ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಬಾಡಿಗೆ ಕಟ್ಟುವುದಾದರೂ ಹೇಗೆ? ಎಂಬ ಚಿಂತೆಗೀಡಾಗಿದ್ದಾರೆ.
ಸಣ್ಣ-ಪುಟ್ಟ ವ್ಯಾಪಾರ ವಹಿವಾಟು ನಡೆಸಲು ಮಾರುಕಟ್ಟೆ ಪ್ರದೇಶಗಳಲ್ಲೋ ಅಥವಾ ಬೇರೆ ಕಡೆಗಳಲ್ಲಿ ಅಂಗಡಿ, ವಾಣಿಜ್ಯ ಮಳಿಗೆಗಳ ಬಾಡಿಗೆದಾರರಿಗೆ ಮಾಸಿಕ ಬಾಡಿಗೆ ಕಟ್ಟುವುದು ಕಷ್ಟಕರವಾಗಿದೆ. 21 ದಿನಗಳ ಲಾಕ್‌ಡೌನ್ ಮುಗಿದು ಇನ್ನೇನು ವ್ಯಾಪಾರ ನಡೆಸಬೇಕು ಎಂದುಕೊಳ್ಳುವಷ್ಟರಲ್ಲಿಯೇ ಮತ್ತೆ ಮೇ 3ರ ವರೆಗೆ ವಿಸ್ತರಣೆ ಆಗಿದ್ದು, ಇದು ಬಿಸಿ ತುಪ್ಪದಂತೆ ಪರಿಣಮಿಸಿದೆ.
ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರು, ಕಾರ್ಖಾನೆ ಕಾರ್ಮಿಕರು, ಹಮಾಲರು ಸೇರಿದಂತೆ ವಿವಿಧ ಸಣ್ಣ-ಪುಟ್ಟ ಕಾರ್ಮಿಕ ವಲಯದಲ್ಲಿ ದುಡಿಯುವ ಜನರಿಗೆ ಬಾಡಿಗೆ ಕಟ್ಟುವುದು ಸಮಸ್ಯೆ ಆಗಿ ಬಿಟ್ಟಿದೆ. ಮೊದಲೇ ಉದ್ಯೋಗ ಇಲ್ಲ. ಜೀವನ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಿನ ಕೆಲಸ. ಇಂಥದರಲ್ಲಿ ಮನೆ ಮಾಲೀಕರಿಗೆ ತಿಂಗಳ ಬಾಡಿಗೆ ಕಟ್ಟುವುದು ಎಲ್ಲಿಂದ?, ಹಣ ಕೂಡಿಸಿ ಕೊಡುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಡುತ್ತಿದೆ.
ಮಾರ್ಚ್ ತಿಂಗಳ ಬಾಡಿಗೆಯನ್ನು ಏಪ್ರಿಲ್ ನಲ್ಲಿ ಕಟ್ಟಲು ಸಾಧ್ಯವಿಲ್ಲ. ಮಾರ್ಚ್ ಕೊನೆಯ ರದಿಂದಲೇ ಲಾಕ್‌ಡೌನ್ ಆಗಿದ್ದರಿಂದ ಈ ಬಾಡಿಗೆ ಇಲ್ಲವಾಗಿದೆ. ಇನ್ನು ಮುಂದೆ ಏಪ್ರಿಲ್ ತಿಂಗಳ ಸೇರಿದಂತೆ ಒಟ್ಟು ಎರಡು ತಿಂಗಳ ಬಾಡಿಗೆ ಕಟ್ಟಲು ಸಂಕಷ್ಟ ಎದುರಾಗಿದೆ. ನಗರ ಸೇರಿದಂತೆ ಜಿಲ್ಲಾದ್ಯಂತ ಮನೆ, ಅಂಗಡಿ, ವಾಣಿಜ್ಯ ಮಳಿಗೆಗಳನ್ನು ಪಡೆದಿರುವ ಬಾಡಿಗೆದಾರರು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಹೊಟೇಲ್‌ಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ವರ್ಗಕ್ಕಂತೂ ಕಷ್ಟ ಹೇಳತೀರದಾಗಿದೆ. ಎಲ್ಲ ಹೊಟೇಲ್, ರೆಸ್ಟೋರೆಂಟ್ ಗಳು ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದರಿಂದ ಈ ಕಾರ್ಮಿಕರು ಈ ಖಾಲಿ ಉಳಿದುಕೊಂಡಿದ್ದಾರೆ. ಕೆಲಸ ಇದ್ದಾಗ ಊಟ, ಉಪಾಹಾರದ ಜತೆಗೆ ಸಂಬಳವೂ ಸಿಗುತ್ತಿತ್ತು. ನಾಲ್ಕೈದು ಜನ ಕೂಡಿಕೊಂಡು ಇರುವ ಮನೆಯಲ್ಲಿ ಊಟದ ಸಮಸ್ಯೆ ಜತೆಗೆ ಬಾಡಿಗೆ ಕಟ್ಟುವುದು ಸಮಸ್ಯೆ ಆಗಿ ಬಿಟ್ಟಿದೆ.
ಬೆಳಗಾವಿ ನಗರದಲ್ಲಿ 1ರಿಂದ 12 ಸಾವಿರ ರೂ. ವರೆಗೂ ಮನೆ, ಅಂಗಡಿಗಳಿಗೆ ಬಾಡಿಗೆ ಇದೆ. ಲಾಕ್ ಡೌನ್‌ದಿಂದಾಗಿ ಬಹುತೇಕ ಎಲ್ಲವೂ ಸ್ತಬ್ಧಗೊಂಡಿದೆ. ನಗರದಲ್ಲಿರುವ ಬಹುತೇಕ ಅಂಗಡಿಗಳು ಬಾಡಿಗೆಮೇಲೆಯೇ ಇವೆ. ಮಾಲೀಕರು ತಿಂಗಳ ಬಾಡಿಗೆಗಾಗಿ ಕಾಯುತ್ತ ನಿಂತಿರುತ್ತಾರೆ. ಇಂಥದರಲ್ಲಿ ಒಂದೂವರೆ ತಿಂಗಳ ಕಾಲ ವ್ಯಾಪಾರ, ವಹಿವಾಟು, ಉದ್ಯೋಗ, ಕೆಲಸ-ಕಾರ್ಯಗಳು ಸ್ಥಗಿತಗೊಂಡಿದ್ದರಿಂದ ಬಾಡಿಗೆ ಪಾವತಿ ಸಾಧ್ಯವಿದೆಯೇ ಎನ್ನುತ್ತಾರೆ ಬಾಡಿಗೆದಾರ ಅರ್ಜುನ ಹೊಳೆಪ್ಪಗೊಳ.
ದೆಹಲಿಯಲ್ಲಿ ಮೂರು ತಿಂಗಳು ಬಾಡಿಗೆ ವಿನಾಯಿತಿ ನೀಡಲಾಗಿದ್ದು, ಕರ್ನಾಟಕದಲ್ಲಿ ಒತ್ತಾಯ ಪೂರ್ವಕವಾಗಿ ಬಾಡಿಗೆ ಪಡೆದರೆ ದೂರು ದಾಖಲಿಸುವ ಬಗ್ಗೆ ಸರ್ಕಾರದ ಆದೇಶ ಸ್ವಾಗತಾರ್ಹ. ಜಿಲ್ಲೆಯಲ್ಲಿ ಬಹಳಷ್ಟು ಅಸಂಘಟಿತ ವಲಯದ ಕಾರ್ಮಿಕರು ಬೆಳಗ್ಗೆ ಕೆಲಸ ಮಾಡಿದರೆ ಸಂಜೆ ಊಟ ಮಾಡುವ ಸ್ಥಿತಿ ಇದೆ. ಇಂತ ಕೆಲವರಿಗೆ ಪಡಿತರ ಚೀಟಿಯೂ ಇಲ್ಲ. ಇಂಥ ವರ್ಗದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು.
ಲಕ್ಷ್ಮೀ ಹೆಬ್ಟಾಳಕರ,
ಶಾಸಕರು, ಬೆಳಗಾವಿ ಗ್ರಾಮೀಣ
ಬಾಡಿಗೆ ಮನೆಗಳು ಹಾಗೂ ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ಸರ್ಕಾರ ಬಾಡಿಗೆ ವಿನಾಯಿತಿ ಘೋಷಿಸಿದರೆ ಅಸಂಘಟಿತ ವಲಯ ಸೇರಿದಂತೆ ಇತರೆ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಇಡೀ ತಿಂಗಳು ದುಡಿದಾಗಲೇ ಮಾಸಿಕ ಬಾಡಿಗೆ ಪಾವತಿಸಬೇಕಾದ ಅನಿವಾರ್ಯತೆ ಇದೆ. ಒಂದೂವರೆ ತಿಂಗಳಿಂದ ಲಾಕ್‌ಡೌನ್ ಆಗಿದ್ದರಿಂದ ಎಲ್ಲ ವ್ಯಾಪಾರ, ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಹೀಗಿರುವಾಗ ಬಾಡಿಗೆ ತುಂಬುವುದಾದರೂ ಹೇಗೆ?
ಭೀಮೇಶ ಲಮಾಣಿ,
ಬಾಡಿಗೆದಾರ
ಭೈರೋಬಾ ಕಾಂಬಳೆ