ಚಿಕ್ಕೋಡಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡೇಟಿನಿಂದ ವೀರಮರಣ ಹೊಂದಿದ ಚಿಕ್ಕೋಡಿ ತಾಲೂಕಿನ ಬೂದಿಹಾಳ ಗ್ರಾಮದ ವೀರಯೋಧ, ಪ್ರಕಾಶ ಪುಂಡಲೀಕ ಜಾಧವ (29) ಅವರ ಅಂತ್ಯಕ್ರಿಯೆ ಗುರುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಜಮ್ಮು-ಕಾಶ್ಮೀರದ ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಯ ಗಡಿ ಭಾಗದಲ್ಲಿ ಮಂಗಳವಾರ ಉಗ್ರರು ಮತ್ತು ಭಾರತೀಯ ಯೋಧರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಜಾಧವ ಹುತಾತ್ಮರಾಗಿದ್ದರು. ವೀರಯೋಧನ ಪಾರ್ಥಿವ ಶರೀರವನ್ನು ದಿಲ್ಲಿ ಮೂಲಕ ಬುಧವಾರ ರಾತ್ರಿ ಬೆಳಗಾವಿಗೆ ತರಲಾಯಿತು.
ಅಲ್ಲಿನ ಮರಾಠಾ ಲೈಟ್ ಇನ್‌ಫಂಟ್ರಿ ಆವರಣದಲ್ಲಿ ನಮನ ಸಲ್ಲಿಸಿದ ಬಳಿಕ, ನಿಪ್ಪಾಣಿ ಮಾರ್ಗವಾಗಿ ಬೂದಿಹಾಳ ಗ್ರಾಮಕ್ಕೆ ತರಲಾಯಿತು. ಬಳಿಕ, ಬೂದಿಹಾಳ, ಯಮಗರ್ಣಿ ಗ್ರಾಮದಲ್ಲಿ ವೀರಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ವೀರಯೋಧನಿಗೆ ಪೊಲೀಸರು ನಮನ ಸಲ್ಲಿಸಿದ ಬಳಿಕ ಯೋಧರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ನಂತರ ಅಂತ್ಯಕ್ರಿಯೆ ನಡೆಯಿತು.
ಸಂಸದ ಪ್ರಕಾಶ ಹುಕ್ಕೇರಿ, ಶಾಸಕಿ ಶಶಿಕಲಾ ಜೊಲ್ಲೆ ಸೇರಿ ಹಲವು ಗಣ್ಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಪ್ರಕಾಶ ಹುಕ್ಕೇರಿ, ಹುತಾತ್ಮ ಯೋಧನ ಕುಟುಂಬಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ 45 ಲಕ್ಷ ರೂ.ನೆರವು ಘೋಷಿಸಿದ್ದಾರೆ ಎಂದರು. ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಅವರ ಮೂರು ತಿಂಗಳ ಮಗುವಿಗೆ ಮುಂದಿನ ಶಿಕ್ಷಣವನ್ನು ಜೊಲ್ಲೆ ಸಂಸ್ಥೆ ನೀಡಲಿದೆ ಎಂದು ಭರವಸೆ ನೀಡಿದರು. ಅವರ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ತಿಳಿಸಿದರು. ಮೃತರು ಪತ್ನಿ ನೀತಾ, ತಾಯಿ ಶಾರದಾ, ತಂದೆ ಪುಂಡಲಿಕ ಮತ್ತು ಮೂರು ತಿಂಗಳ ಪುತ್ರಿ ಶ್ರಾವಣಿಯನ್ನು ಅಗಲಿದ್ದಾರೆ.