Advertisement

ಬಂಡಾಯ ಲಾಭದ ಗೆಲುವಿನ ಲೆಕ್ಕಾಚಾರ 

06:25 AM May 06, 2018 | |

ಪುರುಷ ಪ್ರಧಾನ ಕ್ಷೇತ್ರದಲ್ಲಿ ಮಹಿಳೆಯ ಫೈಟ್‌. ಅದೂ ಅಂತಿಂಥ ಫೈಟ್‌ ಅಲ್ಲ. ಕುತೂಹಲ ಕೆರಳಿಸುವ ಸೆಣಸಾಟ. ಇದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಈ ಬಾರಿಯ ವಿಶೇಷ.

Advertisement

ರಾಜ್ಯದ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಇದೂ ಸಹ ಪ್ರಮುಖವಾದದ್ದು. ಇಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ಪೈಪೋಟಿ ಒಂದು ಕಡೆಯಾದರೆ ಇನ್ನೊಂದು ಕಡೆ ಸ್ವತಃ ಕಾಂಗ್ರೆಸ್‌ನ ಒಂದು ಗುಂಪು ಹೆಬ್ಟಾಳಕರ ಅವರನ್ನು ಸೋಲಿಸಲು ತಂತ್ರ ಹೂಡಿದೆ. ಇದೇ ಕಾರಣದಿಂದ ಇದು ಈ ಬಾರಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಎಲ್ಲಕ್ಕಿಂತ ಈ ಕ್ಷೇತ್ರದಲ್ಲಿ ಹೆಚ್ಚು ಸುದ್ದಿ ಮಾಡಿದ್ದು ಕಾಣಿಕೆಗಳ ಭರಾಟೆ. ಕಳೆದ ಒಂದು ವರ್ಷದಿಂದ ಮತದಾರರಿಗೆ ಕಾಣಿಕೆಗಳ ವಿತರಣೆ ನಡೆದೇ ಇದೆ. ಟೀ ಶರ್ಟ್‌, ಸೀರೆಯಿಂದ ಆರಂಭವಾದ ಕಾಣಿಕೆ ಸಂಸ್ಕೃತಿ ಕೊನೆಗೆ ಗ್ಯಾಸ್‌ಸ್ಟೌವ್‌ವರೆಗೆ ಬಂದಿತು. 

ಬಿಜೆಪಿ ಹಾಗೂ ಜೆಡಿಎಸ್‌ಗೆ ನೇರವಾಗಿ ಸೆಡ್ಡು ಹೊಡೆದಿರುವ ಕಾಂಗ್ರೆಸ್‌ ಅಭ್ಯರ್ಥಿ ಹೆಬ್ಟಾಳಕರ ಈ ಕ್ಷೇತ್ರದ ಸ್ಟಾರ್‌ ಅಭ್ಯರ್ಥಿ. ಇವರಿಗೆ ಬಿಜೆಪಿಯಿಂದ ಹಾಲಿ ಶಾಸಕ ಸಂಜಯ ಪಾಟೀಲ ಹಾಗೂ ಜೆಡಿಎಸ್‌ನಿಂದ ಶಿವನಗೌಡ ಪಾಟೀಲ ಪ್ರತಿಸ್ಪರ್ಧಿಗಳು. ಕಳೆದ ಚುನಾವಣೆಯ ಕಾದಾಟವೇ ಮತ್ತೆ ಮರುಕಳಿಸಿದ್ದು, ಜೆಡಿಎಸ್‌ ಇದಕ್ಕೆ ಸೇರ್ಪಡೆಯಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌,ಬಿಜೆಪಿ, ಜೆಡಿಎಸ್‌ ಹಾಗೂ ಎಂಇಎಸ್‌ ಮಧ್ಯೆ ಪೈಪೋಟಿಯಿದೆ. ಶಾಸಕರಾಗಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಲಕ್ಷ್ಮೀ ಹೆಬ್ಟಾಳಕರ ಕಳೆದ ಐದು ವರ್ಷಗಳಿಂದ ಇದಕ್ಕಾಗಿ ನಿರಂತರ ತಾಲೀಮು ನಡೆಸಿದ್ದಾರೆ. ಅಧಿಕಾರ ಇರದಿದ್ದರೂ ಸರಕಾರದಲ್ಲಿ ತಮ್ಮ ಪ್ರಭಾವ ಬಳಸಿ ಅನೇಕ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ.

ಲಕ್ಷ್ಮೀ ಹೆಬ್ಟಾಳಕರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದವರ ಕುತಂತ್ರದಿಂದ ಗೆಲ್ಲುವ ಅವಕಾಶ ಕಳೆದುಕೊಂಡರು. ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಿಂದ ಹೆಬ್ಟಾಳಕರ ಸೋತರು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲೂ ಅವರಿಗೆ ಅದೃಷ್ಟ
ಒಲಿಯಲಿಲ್ಲ. ಈಗ ಮತ್ತೆ ತಮ್ಮ ಪ್ರತಿಷ್ಠೆ ಹಾಗೂ ಸಾಮರ್ಥ್ಯ ಪಣಕ್ಕಿಟ್ಟಿದ್ದಾರೆ.

Advertisement

ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಕಳೆದ ಬಾರಿ ಸಾಕಷ್ಟು ಆತಂಕ ಎದುರಿಸಿ ಕೊನೆಗೆ ಜಯಗಳಿಸುವಲ್ಲಿ
ಯಶಸ್ವಿಯಾದ ಸಂಜಯ ಪಾಟೀಲ ಈಗ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಕಳೆದ ಸಲದಂತೆ ಕಾಂಗ್ರೆಸ್‌ನ ಒಳಜಗಳದ ಲಾಭ ತಮಗೆ ವರವಾಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ. ಚುನಾವಣೆಗೆ ಮೊದಲು ಕಾಂಗ್ರೆಸ್‌ನಲ್ಲಿದ್ದ ಶಿವನಗೌಡ ಪಾಟೀಲ ಅವರು ಅಲ್ಲಿ ಟಿಕೆಟ್‌ ಸಿಗುವುದಿಲ್ಲ ಎಂಬುದು ಖಾತ್ರಿಯಾದ ನಂತರ ಜೆಡಿಎಸ್‌ಗೆ ಜಿಗಿದರು. ಸತೀಶ ಜಾರಕಿಹೊಳಿಗೆ ಆಪ್ತರಾಗಿರುವುದರಿಂದ ಅವರೇ ಜೆಡಿಎಸ್‌ ಟಿಕೆಟ್‌ ಕೊಡಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ತಾವು ಗೆಲ್ಲಲಾಗದಿದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸುವುದು ಇವರ ಮುಖ್ಯ ಗುರಿ.

ನಿರ್ಣಾಯಕ ಅಂಶವೇನು? ಬೆಳಗಾವಿ ಗ್ರಾಮೀಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲೇಬೇಕೆಂಬ ರಾಜಕೀಯದ ಆಟ ಕಾಂಗ್ರೆಸ್‌ನಲ್ಲೇ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಭಾಷಿಕ ಅಭ್ಯರ್ಥಿಗಳನ್ನು ನಿಲ್ಲಿಸಿ ಕಾಂಗ್ರೆಸ್‌ ಪರವಾಗಿರುವ ಮರಾಠಿ ಭಾಷಿಕ ಮತಗಳನ್ನು ಸೆಳೆಯುವುದು ಈ ರಾಜಕೀಯ ಲೆಕ್ಕಾಚಾರದ ಒಂದು ಭಾಗ. ಇದು ತಮಗೆ ಟರ್ನಿಂಗ್‌ ಪಾಯಿಂಟ್‌ ಆಗಬಹುದು ಎಂಬುದು ಬಿಜೆಪಿ ಹಾಗೂ ಎಂಇಎಸ್‌ ಲೆಕ್ಕಾಚಾರ. ಆದರೆ ಈ ಲೆಕ್ಕಾಚಾರ ಬುಡಮೇಲು ಮಾಡಲು ಕಾಂಗ್ರೆಸ್‌ ಅಭ್ಯರ್ಥಿ ತಮ್ಮದೇ ಆದ ತಂತ್ರಗಾರಿಕೆ ಹೆಣೆಸಿದ್ದಾರೆ ಎಂಬುದು ಅವರ ಬೆಂಬಲಿಗರ ವಿಶ್ವಾಸ. ಇದೇ ವೇಳೆ ಎಂಇಎಸ್‌ನಲ್ಲಿ ಭಿನ್ನಮತ ಬಂದಿರುವುದರಿಂದ ಅದರ ಅನುಕೂಲ ತಮಗೆ ಆಗಲಿದೆ ಎಂಬುದು ಹೆಬ್ಟಾಳಕರ ನಂಬಿಕೆ.


ನನ್ನ ಕ್ಷೇತ್ರದಿಂದ ಕೊರತೆ ಇದೆ ಎಂಬ ಮಾತು ಬರಬಾರದು. ಸಮಗ್ರ ಅಭಿವೃದಿಟಛಿ ಮಾಡಬೇಕು ಎಂಬುದು ನನ್ನ ಮೊದಲ ಗುರಿ. ಅಧಿಕಾರ ಇಲ್ಲದಿದ್ದರೂ ಸರಕಾರದಿಂದ ಕೆರೆ ತುಂಬಿಸುವುದು ಸೇರಿ ಅನೇಕ ಯೋಜನೆಗಳನ್ನು ತಂದಿದ್ದೇನೆ.
– ಲಕ್ಷ್ಮೀ ಹೆಬ್ಟಾಳಕರ ಕಾಂಗ್ರೆಸ್‌ ಅಭ್ಯರ್ಥಿ

ಐದು ವರ್ಷಗಳಲ್ಲಿ ನಾನು ಮಾಡಿದ ಕೆಲಸಗಳನ್ನು ಜನರು ನೋಡಿದ್ದಾರೆ.ಹೀಗಾಗಿ ಈ ಬಾರಿಯೂ ನನ್ನ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ. ನಮ್ಮ ಸರ್ಕಾರ ಇರದ ಕಾರಣ ಸಾಕಷ್ಟು ಅನುದಾನ ಮಂಜೂರು ಆಗಲಿಲ್ಲ. ಈ ನಿರಾಸೆ ನನಗಿದೆ.
– ಸಂಜಯ ಪಾಟೀಲ ಬಿಜೆಪಿ ಅಭ್ಯರ್ಥಿ

ಜಯದ ವಿಶ್ವಾಸ ಇದೆ.ಈಗಾಗಲೇ ಒಂದು ಹಂತದ ಪ್ರಚಾರ ಮುಗಿಸಿದ್ದೇನೆ. ಜನರೂ ಬದಲಾವಣೆ ಬಯಸಿದ್ದಾರೆ. ಇದರ ಜತೆಗೆ ಬಿಎಸ್‌ಪಿ ಬೆಂಬಲ ಸಹ ಸಿಕ್ಕಿರುವುದು ಇನ್ನಷ್ಟು ಶಕ್ತಿ ನೀಡಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಸೋಲಿಸುವುದು ನನ್ನ ಮುಖ್ಯ ಗುರಿ.
– ಶಿವನಗೌಡ ಪಾಟೀಲ ಜೆಡಿಎಸ್‌ ಅಭ್ಯರ್ಥಿ

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next