ಬಾಗಲಕೋಟೆ: ಅನುದಾನ ಕೊಟ್ಟು ನಾಲ್ಕು ವರ್ಷ ಆಗಿದೆ. ಆ ದುಡ್ಡನ್ನು ಬೇರೆಡೆ ಬಡ್ಡಿಗೆ ಬಿಟ್ಟಿದ್ದೀರಾ. ನಾಲ್ಕು ವರ್ಷದ ಬಡ್ಡಿ ಹಣ ಎಲ್ಲಿ ಹೋಯ್ತು. ಅನುದಾನ ಹೇಗೆ ಬಳಕೆ ಮಾಡಿಲ್ಲ. ಇದು ನಿಮಗೆ ಕೊನೆಗೆ ಎಚ್ಚರಿಕೆ. ವಾರದಲ್ಲಿ ತಿದ್ದಿಕೊಳ್ಳದಿದ್ದರೆ ಸೇವೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸಚಿವ ಸಾ.ರಾ. ಮಹೇಶ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ಸಭಾ ಭವನದಲ್ಲಿ ಶನಿವಾರ ನಡೆದ ಬೆಳಗಾವಿ ಪ್ರಾದೇಶಿಕ ವಲಯದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಹಾವೇರಿ ಜಿಲ್ಲೆಯಲ್ಲಿ ವಿವಿಧ ಯಾತ್ರಿ ನಿವಾಸ ಹಾಗೂ ಪ್ರವಾಸಿ ತಾಣಗಳ ಸುತ್ತ ಮೂಲಭೂತ ಸೌಲಭ್ಯ ಕಲ್ಪಿಸಲು 1.50 ಕೊಟಿ ಅನುದಾನ ಕೊಟ್ಟು ನಾಲ್ಕು ವರ್ಷ ಕಳೆದಿವೆ. ಈವರೆಗೆ ಬಳಕೆ ಮಾಡಿಲ್ಲ. ಹಾಗಾದರೆ, 1.50 ಕೋಟಿ ದುಡ್ಡಿನ ಬಡ್ಡಿ ಎಲ್ಲಿ ಹೋಯ್ತು, ಹೊರಗಡೆ ಬಡ್ಡಿಗೆ ಹಣ ಬಿಟ್ಟಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಗದಗ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎಸ್.ಐ. ಗೊಗೇರಿ ಸಭೆಗೆ ಬಂದಿರಲಿಲ್ಲ. ಕೆಳ ಹಂತದ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡಲಿಲ್ಲ. ಅಲ್ಲದೇ ಮೂರು ವರ್ಷಗಳಿಂದ ನೀಡಿದ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಗರಂ ಆದ ಸಚಿವರು, ಗದಗ ಡಿಡಿಯನ್ನು ನಾಳೆ ಬೆಳಗ್ಗೆ 11ರೊಳಗಾಗಿ ರಿಲೀವ್ ಮಾಡಬೇಕು ಎಂದು ಸೂಚಿಸಿದರು. ಉತ್ತರಕನ್ನಡ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಕುಲಕರ್ಣಿ ಕೂಡ ಸಭೆಗೆ ಬಂದಿರಲಿಲ್ಲ. ಪ್ರವಾಸೋದ್ಯಮ ಇಲಾಖೆಯ ಕೆಲವು ಕಾಮಗಾರಿಗಳನ್ನು ಪಿಡಬ್ಲುಡಿಗೆ ನೀಡಿದ್ದು, ಪೂರ್ಣಗೊಸಿಲ್ಲ. ಹೀಗಾಗಿ ಕುಲಕರ್ಣಿ ಎಂಬ ಅಧಿಕಾರಿಗೆ ಸಭೆಯ ವೇಳೆಯೇ ಫೋನ್ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡರು. ನಿಮಗೆ ನಿವೃತ್ತಿ ಆಗಲು ಇಷ್ಟ ಇಲ್ಲವೇ, ಒಂದು ಇನ್‌ಕ್ರಿಮೆಂಟ್ (ಬಡ್ತಿ) ಕಡಿತ ಮಾಡಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಧಾರವಾಡ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಯ 24 ಕಾಮಗಾರಿಗೆ ಅನುದಾನ ನೀಡಲಾಗಿದೆ. 17 ಕಾಮಗಾರಿ ಆರಂಭಿಸಿದ್ದಾರೆ. ಮೂರು ವರ್ಷವಾದರೂ 25 ಲಕ್ಷ ವೆಚ್ಚದ ಒಂದು ಕಾಮಗಾರಿ ಕೈಗೊಂಡಿಲ್ಲ. ನಿಮ್ಮ ಕ್ಷೇತ್ರದ ಶಾಸಕರನ್ನು ಕರೆಸಿ, ಕಾಮಗಾರಿ ಆರಂಭಿಸಲು ಆಗಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾದರೆ, ಭಾರತೀಯ ಪುರಾತತ್ವ ಇಲಾಖೆ ಹಾಗೂ ಅರಣ್ಯ ಇಲಾಖೆ ನಮ್ಮ ಮೇಲೆ ಹಾವಳಿ ಮಾಡುತ್ತಿವೆ. ನೀವು ಕಟ್ಟುವುದಿಲ್ಲ. ನಮಗೂ ಕಟ್ಟಲು ಬಿಡುತ್ತಿಲ್ಲ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿಲ್ಲ ಎಂದು ಎಎಸ್‌ಐ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಅತಿಕ್ರಮಣಕ್ಕೆ ಯಾಕೆ ಅವಕಾಶ ಕೊಟ್ರಿ
ಬಾದಾಮಿಯ ಪ್ರವಾಸಿ ತಾಣಗಳನ್ನು ಕೇಂದ್ರದ ಭಾರತೀಯ ಪುರಾತತ್ವ ಇಲಾಖೆ 1910ರಲ್ಲಿ ಅಧಿಸೂಚನೆ ಹೊರಡಿಸಿ, ತನ್ನ ವ್ಯಾಪ್ತಿಗೆ ಪಡೆದಿದೆ. ಒಂದು ಅಭಿವೃದ್ಧಿ ಕಾರ್ಯಕ್ಕೂ ಅನುಮತಿ ಕೊಡದ ಎಎಸ್‌ಐನವರು, 76ಕ್ಕೂ ಹೆಚ್ಚು ಮನೆಗಳ ನಿರ್ಮಾಣವಾದರೂ ಏಕೆ ಸುಮ್ಮನಿದ್ದಿರಿ. ಜಿಲ್ಲಾಡಳಿತದ ನೆರವಿನೊಂದಿಗೆ ಅತಿಕ್ರಮಣ ತೆರವು ಏಕೆ ಮಾಡಿಲ್ಲ ಎಂದು ಎಎಸ್‌ಐ ಅಧಿಕಾರಿಗಳನ್ನು ಸಚಿವ ಮಹೇಶ ತೀವ್ರ ತರಾಟೆಗೆ ತೆಗೆದುಕೊಂಡರು.