Advertisement

ಬೆಳಗಾವಿಯಲ್ಲಿ ಈ ಬಾರಿ ಬ್ಯಾಲೆಟ್ಟೋ-ಮಷಿನ್ನೋ ?

12:43 AM Apr 06, 2019 | Sriram |

ಬೆಳಗಾವಿ: ಈ ಸಲವೂ ಬೆಳಗಾವಿ ಲೋಕಸಭೆ ಇಡೀ ದೇಶದ ಗಮನ ಸೆಳೆಯಲಿದ್ದು, 23 ವರ್ಷಗಳ ಬಳಿಕ ಮತ್ತೂಮ್ಮೆ ಚುನಾವಣಾ ಆಯೋಗಕ್ಕೆ ತಲೆ ಬಿಸಿ ಆರಂಭವಾಗಿದೆ.

Advertisement

23 ವರ್ಷಗಳ ನಂತರ ಮತ್ತೂಮ್ಮೆ 64 ನಾಮಪತ್ರಗಳು ಸಿಂಧು ಆಗಿದ್ದು, ಚುನಾವಣಾ ಆಯೋಗ ಬ್ಯಾಲೆಟ್‌ ಪೇಪರ್‌ನಿಂದ ಪಾರಾದರೂ ಮತದಾನ ವೇಳೆ ತೊಂದರೆಯಿಂದ
ಮುಕ್ತಿಯಾಗಬೇಕಾದರೆ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆಯಬೇಕಾದ ಅಗತ್ಯವಿದೆ. ಇದು ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಈ ವರ್ಷ ಬೆಳಗಾವಿ ಲೋಕಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿವೆ.ಮಾ.28ರಿಂದ ಏ.4ರ ವರೆಗೆ 76 ನಾಮತ್ರಗಳು ಸಲ್ಲಿಕೆ ಆಗಿದ್ದವು. ಈ ಪೈಕಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಕಣದಲ್ಲಿ ಒಟ್ಟು 64 ಅಭ್ಯರ್ಥಿಗಳ ನಾಮಪತ್ರಗಳು ಸಿಂಧು ಆಗಿವೆ.

64 ಅಷ್ಟೇ ಇದ್ದಿದ್ದರೆ ಚುನಾವಣಾ ಆಯೋಗಕ್ಕೆ ಸಮಸ್ಯೆ ಆಗುತ್ತಿರಲಿಲ್ಲ. ಇದರಲ್ಲಿ ನೋಟಾ ಆಯ್ಕೆ ಇರುವುದರಿಂದ 65 ಸಂಖ್ಯೆಗಳನ್ನು ಮಷಿನ್‌ಗೆ ಅಳವಡಿಸಲು ಆಯೋಗಕ್ಕೆ ಹೆಚ್ಚಿನ ತಲೆ ನೋವು ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 4434 ಬೂತ್‌ಗಳಿದ್ದು, ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತಯಂತ್ರಗಳು ಜಿಲ್ಲೆಗೆ ಆಗಮಿಸಿವೆ. ಸದ್ಯದ ಪ್ರಕಾರ ಎಂ-2 ಕಂಟ್ರೋಲ್‌ ಯೂನಿಟ್‌ಗಳು ಇವೆ.

ಒಂದು ಇವಿಎಂನಲ್ಲಿ 16 ಹೆಸರುಗಳು ಅಡಕವಾಗುತ್ತವೆ. ಅಂದರೆ ಒಟ್ಟಾರೆ 4 ಇವಿಎಂಗಳು ಸಾಕಾಗುತ್ತವೆ. ಆದರೆ 64 ಅಭ್ಯರ್ಥಿಗಳ ಹೆಸರಿನ ಜೊತೆಗೆ ನೋಟಾ ಕೊನೆಯ ಅನುಕ್ರಮ ಸಂಖ್ಯೆಯಲ್ಲಿ ಇರುವುದರಿಂದಾಗಿ ಆಯೋಗ ಮುಂದೆ ಏನು ಮಾಡಬಹುದು ಎಂಬ ಬಗ್ಗೆತಲೆಕೆಡಿಸಿಕೊಳ್ಳುತ್ತಿದೆ. ಎಂ-2 ಕಂಟ್ರೋಲ್‌
ಯೂನಿಟ್‌ ಗಳ ಮಷಿನ್‌ಗಳಲ್ಲಿ 16 ಹೆಸರು ಮಾತ್ರ ಸೇರಿಸಲಾಗುತ್ತದೆ. ಎಂ-3 ಕಂಟ್ರೋಲ್‌ ಯೂನಿಟ್‌ಗಳು ಇದ್ದಿದ್ದರೆ ಒಂದು ಮತ ಯಂತ್ರದಲ್ಲಿ 21 ಹೆಸರುಗಳನ್ನು ಸೇರಿಸಬಹುದು. ಎಂ-3 ಯಂತ್ರಗಳನ್ನು ಬಳಸಿಕೊಂಡರೆ ತಲೆ ನೋವಿನಿಂದ ಪಾರಾಗಬಹುದು. 64 ಅಭ್ಯರ್ಥಿಗಳೇ ಕಣದಲ್ಲಿ ಉಳಿದುಕೊಂಡರೆ ಬ್ಯಾಲೆಟ್‌ ಪೇಪರ್‌ ಮೂಲಕವೂ ಚುನಾವಣೆ ನಡೆಸುವ ಸಾಧ್ಯತೆ ಇದೆ. ಯಾವ ಸಮಸ್ಯೆಯೂ ಬೇಡ ಎಂದಾದರೆ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾದರೆ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಬೇಕಾದ ಅಗತ್ಯವಿದೆ.

Advertisement

ಲಭ್ಯ ವಿವಿಪ್ಯಾಟ್‌ ಕಡಿಮೆ
ಬ್ಯಾಲೆಟ್‌ ಯೂನಿಟ್‌ ಹಾಗೂ ಕಂಟ್ರೋಲ್‌ ಯೂನಿಟ್‌ಗಳು ಅಗತ್ಯವಾಗಿ ಬೇಕಾದಷ್ಟು ಇವೆ. ಒಟ್ಟು ನೋಟಾ ಸೇರಿಸಿ 64 ಇದ್ದರೆ ಬೂತ್‌ಗೆ ನಾಲ್ಕರಂತೆ ಇವಿಎಂ ಯಂತ್ರಗಳು ಬೇಕಾಗುತ್ತವೆ. ನಾಲ್ಕು ಯಂತ್ರಗಳಿಗೆ ಒಂದು ವಿವಿಪ್ಯಾಟ್‌ ಬೇಕಾಗುತ್ತವೆ. ಒಂದು ವೇಳೆ 65 ಹೆಸರು ಸೇರಿಸುವುದಾದರೆ ಎಂ-3 ಕಂಟ್ರೋಲ್‌ ಯೂನಿಟ್‌ಗಳೇ ಬೇಕಾಗುತ್ತವೆ. ಸದ್ಯ ಬೆಳಗಾವಿ ಲೋಕಸಭೆಗೆ ಬಂದಿರುವ ವಿವಿ ಪ್ಯಾಟ್‌ಗಳೂ ಕಡಿಮೆ ಪ್ರಮಾಣದಲ್ಲಿವೆ. ಈ ಸಮಸ್ಯೆ ಕೂಡ ಚುನಾವಣಾ ಆಯೋಗಕ್ಕಿದೆ. 22 ವರ್ಷಗಳ ಹಿಂದೆ 1996ರಲ್ಲಿ ಬೆಳಗಾವಿ ಲೋಕಸಭೆ ಚುನಾವಣೆಗೆ ಒಟ್ಟು 456 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದಕ್ಕೆ ಅತಿ ದೊಡ್ಡ ಪ್ರಮಾಣದ ಬ್ಯಾಲೆಟ್‌ ಪೇಪರ್‌ ಬಳಸಲಾಗಿತ್ತು. 2-3 ದಿನಗಳ ಕಾಲ ನಿರಂತರವಾಗಿ ಅಧಿಕಾರಿಗಳು ಮತ ಎಣಿಕೆ ಮಾಡಿದ್ದರು. ಇದಕ್ಕಿಂತ ಮುಂಚೆ 1985ರಲ್ಲಿ 305 ಅಭ್ಯರ್ಥಿಗಳು ಬೆಳಗಾವಿ ವಿಧಾನಸಭೆಗೆ ನಾಮಪತ್ರ
ಸಲ್ಲಿಸಿ ಕಣದಲ್ಲಿ ಉಳಿದಿದ್ದರು. ಈಗ ಮತ್ತೂಮ್ಮೆ ಇಂಥ ದಾಖಲೆ ಪ್ರಮಾಣದಲ್ಲಿ ನಾಮಪತ್ರ ಬಂದಿರುವುದೇ ಸಮಸ್ಯೆಗೆ ಕಾರಣ.

ಮತದಾನ ಚೀಟಿ ನೀಡುವಂತೆ ಜಾಗೃತಿ ಮೂಡಿಸಲು 1985ರಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ನಿಲ್ಲಿಸಿದ್ದರೆ,1996ರಲ್ಲಿ ಮತ ವಿಭಜನೆ ಮಾಡಲು 1996ರಲ್ಲಿ ಎಂಇಎಸ್‌ನವರು 452 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈಗ 2019ರ ಲೋಕಸಭೆ ಚುನಾವಣೆಯಲ್ಲಿ ಎಂಇಎಸ್‌ನವರು 50ಕ್ಕೂ ಹೆಚ್ಚು ಜನರಿಂದ ನಾಮಪತ್ರ ಸಲ್ಲಿಸಿ ಕಣಕ್ಕಿಳಿಸಿದ್ದಾರೆ.

ಬೆಳಗಾವಿ ಲೋಕಸಭೆಗೆ ನಾಮಪತ್ರ ಸಲ್ಲಿಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಿವೆ.ಸದ್ಯ 64 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಒಬ್ಬರು ನಾಮಪತ್ರ ಹಿಂಪಡೆದುಕೊಂಡರೆ ನೋಟಾ ಸೇರಿ 64 ಹೆಸರುಗಳನ್ನು ನಾಲ್ಕು ಮತಯಂತ್ರಗಳಲ್ಲಿ ಅಳವಡಿಸಲು ಸಾಧ್ಯವಿದೆ. ಇಲ್ಲದಿದ್ದರೆ ಮುಂದಿನ ಕಾರ್ಯದ ಬಗ್ಗೆ ಆಯೋಗದ
ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು.
– ಡಾ| ಎಚ್‌.ಬಿ. ಬೂದೆಪ್ಪ,
ಅಪರ ಜಿಲ್ಲಾಧಿಕಾರಿ

– ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next