ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ಆರಂಭವಾದ ಚಳಿಗಾಲದ ಅಧಿವೇಶನಕ್ಕೆ ಮೊದಲ ದಿನವೇ ಆರು ಪ್ರತಿಭಟನೆಗಳ ಕಾವು ತಟ್ಟಿತು. ಹತ್ತಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿವಿಧ ಸಂಘಟನೆಗಳು ಸುವರ್ಣ ವಿಧಾನಸೌಧದ ಬಳಿಯ ಕೊಂಡಸಕೊಪ್ಪ ಮತ್ತು ಹಲಗಾ ಗ್ರಾಮದಲ್ಲಿ ನಿರ್ಮಿಸಿರುವ ವೇದಿಕೆಗಳಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಂಪೂರ್ಣ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಕೊಂಡಸಕೊಪ್ಪ ಗ್ರಾಮದ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಕಾರ್ಖಾನೆಯಿಂದ ಮೂರು ವರ್ಷಗಳಿಂದ ಕಬ್ಬಿನ ಬಾಕಿ ಹಣ ಪಾವತಿ ಮಾಡಿಲ್ಲ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ, ಬಂಧಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರೈತರ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬದಲಾಗಿ ಪೊಲೀಸರ ಮೂಲಕ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈ ಸರಕಾರದಲ್ಲಿ ಗಂಟುಕಳ್ಳರೇ ಹೆಚ್ಚಾಗಿದ್ದಾರೆ ಎಂದು ಟೀಕಿಸಿದರು.
ವೈದ್ಯರ ಪ್ರತಿಭಟನೆ: ಹಲಗಾ ಗ್ರಾಮದ ಬಳಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಅಧಿವೇಶನದಲ್ಲಿ ಮಸೂದೆ ಮಂಡಿಸಿ ಚರ್ಚೆ ಮಾಡಿದರೆ ನಮ್ಮ ವಿರೋಧ ಇಲ್ಲ. ಆದರೆ ಮಸೂದೆಯನ್ನು ಪಾಸ್ ಮಾಡಿದ್ದೇ ಆದರೆ ಅಂದಿನಿಂದ ರಾಜ್ಯಾದ್ಯಂತ ಖಾಸಗಿ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಲಾಗುವುದು. ನಮ್ಮ ಬೇಡಿಕೆ ಈಡೇರುವವರೆಗೆ ಈ ಅಧಿವೇಶನದ ಸಮಯದಲ್ಲಿ ನ.14 ರಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ರವೀಂದ್ರನ್ ಹೇಳಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಗದೀಶ ಶೆಟ್ಟರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಸರ್ಕಾರದ ಧೋರಣೆ ಹಾಗೂ ಆರೋಗ್ಯ ಸಚಿವರ ಕ್ರಮವನ್ನು ಕಟುವಾಗಿ ಟೀಕಿಸಿದರು. ತಮಟೆ ಚಳವಳಿ ಇನ್ನೊಂದೆಡೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯರು ರೈಲ್ವೆ ನಿಲ್ದಾಣದ ಬಳಿ ತಮಟೆ ಚಳವಳಿ ನಡೆಸಿದರು.
ಪೂರ್ವ ನಿಗದಿಯಂತೆ ರೈಲ್ವೆ ನಿಲ್ದಾಣದಿಂದ ಸುವರ್ಣ ವಿಧಾನಸೌಧದವರೆಗೆ ಕಾರ್ಯಕರ್ತರು ತಮಟೆ ಮತ್ತು ಕಹಳೆ ಚಳವಳಿ ನಡೆಸಲು ನಿರ್ಧರಿಸಿದ್ದರು. ಆದರೆ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಹೋರಾಟ ಸಮಿತಿ ಸದಸ್ಯರು ರೈಲ್ವೆ ನಿಲ್ದಾಣದ ಬಳಿಯೇ ಕುಳಿತು ಧರಣಿ ನಡೆಸಿದರು. ಇದನ್ನು ಹೊರತುಪಡಿಸಿ ಸುವರ್ಣ ವಿಧಾನಸೌಧದ ಬಳಿ ಸರ್ಕಾರಿ ಪ್ರಾಥಮಿಕ ಶಾಲಾ ಆಯಾಗಳು, ಮಾದಿಗ ಯುವ ಸೇನೆ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದರು.