ಬೆಳಗಾವಿ: ಕೆಲ ವರ್ಷಗಳ ಹಿಂದೆ ದೂರದ ಸಂಬಂಧವನ್ನು ಗಟ್ಟಿಗೊಳ್ಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅಂಚೆಯಣ್ಣ ಈಗ ಮತ್ತೆ ಜನರ ಮನೆ ಬಾಗಿಲಿಗೆ ಬಂದು ಬ್ಯಾಂಕ್ ಸೇವೆ ನೀಡುವ ಮೂಲಕ ಮತ್ತಷ್ಟು ಹತ್ತಿರವಾಗಲಿದ್ದಾನೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ನಗರದ ಟಿಳಕವಾಡಿಯ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಶನಿವಾರ ನಡೆದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಳ್ಳಿ ಜನರಿಗೆ ಉತ್ಕೃಷ್ಟ ಹಾಗೂ ಪ್ರಾಮಾಣಿಕ ಸೇವೆ ನೀಡುವ ಮೂಲಕ ಪೋಸ್ಟ್‌ಮನ್‌ಗಳು ಜನರಿಗೆ ಹತ್ತಿರವಾಗಿದ್ದಾರೆ. ಇನ್ನು ಮನೆ ಬಾಗಿಲಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬರಲಿದ್ದು, ಮುಖ್ಯವಾಗಿ ಜನರ ಅನುಕೂಲಕ್ಕಾಗಿ ಈ ಬ್ಯಾಂಕ್ ನಿತ್ಯ ಸೇವೆ ನೀಡಲಿದೆ ಎಂದರು.
ಜಿಲ್ಲೆಯ ಐದು ಕಡೆಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಪಿಐಐಬಿ) ಆರಂಭಿಸಲಾಗುತ್ತಿದ್ದು, ಹಂತ ಹಂತವಾಗಿ ಎಲ್ಲ ಅಂಚೆ ಕಚೇರಿಗಳಲ್ಲಿ ಆರಂಭಿಸಲಾಗುವುದು. ಟಿಳಕವಾಡಿ, ಸವದತ್ತಿ, ರಾಮದುರ್ಗ, ಹುಲಿಕಟ್ಟಿ ಹಾಗೂ ಹಳೆ ಹುಲಗೇರಿಯಲ್ಲಿ ಆರಂಭಿಸಲಾಗಿದೆ. ಈ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ನೀಡಲಿದೆ. ಈ ಸೇವೆ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ ಎಂದರು.
ನಗರದಲ್ಲಿ ಕೇಂದ್ರ ಅಂಚೆ ಕಚೇರಿ ಬಳಿಯ ವೃತ್ತದಲ್ಲಿ ಅಂಚೆಯಣ್ಣನ ಮೂರ್ತಿ ಸ್ಥಾಪನೆಗೆ ಈಗಾಗಲೇ ದಂಡುಮಂಡಳಿ ಒಪ್ಪಿಗೆ ಸೂಚಿಸಿದೆ. ಅಕ್ಟೋಬರ್ ಒಳಗೆ ಮೂರ್ತಿ ಸ್ಥಾಪನೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಕೇಂದ್ರ ಸಚಿವರನ್ನು ಆಹ್ವಾನಿಸಲಾಗುವುದು ಎಂದು ಸಂಸದ ಅಂಗಡಿ ತಿಳಿಸಿದರು.
ಶಾಸಕ ಅನಿಲ ಬೆನಕೆ ಮಾತನಾಡಿ, ಮೊಬೈಲ್ ಯುಗದಲ್ಲಿ ಅಂಚೆ ಕಚೇರಿಗಳು ಬಂದ್ ಆಗುವ ಸ್ಥಿತಿಯಲ್ಲಿದ್ದವು. ಪ್ರಧಾನಿ ನರೇಂದ್ರ ಮೋದಿ ಅಂಚೆ ಕಚೇರಿ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಇದನ್ನು ತ್ತೇಜಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪಾಲಿಕೆ ಸದಸ್ಯ ರಾಕೇಶ ಪಲಂಗೆ, ಬಿಜೆಪಿ ನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ಮಂಗೇಶ ಪವಾರ, ಅಂಚೆ ಇಲಾಖೆ ಅಧೀಕ್ಷಕ ಎಸ್.ಡಿ. ಕುಲಕರ್ಣಿ, ನೂತನ ಬ್ಯಾಂಕ್ ವ್ಯವಸ್ಥಾಪಕ ಮನೇಶ ತಿವಾರಿ ಸೇರಿದಂತೆ ಇತರರು ಇದ್ದರು.