Advertisement

ಬೆಳಗಾವಿ: ಅಂಗನವಾಡಿಗಳಿಗೂ ಹೈಟೆಕ್‌ ಸ್ಪರ್ಶ-ಸಚಿವೆ ಹೆಬ್ಬಾಳಕರ

05:52 PM Aug 01, 2024 | Team Udayavani |

■ ಉದಯವಾಣಿ ಸಮಾಚಾರ
ಬೆಳಗಾವಿ: ದೇಶ ಬೆಳೆಯುತ್ತಿದೆ; ರಾಜ್ಯವೂ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಹಾಗೆಯೇ ನಮ್ಮ ಅಂಗನವಾಡಿಗಳೂ ಉನ್ನತೀಕರಣ ಆಗಬೇಕೆಂಬ ಆಶಯದಿಂದ ನಮ್ಮ ಇಲಾಖೆ  ಅಂಗನವಾಡಿಗಳನ್ನು ಆಧುನೀಕರಣಗೊಳಿಸುತ್ತಿದೆ
ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಹಾಗೂ ವಿಶೇಷಚೇತನರ ಇಲಾಖೆ ವತಿಯಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

ಇದು ಪೈಪೋಟಿ ಯುಗ, ಆಧುನಿಕ ತಂತ್ರಜ್ಞಾನದ ಯುಗ. ಇಂತಹ ಯುಗದಲ್ಲಿ ಬಿಡುವಿಲ್ಲದೆ ದುಡಿಯುವ ಜನರ ಮಕ್ಕಳು, ರೈತರ ಮಕ್ಕಳೂ ನರ್ಸರಿ ಕಲಿಯಬೇಕೆಂಬ ಆಶಯದಿಂದ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗಿದೆ.ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಮಕ್ಕಳಿಗೆ ಕಲಿಸುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 250 ಎಲ್‌ಕೆಜಿ, ಯುಕೆಜಿ ನರ್ಸರಿಗಳು ಚಾಲನೆಗೊಂಡಿವೆ ಎಂದು ಹೇಳಿದರು.

49 ವರ್ಷಗಳ ಹಿಂದೆ ಇಡೀ ದೇಶದಲ್ಲೇ ಮೊದಲ ಬಾರಿಗೆ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ ಹೆಗ್ಗಳಿಕೆ ಕರ್ನಾಟಕದ್ದು. ಈಗ ಮತ್ತೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸುವ ಮೂಲಕ ಕರ್ನಾಟಕ ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆಯುವಂತ ಹೊಸ ದಾಖಲೆ ಮಾಡಿದೆ.

ಬಡವರ, ಹಳ್ಳಿಯ ರೈತರ ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಯಲ್ಲಿ ಅವರಿಗೆ ಒಳ್ಳೆಯ ಶಿಕ್ಷಣ ಸಿಗಬೇಕು ಎಂಬ ಆಶಯದಿಂದ ದಿ. ಇಂದಿರಾ ಗಾಂಧಿಯವರು ಕರ್ನಾಟಕದಲ್ಲಿ ಅಂಗನವಾಡಿ ಸ್ಥಾಪಿಸಿದರು. ಮುಂದಿನ ವರ್ಷಕ್ಕೆ ಅಂಗನವಾಡಿಗಳು 50 ವರ್ಷ ತುಂಬಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದರು.

Advertisement

ಅಂಗನವಾಡಿಗಳಲ್ಲಿ ಸರ್ಕಾರದ, ಇಲಾಖೆಯ ಅಶಯದಂತೆ ಕಾರ್ಯಕರ್ತೆಯರು ಕೆಲಸ ಮಾಡಬೇಕು. ಎಲ್ಲರೂ ತಮ್ಮ ಮಕ್ಕಳಂತೆ ಫೋಷಿಸಿ, ಅವರನ್ನು ಒಳ್ಳೆಯ ಶಿಕ್ಷಣವಂತರಾಗಿ ಬೆಳೆಯಲು ಸಹಕಾರ ನೀಡಬೇಕು. ಈಗ ಅಂಗನವಾಡಿಗಳಲ್ಲಿ ಕೆಲಸ ಮಾಡುವವರಿಗೆ ಪಿಯುಸಿ ಮಾನದಂಡ ಮಾಡಲಾಗಿದೆ. ಆದರೆ ಈಗಾಗಲೇ ಅಂಗನವಾಡಿಗಳಲ್ಲಿ ಎಂಎ, ಬಿಎ, ಬಿಎಡ್‌, ಬಿಇ ಕಲಿತವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.ಇದು ಹೆಮ್ಮೆಯ ಸಂಗತಿ ಎಂದು ಹೆಬ್ಬಾಳಕರ ಹೇಳಿದರು.

ಅಂಗನವಾಡಿಗಳೆಂದರೆ ಮಕ್ಕಳ ವಿದ್ಯಾಭ್ಯಾಸದ ಫ್ಯಾಕ್ಟರಿಯಾಗಿ ತಯಾರು ಮಾಡುವ, ಮಕ್ಕಳ ಮಾಡೆರ್ನ್ ಮಾಡುವುದಕ್ಕೆ
ಎಲ್ಲ ರೀತಿಯಿಂದಲೂ ಸನ್ನದ್ಧವಾಗಿವೆ. ಇದಕ್ಕೆ ಮುಖRಮಂತ್ರಿ ಸಿದ್ದರಾಮಯ್ಯನವರು ಆಶೀರ್ವಾದ ನೀಡಿದ್ದು, ಅಂಗನವಾಡಿಗಳಿಗೆ ಹೊಸ ರೂಪ, ಹೊಸ ಕಳೆ ತರಲು ಇಲಾಖೆ ಸನ್ನದ್ಧವಾಗಿದೆ ಎಂದು ಸಚಿವೆ ಹೆಬ್ಬಾಳಕರ ಹೇಳಿದರು.

ಗ್ರಾಮೀಣ ಕ್ಷೇತ್ರದಲ್ಲಿ ನೇಮಕಗೊಂಡ 43 ಜನ ಅಂಗನವಾಡಿ ಸಹಾಯಕಿಯರು ಹಾಗೂ 6 ಜನ ಕಾರ್ಯಕರ್ತೆಯರಿಗೆ ಸಚಿವರು ಆದೇಶ ಪತ್ರ ವಿತರಿಸಿದರು. ಕಾರ್ಯಕರ್ತೆಯರಿಗೆ ಹೊಸ ಮೊಬೈಲ್‌ ಹ್ಯಾಂಡ್‌ ಸೆಟ್‌ ವಿತರಿಸಲಾಯಿತು. ಇಲಾಖೆಯ ಉಪನಿರ್ದೇಶಕ ನಾಗರಾಜ, ಸಿಡಿಪಿಒ ಸುಮಿತ್ರಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

ರಾಜ್ಯಾದ್ಯಂತ 18 ಸಾವಿರ ಮಾಂಟೆಸ್ಸರಿ ಆರಂಭ
ಬಹಳ ವರ್ಷಗಳಿಂದ ಚಾಲ್ತಿಯಲ್ಲಿದ್ದ ನಮ್ಮ ಅಂಗನವಾಡಿ ಹೆಸರನ್ನೂ ಬದಲಾಯಿಸಿ ಈಗ ಸರ್ಕಾರಿ ಮಾಂಟೆಸ್ಸರಿ ಎಂದು ಹೆಸರು ಇಡಲಾಗಿದೆ. ಉತ್ತರ ಕರ್ನಾಟಕ ಜನರಿಗೆ ಗೊತ್ತಾಗಲೆಂದು ಎಲ್‌ಕೆಜಿ, ಯುಕೆಜಿ ಎಂದು ಕರೆಯಲಾಗುತ್ತದೆ. ದಕ್ಷಿಣ ಕರ್ನಾಟಕದ, ಮೈಸೂರು-ಕರ್ನಾಟಕ ಭಾಗದ ಕಡೆಗಳಲ್ಲಿ ಸರ್ಕಾರಿ ಮಾಂಟೆಸ್ಸರಿಗಳೆಂದು ಕರೆಯಲಾಗುತ್ತದೆ.

ರಾಜ್ಯದಲ್ಲಿ 18 ಸಾವಿರ, ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು, ಅದರಲ್ಲೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ 300ಕ್ಕೂ ಅಧಿಕ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುವುದು. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದಲ್ಲಿ ಮಾಂಟೆಸ್ಸರಿಗಳನ್ನು ತೆರೆಯಲಾಗುತ್ತಿದ್ದು, ಇಲಾಖೆ ವತಿಯಿಂದ ಮಕ್ಕಳಿಗೆ ಯುನಿಫಾರಂ, ಸ್ಕೂಲ್‌ ಬ್ಯಾಗ್‌, ನೋಟ್‌ ಪುಸ್ತಕ, ಕಲಿಕಾ ಪುಸ್ತಕಗಳನ್ನು ವಿತರಿಸಲಾಗುವುದು. ಮುಂದಿನ ತರಗತಿಗಳಿಗೆ ಹೋಗಲು ಟಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next