Advertisement

ಬೆಳಗಾವಿ: ಸುವರ್ಣ ವಿಧಾನಸೌಧ ಬಳಿ ರೈತರ ಪ್ರತಿಭಟನೆ

06:18 PM Dec 05, 2023 | Team Udayavani |

ಬೆಳಗಾವಿ: 2020ರ ಕೃಷಿ ಕಾಯ್ದೆ ಹಿಂಪಡೆಯಬೇಕು. ಬರಪೀಡಿತ ಪ್ರದೇಶಗಳ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ಬಸ್‌ನಲ್ಲಿ ಹತ್ತಿಸಿಕೊಂಡು ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪ ಗ್ರಾಮದ ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಹೋದರು.

ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಮಧ್ಯಾಹ್ನದಿಂದ ಪ್ರತಿಭಟನೆ ಆರಂಭಿಸಿದ ರೈತರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಸಂಜೆ ಹೊತ್ತಿಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ.ಮಹಾದೇವಪ್ಪ, ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ.

ಈ ಹಿಂದಿನ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯನ್ನು ಹಿಂಪಡೆಯಲಾಗುವುದು. ಈ ಬಗ್ಗೆ ಸಿಎಂ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ನಾವು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೇವೆ.

Advertisement

ಆದರೆ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ, ರೈತರೊಂದಿಗೆ ಚೆಲ್ಲಾಟ ಆಡುವ ಬದಲು ರೈತರ ಹಿತ ಕಾಪಾಡಬೇಕು, ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಬರಗಾಲದ ತುರ್ತು ಕಾರ್ಯಕ್ರಮಗಳ ಜಾರಿ,
ಹಾಲಿನ ದರ ಹೆಚ್ಚಳ, ಎಂಎಸ್‌ಪಿ ಶಾಸನಬದ್ಧ ಕಾಯ್ದೆ ಜಾರಿ, ಸೆ.22ರ ವಿದ್ಯುತ್‌ ಕಾಯ್ದೆ ವಾಪಸ್‌, ಕಬ್ಬಿಗೆ ಎಫ್‌ಆರ್‌ಪಿ ಜತೆ ಎಸ್‌ಎಪಿ ನೀಡುವುದು, ತೆಂಗಿಗೆ ವಿದೇಶಿದಿಂದ ಬರುವ ಉತ್ಪನ್ನಕ್ಕೆ ಆಮದು ಸುಂಕ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಪ್ರತಿ ಕ್ವಿಂಟಲ್‌ಗೆ 25 ಸಾವಿರ ರೂ. ನಿಗದಿ ಮಾಡಬೇಕು. ಬಗರ್‌ ಹುಕ್ಕಂ ಸಾಗುವಳಿ ಜಾರಿ ಮಾಡಬೇಕು. ಎತ್ತಿನಹೊಳೆ, ಮೇಕೆದಾಟು ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಅನುಮತಿ ಸಿಕ್ಕ ಬಳಿಕ ಮಹದಾಯಿ, ಮೇಕೆದಾಟು ಆರಂಭ
ಮಹದಾಯಿ ಮತ್ತು ಮೇಕೆದಾಟು ಯೋಜನೆ ಕಾಮಗಾರಿಯನ್ನು ಆರಂಭಿಸಲು ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ಸಿಗಬೇಕಿದೆ. ಅಲ್ಲಿಂದ ಅನುಮತಿ ಸಿಕ್ಕ ಬಳಿಕ ಈ ಯೋಜನೆ ಆರಂಭಿಸಿ ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ರೈತರ ಬೇಡಿಕೆಗಳು ಏನಿವೆ ಎಂಬುದರ ಬಗ್ಗೆ ಕೇಳಿಕೊಂಡು ಬರಲು ಸಿಎಂ ಸಿದ್ದರಾಮಯ್ಯ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ನಿಮ್ಮ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಸಿದ್ದರಾಮಯ್ಯ ರೈತ ಸಂಘದಿಂದಲೇ ಬಂದವರು, ರೈತರ ಸಮಸ್ಯೆ ಏನು
ಎಂಬುದರ ಬಗ್ಗೆ ಅವರಿಗೆ ಅರಿವಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ. ಮಹಾದೇವಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next