Advertisement

New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!

01:39 PM Jan 01, 2025 | Team Udayavani |

2024..ನೇಪಥ್ಯಕ್ಕೆ ಸರಿದಿದೆ. 2025ರ ಪ್ರವೇಶವಾಗಿದೆ. ಈ ಹೊಸ ವರ್ಷದ ಆರಂಭ ಸಹಜವಾಗಿಯೇ ಎಲ್ಲರಲ್ಲಿ ಹೊಸ ಉತ್ಸಾಹ ಮತ್ತು ಬೆಟ್ಟದಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ನೆನಪಿನ ಅಂಗಳಕ್ಕೆ ಸರಿದು ಹೋದ 2024ರಲ್ಲಿ ಸಾಕಷ್ಟು ಕಹಿ ಘಟನೆಗಳಾಗಿವೆ. ಸಿಹಿ -ಕಹಿ ಮಿಶ್ರಣಗಳ ನಡುವೆಯೇ ಹಲವಾರು ನಿರೀಕ್ಷೆ-ಸವಾಲುಗಳನ್ನು ಬಿಟ್ಟು ಹೋಗಿದೆ. ಸತತ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ವಿಶೇಷವಾಗಿ ರೈತ ಸಮುದಾಯಕ್ಕೆ ವಿಶ್ವಾಸ ಮೂಡಿಸುವ ಕೆಲಸ ಆದ್ಯತೆ ಮೇಲೆ ಆಗಬೇಕಿದೆ. ಮನೆಗಳನ್ನು ಕಳೆದುಕೊಂಡವರಿಗೆ ಶಾಶ್ವತವಾಗಿ ಸೂರು ನೀಡುವ ಕೆಲಸ ಬಹಳ ತುರ್ತಾಗಿ ಆಗಬೇಕಿದೆ. ಜನನಾಯಕರು ರಾಜಕೀಯ
ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡದೆ ಜಿಲ್ಲೆಯ ಜನರ ಸಮಸ್ಯೆಗಳ ಪರಿಹಾರ ಕಂಡು ಹಿಡಿಯಲು ಗಮನ ಹರಿಸಬೇಕಿದೆ.
ಜಿಲ್ಲೆಯ ಹಲವು ಪ್ರಮುಖ ಬೇಡಿಕೆಗಳು ಮತ್ತೆ ಸಾಕಾರಗೊಳ್ಳಬೇಕಿವೆ. ಈ ಕುರಿತು ಕೇಶವ ಆದಿ ವಿವರಿಸಿದ್ದಾರೆ.

Advertisement

ಜಿಲ್ಲೆ ವಿಭಜನೆ
ರಾಜ್ಯದ ಅತೀ ದೊಡ್ಡ ಜಿಲ್ಲೆ ಎನಿಸಿರುವ ಬೆಳಗಾವಿ ಯಲ್ಲಿ ಈಗ ಪ್ರಮುಖವಾಗಿ ಕೇಳಿ ಬರುತ್ತಿರುವ ಬೇಡಿಕೆ ಇದು. 15 ತಾಲೂಕುಗಳನ್ನು ಹೊಂದಿರುವ ಜಿಲ್ಲೆ ವಿಭಜಿಸಿ ಎರಡು ಹೊಸ ಜಿಲ್ಲೆಗಳನ್ನಾಗಿ ಮಾಡಬೇಕೆಂಬ ಒತ್ತಾಯ ಇದೆ. ಆಡಳಿತಾತ್ಮಕ ಅನುಕೂಲ ದೃಷ್ಟಿಯಿಂದ ಜಿಲ್ಲೆಯ ವಿಭಜನೆ ಅನಿವಾರ್ಯ. ಇದರ ಬಗ್ಗೆ ಚಳಿಗಾಲ ಅಧಿವೇಶನದಲ್ಲಿ ಚರ್ಚೆಯಾಗಿದೆ. ಇದರ ಅಂತಿಮ ನಿರ್ಧಾರ ಸರಕಾರ, ಜಿಲ್ಲೆಯ ಜನಪ್ರತಿನಿಧಿಗಳ ಕೈಯಲ್ಲಿದೆ.

ನೀರಾವರಿ ಯೋಜನೆ
ಜಿಲ್ಲೆಯಲ್ಲಿ ಬಹಳಷ್ಟು ನೀರಾವರಿ ಯೋಜನೆಗಳು ಈಗಲೂ ನನೆಗುದಿಗೆ ಬಿದ್ದಿವೆ. ಯೋಜನೆಗೆ ಮಂಜೂರಾತಿ ಸಿಕ್ಕಿದ್ದರೂ ಅನುದಾನ ಬಿಡುಗಡೆಯಾಗುತ್ತಿಲ್ಲ. ಮಹಾಲಕ್ಷ್ಮಿ ಏತ ನೀರಾವರಿ, ಕರಗಾಂವ ಏತ ನೀರಾವರಿ, ವೀರಭದ್ರೇಶ್ವರ ಏತ ನೀರಾವರಿ, ಬಸವೇಶ್ವರ ಏತ ನೀರಾವರಿ, ಚಚಡಿ ಏತ ನೀರಾವರಿ ಯೋಜನೆಗಳು ಹಲವಾರು ವರ್ಷಗಳಿಂದ ಪ್ರಗತಿಯ ಹಂತದಲ್ಲೇ ಇವೆ. ಬಹುತೇಕ ಯೋಜನೆಗಳು ಕುಂಟುತ್ತ ಸಾಗಿವೆ. ಮೇಲಾಗಿ ಮಲಪ್ರಭಾ, ಘಟಪ್ರಭಾ ಜಲಾಶಯ ನಿರ್ಮಾಣವಾಗಿ ಮೂರು ದಶಕಗಳೇ ಕಳೆದರೂ ಇನ್ನೂ ಕೊನೆಯ ಹಳ್ಳಿಯ ಜನರಿಗೆ ಇದರ ಲಾಭ ಸಿಕ್ಕಿಲ್ಲ. ಸರಕಾರ ಈ ನಿಟ್ಟಿನಲ್ಲಿ ಗಂಭೀರ
ಆಲೋಚನೆ ಮಾಡಬೇಕೆಂಬ ಒತ್ತಾಯವಿದೆ.

ಕಬ್ಬಿನ ಹೋರಾಟಕ್ಕೆ ಮುಕ್ತಿ ಯಾವಾಗ..?
ಕಬ್ಬಿನ ಹೋರಾಟ ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಅಂಟಿಕೊಂಡಿರುವ ಶಾಪದಂತಾಗಿದೆ. ರಾಜ್ಯದಲ್ಲೇ ಅತೀ
ಹೆಚ್ಚು ಕಬ್ಬು ಬೆಳೆಯುವ ಮತ್ತು ಅತೀ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಕಬ್ಬಿನ ಸಮಸ್ಯೆಯಿಂದ ಇದುವರೆಗೆ ಮುಕ್ತಿ ಪಡೆದೇ ಇಲ್ಲ. ಕಬ್ಬಿನದ ದರ ಮತ್ತು ಬಾಕಿ ಹಣ ಪಾವತಿ ವಿಷಯದಲ್ಲಿ ನಿರಂತರ ಹೋರಾಟ ನಡೆದಿದ್ದರೂ ನ್ಯಾಯಯುತ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಇದಕ್ಕೆ ಶಾಸನಬದ್ಧವಾಗಿ ಕಾನೂನು ರಚಿಸಿ ಶಾಶ್ವತ ಇತಿಶ್ರೀ ಹಾಡಬೇಕು ಎಂಬುದು ರೈತರ ಒತ್ತಾಸೆ.

Advertisement

ವರ್ತುಲ ರಸ್ತೆ ನಿರ್ಮಾಣ
ಸುವರ್ಣ ವಿಧಾನಸೌಧ ನಿರ್ಮಾಣ ನಂತರ ಬೆಳಗಾವಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಬದಲಾಗಿದೆ. ವಾಹನ ಸಂಚಾರ ದಟ್ಟಣೆ ಕೈಮೀರುತ್ತಿದೆ. ಸಂಚಾರ ಸಮಸ್ಯೆಗೆ ಶಾಶ್ವತ ಕೊನೆ ಹಾಡುವ ನಿಟ್ಟಿನಲ್ಲಿ ನಗರದಲ್ಲಿ ರಿಂಗ್‌ ರಸ್ತೆ, ಫ್ಲೆಓವರ್‌ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗಳಿಗೆ‌ ಚಾಲನೆ ನೀಡುವ ತುರ್ತು ಅನಿವಾರ್ಯತೆ ಇದೆ. ವರ್ತುಲ ರಸ್ತೆ ನಿರ್ಮಾಣಕ್ಕೆ ಮೇಲಿಂದ ಮೇಲೆ ರೈತರ ಆಕ್ಷೇಪಣೆಯಾಗುತ್ತಿದ್ದು ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ.

ರೈಲು ಮಾರ್ಗಗಳ ನಿರ್ಮಾಣ
ಈಗ ಬಹಳ ಮುಂಚೂಣಿಯಲ್ಲಿರುವ ಬೇಡಿಕೆ ಇದು. ಒಂದು ಕಡೆ ಧಾರವಾಡ- ಕಿತ್ತೂರು- ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕೆ
ಒತ್ತಡಗಳು ಹೆಚ್ಚಾಗುತ್ತಿದ್ದರೆ, ಇನ್ನೊಂದು ಕಡೆ ಲೋಕಾಪುರ- ಧಾರವಾಡ, ವಿಜಯಪುರ-ಶೇಡಬಾಳ ಹೊಸ ಮಾರ್ಗಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತಾಯಗಳು ಸಹ ಬರುತ್ತಿವೆ. ಇದಕ್ಕಾಗಿ ಬೆಳಗಾವಿ, ಬಾಗಲ ಕೋಟೆ ಜಿಲ್ಲೆಗಳಲ್ಲಿ ಹೋರಾಟಗಳು ಸಹ ಆರಂಭವಾಗಿವೆ. ಹೊಸ ವರ್ಷದಲ್ಲಿ ಈ ಮಾರ್ಗಗಳ ಸಮೀಕ್ಷೆಗೆ ಚಾಲನೆ ಸಿಕ್ಕರೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ.

ಆಸ್ಪತ್ರೆಗಳಿಗೆ ಬಲ
ಜಿಲ್ಲೆಯಲ್ಲಿ ಕಳೆದ ವರ್ಷ ಸರಕಾರಿ ಆಸ್ಪತ್ರೆಗಳು ಬಹಳ ಸುದ್ದಿಯಲ್ಲಿದ್ದವು. ಸರಿಯಾಗಿ ಚಿಕಿತ್ಸೆ ಸಿಗದೆ ರೋಗಿಗಳ ಅದರಲ್ಲೂ ಬಾಣಂತಿಯರ ಸಾವು ಜಿಲ್ಲೆಗೆ ಕೆಟ್ಟ ಹೆಸರು ಬರುವಂತೆ ಮಾಡಿತು. ಈ ಕಳಂಕ ತೊಡೆದು ಹಾಕಲು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎಂಬ ದೂರಿಗೆ ಶಾಶ್ವತವಾಗಿ ಕೊನೆ ಹಾಡಬೇಕಿದೆ.
ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಎಂಬುದು ಮರೀಚಿಕೆಯಾಗಿಯೇ ಉಳಿದಿದ್ದು ಈ ಕೊರತೆ ನೀಗಿಸುವ ಸವಾಲು
ಸರಕಾರದ ಮುಂದಿದೆ.

ಗ್ರಾಮಗಳ ಸಳಾಂತರ
ಧಾರಾಕಾರ ಮಳೆ ಹಾಗೂ ನದಿಗಳ ಪ್ರವಾಹದಿಂದ ಅಪಾರ ನಷ್ಟ ಅನುಭವಿಸಿರುವ ನದಿ ತೀರದ ಗ್ರಾಮಗಳ ಜನರಲ್ಲಿ ಸದಾ
ಪ್ರವಾಹದ ಆತಂಕ ಇದೆ. ಇದಕ್ಕಾಗಿ ಸರಕಾರ ಕೋಟಿಗಟ್ಟಲೇ ಹಣ ವೆಚ್ಚ ಮಾಡಿ ಪರಿಹಾರ ನೀಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಮುಳುಗಡೆ ಹಳ್ಳಿಗಳ ಸ್ಥಳಾಂತರ ಇದಕ್ಕೆ ಇರುವ ಏಕೈಕ ಪರಿಹಾರ. ಸರಕಾರ ಈ ಕೆಲಸದ ಕಡೆಗೆ ವಿಶೇಷ ಗಮನಹರಿಸಿ ಆದ್ಯತೆ ಮೇರೆಗೆ ಬಗೆಹರಿಸಬೇಕಿದೆ.

ವಿಶೇಷ ಅನುದಾನ 
ಬೆಳಗಾವಿ ಗಡಿ ಭಾಗದಲ್ಲಿರುವು ದರಿಂದ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ನಿರ್ಲಕ್ಷ್ಯಕ್ಕೆ ತುತ್ತಾಗಿದೆ ಎಂಬ ಭಾವನೆ ಜನರ ಮನಸ್ಸಿನಲ್ಲಿ ಈಗಲೂ ಗಟ್ಟಿಯಾಗಿ ಬೇರೂರಿದೆ. ಇದನ್ನು ಹೋಗಲಾಡಿಸಲು ಸರಕಾರ ಈ ಭಾಗಕ್ಕೆ ವಿಶೇಷ ಅನುದಾನ ನೀಡಿ
ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣ ಗೊಳಿಸಬೇಕಿದೆ. ಗಡಿ ಭಾಗದ ಕನ್ನಡ ಶಾಲೆಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಬೇಕೆಂಬ ಬೇಡಿಕೆಯೂ ಇದೆ.

ಕೈಗಾರಿಕೆ ಅಭಿವೃದ್ಧಿ
ರೈಲ್ವೆ ಹಾಗೂ ವಿಮಾನ ಸಂಚಾರ ವ್ಯವಸ್ಥೆ ಈಗ ಬಹಳಷ್ಟು ಸುಧಾರಿಸಿದ್ದು ಹೊರ ರಾಜ್ಯಗಳ ಉದ್ಯಮಿಗಳನ್ನು ಆಕರ್ಷಿಸಲು ಈ ಎರಡೂ ಸಂಚಾರ ಸೌಲಭ್ಯಗಳು ಹಸಿರು ಹೊದಿಕೆ ಹಾಸಿವೆ. ಇದಕ್ಕೆ ಪೂರಕವಾಗಿ ಈಗ ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆಗಳನ್ನು ತರುವ ಜವಾಬ್ದಾರಿ ಸರಕಾರದ ಮೇಲಿದೆ.

ಕುಡಿಯುವ ನೀರಿನ ಒಪ್ಪಂದ
ಐದು ವರ್ಷಗಳ ಹಿಂದೆ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿ ಚಿಕ್ಕೋಡಿ, ಅಥಣಿ, ಕಾಗವಾಡ, ರಾಯಬಾಗ ತಾಲೂಕುಗಳಲ್ಲಿ
ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿತ್ತು.ಆಗ ಮಹಾರಾಷ್ಟ್ರದಿಂದ ನಾಲ್ಕು ಟಿಎಂಸಿ ನೀರು ಕೇಳಿದರೂ ಬಿಡುಗಡೆ
ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಬೇಸಿಗೆ ಸಮಯದಲ್ಲಿ ನೀರು ಹಂಚಿಕೆ ವಿಷಯವಾಗಿ ಎರಡೂ ರಾಜ್ಯಗಳ ಮಧ್ಯೆ ಒಪ್ಪಂದ
ಮಾಡಿಕೊಳ್ಳಬೇಕೆಂಬ ಒತ್ತಾಯ ಬಲವಾಗಿದೆ. ಈ ವರ್ಷ ಸರಕಾರ ಬೇಸಿಗೆ ಬರುವ ಮೊದಲೇ ಈ ಕಾರ್ಯ ಪೂರ್ಣಗೊಳಿಸಬೇಕೆಂಬ ಬೇಡಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next