ವಿಜಯಪುರ: ನಗರದಲ್ಲಿ ಜರುಗಿದ ದಸರಾ ಕ್ರೀಡಾಕೂಟದ ಬೆಳಗಾವಿ ವಿಭಾಗ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಧಾರವಾಡದ ಮಹಿಳಾ ಹಾಗೂ ಪುರುಷರ ತಂಡ ಪ್ರಶಸ್ತಿ ಬಾಚಿಕೊಂಡಿದೆ. ಫುಟ್ಬಾಲ್‌ನಲ್ಲಿ ಬೆಳಗಾವಿ ಪುರುಷರ ತಂಡ ಪ್ರಥಮ ಸ್ಥಾನ ತಂಡ ಪಡೆದು ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿವೆ.
ಡಾ| ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬೆಳಗಾವಿ ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷ ಬಾಸ್ಕೆಟಬಾಲ್ ಫೈನಲ್ ಪಂದ್ಯದಲ್ಲಿ ಬೆಳಗಾವಿ ತಂಡದ ವಿರುದ್ಧ ಧಾರವಾಡ ತಂಡ 61-57 ಅಂಕಗಳ ರೋಚಕ ಜಯ ಗಳಿಸಿತು.
ಪ್ರಥಮಾರ್ಧದಲ್ಲಿ 31-21 ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದ ಬೆಳಗಾವಿ ತಂಡ ದ್ವಿತೀಯಾರ್ಧದಲ್ಲಿ ಪಂದ್ಯದ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿ ಮಹತ್ವದ ಪಂದ್ಯ ಕೈ ಚೆಲ್ಲಿತ್ತು. ವಿಜೇತ ತಂಡದ ಪರ ಸುನಿಲ 38 ಹಾಗೂ ಸೋತ ತಂಡ ಪರ ಬಾಲು 12 ಅಂಕ ಗಳಿಸಿದರು.
ಮಹಿಳಾ ವಿಭಾಗದಲ್ಲಿ ಧಾರವಾಡದ ತಂಡ 18-3 ಅಂತರದಿಂದ ಬೆಳಗಾವಿ ತಂಡವನ್ನು ಮಣಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿತು. ಗದಗ, ಕಾರವಾರ ತಂಡಗಳು ಭಾಗವಹಿಸಿದ್ದವು. ವಿಜಯಪುರ ಸೈನಿಕ ಶಾಲೆ ಆವರಣದಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ರೋಚಕವಾಗಿತ್ತು. ಕೊನೆ ಗಳಿಗೆಯ ಶೂಟ್‌ಔಟ್‌ನಲ್ಲಿ ಬೆಳಗಾವಿ ತಂಡ 6-5 ಗೋಲುಗಳ ಅಂತರದಿಂದ ಧಾರವಾಡದ ತಂಡದ ವಿರುದ್ಧ ಜಯಗಳಿಸಿ ವಿಜಯ ಮಾಲೆ ಧರಿಸಿದರು.
ವಿಭಾಗ ಮಟ್ಟದ ದಸರಾ ಬಾಸ್ಕೆಟ್‌ಬಾಲ್ ಹಾಗೂ ಫುಟಬಾಲ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಮುಕ್ತಾಯ ಸಮಾರಂಭದಲ್ಲಿ ಜಾವೇದ ಜಮಾದಾರ ಪ್ರಶಸ್ತಿ ವಿತರಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ, ಬಾಸ್ಕೆಟಬಾಲ್ ಸಂಘದ ಅಧ್ಯಕ್ಷ ರಾಜು ಬಿದರಿ, ಸಂಜು ಹಿರೇಮಠ, ತರಬೇತಿದಾರರಾದ ಸದಾಶಿವ ಕೋಟ್ಯಾಳ, ವಿ.ಎಸ್.ಪಾಟೀಲ, ಪಿ.ಕೆ. ಹಸನಕರ್, ರಾಘವೇಂದ್ರ ದೇಶಪಾಂಡೆ, ಯಲ್ಲಪ್ಪ ಜಂಪ್ಲೆ, ಕಿರಣ ಕುಂಬಾರಗೌಡ, ಸಂಜಯ ಆಕಾಶಿ ಉಪಸ್ಥಿತರಿದ್ದರು.