ಬೆಳಗಾವಿ: ಹಾಡಹಗಲೇ ಡಿಎಫ್‌ಒ ಪತ್ನಿಯ ಕೈ, ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹತ್ಯೆ ಮಾಡಿದ ಘಟನೆ ಟಿಳಕವಾಡಿಯ ದ್ವಾರಕಾನಗರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಭಾರ್ಗವಿ ಆನಂದ ಮೋರಪ್ಪನವರ(58) ಎಂಬುವರ ಹತ್ಯೆಯಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರ ಪತಿ ಆನಂದ ಮೋರಪ್ಪನವರ ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ಕಚೇರಿಗೆ ಹೋದ ಸಮಯದಲ್ಲಿ ಕೊಲೆ ಮಾಡಲಾಗಿದೆ. ಮಧ್ಯಾಹ್ನ ಊಟಕ್ಕಾಗಿ ಪತಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ದ್ವಾರಕಾ ನಗರದ ಮನೆಯಲ್ಲಿ ಒಬ್ಬರೇ ಇದ್ದಾಗ ಒಳ ನುಗ್ಗಿದ ದುಷ್ಕರ್ಮಿಗಳು ಭಾರ್ಗವಿ ಅವರ ಬಾಯಿಗೆ ಬಟ್ಟೆ ತುರುಕಿ ಕೈಕಾಲು ಕಟ್ಟಿ ಹಾಲ್‌ನಲ್ಲಿ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಆದರೆ ಮನೆಯಲ್ಲಿನ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಹಳೆ ದ್ವೇಷ ಅಥವಾ ಕೌಟುಂಬಿಕ ಕಲಹ ಆಗಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಮೃತ ಮಹಿಳೆಗೆ ಇಬ್ಬರು ಪುತ್ರಿಯರಿದ್ದು, ಇಬ್ಬರನ್ನೂ ವಿವಾಹ ಮಾಡಿಕೊಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಅಮರನಾಥ ರೆಡ್ಡಿ, ಟಿಳಕವಾಡಿ ಇನ್ಸ್‌ಪೆಕ್ಟರ್ ಬಿ.ಎ. ಜಾಧವ, ಶ್ವಾನ ದಳ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಹಂತಕರು ಮನೆಯೊಳಗೆ ಯಾವ ಕಡೆಯಿಂದ ಪ್ರವೇಶಿಸಿದ್ದರೆಂಬ ಬಗ್ಗೆ ಮಾಹಿತಿ ಕಲೆ ಹಾಕಿದರು. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆ ಕುರಿತು ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಹಂತಕರು ಮನೆಯ ಯಾವುದೇ ವಸ್ತುಗಳನ್ನು ಮುಟ್ಟಿಲ್ಲ. ಹೀಗಾಗಿ ಇದೊಂದು ವ್ಯವಸ್ಥಿತ ಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತನಿಖೆ ಚುರುಕುಗೊಳಿಸಿದ್ದು, ಹಂತಕರನ್ನು ಶೀಘ್ರ ಬಂಧಿಸಲಾಗುವುದು.
ಅಮರನಾಥ ರೆಡ್ಡಿ, ಡಿಸಿಪಿ ಅಪರಾಧ ವಿಭಾಗ