ಕಲಬುರಗಿ: ಸರ್ಕಾರ ಶಾಲಾ ಮಕ್ಕಳ ಆಹಾರದ ವಿಷಯವಾಗಿ ಸಸ್ಯಹಾರ ಮತ್ತು ಮಾಂಸಹಾರ ಎನ್ನುವ ತಾರತಮ್ಯ ಮಾಡಬಾರದು. ಮಕ್ಕಳ ಪೌಷ್ಟಿಕತೆ ಹೆಸರಲ್ಲಿ ನೀಡುತ್ತಿರುವ ಮೊಟ್ಟೆ ವಿತರಣೆ ಕೈಬಿಡಬೇಕೆಂದು ಆಗ್ರಹಿಸಿ ಡಿ. 20ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಸ್ಯಹಾರಿಗಳ ಒಕ್ಕೂಟದ ಪ್ರಧಾನ ಸಂಘಟಕ ಚನ್ನಬಸವಾನಂದ ಸ್ವಾಮೀಜಿ, ಪ್ರಧಾನ ಸಂಚಾಲಕ ದಯಾನಂದ ಸ್ವಾಮೀಜಿ ತಿಳಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ಮೊಟ್ಟೆ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಮೊಟ್ಟೆಗೆ ಪರ್ಯಾಯವಾಗಿ ಹಲವು ಆಹಾರ ಪದಾರ್ಥಗಳಿವೆ. ಎಲ್ಲರೂ ಒಪ್ಪುವ ಮತ್ತು ಏಕರೂಪದ ಪೌಷ್ಟಿಕ ಆಹಾರ ನೀಡಬೇಕೇ ಹೊರತು, ಮಕ್ಕಳಲ್ಲಿ ತಾರತಮ್ಯ ಬೆಳೆಸುವ ಆಹಾರ ವಿತರಣೆ ಸರಿಯಲ್ಲ ಎಂದು ಆಕ್ಷೇಪಿಸಿದರು.
ಧರ್ಮ, ಸಂಸ್ಕೃತಿ, ಪರಂಪರೆ ಹೆಸರಿನಲ್ಲಿ ಅಧಿಕಾರ ನಡೆಸುವ ಬಿಜೆಪಿ ಸರ್ಕಾರಕ್ಕೆ ಈ ನಿರ್ಧಾರ ಶೋಭೆ ತರುವುದಿಲ್ಲ. ನಾವು ಮಾಂಸಹಾರದ ವಿರೋಧವಿಲ್ಲ. ಆದರೆ, ಮಕ್ಕಳಲ್ಲಿ ಭೇದ ಹುಟ್ಟಿಸಬಾರದು. ಹೀಗಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭಾಲ್ಕಿಯಲ್ಲಿ ಮಠಾಧೀಶರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಮೊಟ್ಟೆ ಬದಲಿಗೆ ಪೌಷ್ಟಿಕಾಂಶಯುಕ್ತ ಶೇಂಗಾ, ಸಿರಿಧಾನ್ಯ, ಕಾಳು, ಹಣ್ಣು ನೀಡುವಂತೆ ಸಲಹೆ ನೀಡಿದ್ದೇವೆ ಎಂದರು.
1991ರಲ್ಲಿ ಬಂಗಾರಪ್ಪ ಸರ್ಕಾರ ಮತ್ತು 2006ರಲ್ಲಿ ಸಮ್ಮಿಶ್ರ ಸರ್ಕಾರವೂ ಮೊಟ್ಟೆ ವಿತರಣೆಗೆ ಮುಂದಾಗಿತ್ತು. ಆಗಲೂ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಒಂದು ವೇಳೆ ಮಕ್ಕಳಿಗೆ ಮೊಟ್ಟೆ ಕೊಡುವುದು ಅತ್ಯವಶ್ಯವೇ ಆಗಿದ್ದರೇ, ಶಾಲೆಯ ಆವರಣ ಬಿಟ್ಟು ಇಲ್ಲವೇ ಮನೆಗೆ ಪಾರ್ಸೆಲ್ ನೀಡಲಿ. ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ತಕ್ಷಣವೇ ಮೊಟ್ಟೆ ನೀಡುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.
ಮೊಟ್ಟೆ ಕೊಡುವ ನಿರ್ಧಾರ ಖಂಡಿಸಿ ಡಿ.20ರಂದು ಬೆಳಗಾವಿ ಚಲೋ ಚಳವಳಿ ಹಮ್ಮಿಕೊಂಡಿದ್ದೇವೆ. ಅಲ್ಲಿ ಸಮಾವೇಶ ನಡೆಯಲಿದ್ದು, ನೂರಾರು ಮಠಾಧೀಶರು ಪಾಲ್ಗೊಳ್ಳುವರು. ಅಲ್ಲದೇ, ಸುವರ್ಣ ಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ, ಗೌರವಾಧ್ಯಕ್ಷ ಆರ್.ಕೆ.ಹೆಗಣೆ, ಉಪಾಧ್ಯಕ್ಷ ಸಿದ್ರಾಮಪ್ಪ ಲದ್ದೆ, ಪ್ರಮುಖರಾದ ಕಲ್ಯಾಣಕುಮಾರ, ವೀರಣ್ಣ ಇದ್ದರು.ಮೊಟ್ಟೆ ವಿತರಣೆಯಲ್ಲಿ ಶಾಲಾ ಆವರಣದಲ್ಲಿ ಸಸ್ಯಹಾರ-ಮಾಂಸಹಾರ ಎಂಬ ತಾರತಮ್ಯ ಹುಟ್ಟುಹಾಕಿದಂತೆ ಆಗುತ್ತದೆ. ಆದ್ದರಿಂದ ಸರ್ಕಾರ ಮೊಟ್ಟೆ ವಿತರಣೆ ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಸಸ್ಯಹಾರಿಗಳಿಗೆ ಪರ್ಯಾಯ ಶಾಲೆ ಹಾಗೂ ಅಂಗನವಾಡಿ ತೆರೆಯುವ ಕೆಲಸ ಮಾಡಬೇಕು.
-ದಯಾನಂದ ಸ್ವಾಮೀಜಿ, ಪ್ರಧಾನ ಸಂಚಾಲಕ, ಸಸ್ಯಹಾರಿಗಳ ಒಕ್ಕೂಟ