Advertisement

ಬೆಳಗಾವಿ ಆಯುಷ್‌ ಔಷಧ ತಯಾರಿಕಾ ಘಟಕ ರದ್ದು?

06:30 AM Aug 14, 2018 | Team Udayavani |

ಹುಬ್ಬಳ್ಳಿ: ಬೆಳಗಾವಿಯಿಂದ ಕೆ-ಶಿಪ್‌ ವಿಭಾಗೀಯ ಕಚೇರಿ ಸ್ಥಳಾಂತರ ವಿವಾದ ಇನ್ನೂ ಹಸಿ ಇರುವಾಗಲೇ ಬೆಳಗಾವಿಯಲ್ಲಿ ಉದ್ದೇಶಿತ ಸುಮಾರು 150 ಎಕರೆ ಪ್ರದೇಶದ “ಆಯುಷ್‌ ಔಷಧ ತಯಾರಿಕಾ ಘಟಕ’ ನಿರ್ಮಾಣ ಯೋಜನೆ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಇದು ಮತ್ತೂಂದು ವಿವಾದಕ್ಕೆ ನಾಂದಿಯಾಗುವ ಸಾಧ್ಯತೆ ಇದೆ.

Advertisement

ಬೆಳಗಾವಿಯ ವ್ಯಾಕ್ಸಿನ್‌ ಘಟಕದ ಸುಮಾರು 150 ಎಕರೆ ಪ್ರದೇಶದಲ್ಲಿ ಆಯುಷ್‌ ಔಷಧ ತಯಾರಿಕಾ ಘಟಕ ಸ್ಥಾಪನೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2017-18ನೇ ಸಾಲಿನ ಬಜೆಟ್‌ನಲ್ಲಿ 6 ಕೋಟಿ ರೂ. ಅನುದಾನ ನಿಗದಿಪಡಿಸಿತ್ತು. ಆದರೀಗ ಆಯುಷ್‌ ಔಷಧ ತಯಾರಿಕಾ ಘಟಕ ರದ್ದುಪಡಿಸಿ ಕಳೆದ 4 ವರ್ಷಗಳಿಂದ ಮುಚ್ಚಿರುವ ಬೆಂಗಳೂರಿನ ಕೇಂದ್ರೀಯ ಔಷಧಾಗಾರ ಪುನರುಜ್ಜೀವನಕ್ಕೆ  ಮುಂದಾಗಿದೆ ಎಂದು ಹೇಳಲಾಗುತ್ತಿದೆ.

2004ರಿಂದ ಬೇಡಿಕೆ: ಬೆಂಗಳೂರಿನ ಜಯನಗರದಲ್ಲಿನ ಕೇಂದ್ರೀಯ ಔಷಧಾಗಾರ ಮಾದರಿಯಲ್ಲಿ ಬೆಳಗಾವಿಯಲ್ಲಿ ಆಯುಷ್‌ ಔಷಧ ತಯಾರಿಕಾ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ 2004ರಿಂದಲೇ ಇದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಳಗಾವಿಯಲ್ಲಿ ಆಯುಷ್‌ ಔಷಧ ತಯಾರಿಕಾ ಘಟಕ ಸ್ಥಾಪನೆ ಬೇಡಿಕೆಗೆ ಸ್ಪಂದಿಸಿತ್ತು. ಆವರ್ತ-ಅನಾವರ್ತ ವೆಚ್ಚ ಸೇರಿ ಒಟ್ಟು 20 ಕೋಟಿ ರೂ. ಯೋಜನೆ ಇದಾಗಿದೆ.

ಆಯುಷ್‌ ಔಷಧ ತಯಾರಿಕಾ ಘಟಕಕ್ಕೆ ಬಜೆಟ್‌ನಲ್ಲಿ ಘೋಷಣೆ ಹಾಗೂ ಆರ್ಥಿಕ ಇಲಾಖೆ ಟಿಪ್ಪಣಿ(ಸಂಖ್ಯೆ ಆಇ 576 ವೆಚ್ಚ-5/2017) ಹಾಗೂ ಯೋಜನಾ ಇಲಾಖೆ ಟಿಪ್ಪಣಿ (ಸಂಖ್ಯೆ: ಯೋಇ/35/ಜಶು/2017)ಯೊಂದಿಗೆ ಸರ್ಕಾರ ಘಟಕ ನಿರ್ಮಾಣ ಕುರಿತು 2017ರ ಜೂನ್‌ 3ರಂದು ಆದೇಶ ಹೊರಡಿಸಿತ್ತು(ಸಂಖ್ಯೆ: ಆಕುಕ 142 ಪಿಐಎಂ 2017).
ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದೆ ಎನ್ನಲಾದ ಬೆಂಗಳೂರಿನ ಜಯನಗರದ ಕೇಂದ್ರೀಯ ಔಷಧಾಗಾರದ ಹಲವು ಸಲಕರಣೆಗಳನ್ನು ಬೆಳಗಾವಿಗೆ ಕಳುಹಿಸಲಾಗಿತ್ತು.

ಪೂರಕ ವಾತಾವರಣ: ಬೆಳಗಾವಿಯ ವ್ಯಾಕ್ಸಿನ್‌ ಡಿಪೋದಲ್ಲಿ ಆಯುಷ್‌ ಔಷಧ ತಯಾರಿಕಾ ಘಟಕ ಸ್ಥಾಪನೆಗೆ ಪೂರಕ ವಾತಾವರಣವಿದೆ. ಇಲ್ಲಿ ಕಟ್ಟಡಗಳಿದ್ದು ನವೀಕರಿಸಬೇಕಷ್ಟೆ. ಅಲ್ಲದೆ ಅನೇಕ ಆಯುರ್ವೇದ ಔಷಧ ಸಸ್ಯಗಳು ಇಲ್ಲಿದ್ದು ಅವುಗಳ ಸಂರಕ್ಷಣೆ ಜತೆ ಸಂವರ್ಧನೆಯೂ ಆಗಲಿದೆ ಎಂಬ ಉದ್ದೇಶದೊಂದಿಗೆ ಈ ಘಟಕ ಸ್ಥಾಪನೆಗೆ ಯೋಜಿಸಲಾಗಿತ್ತು.

Advertisement

ರಾಜ್ಯ ವಲಯ ರಾಷ್ಟ್ರೀಯ ಆಯುಷ್‌ ಮಿಷನ್‌ ಎನ್‌.ಎಚ್‌.ಎಂ.ಅಡಿಯಲ್ಲಿ ಔಷಧಿಗಳಿಗಾಗಿ ನಿಗದಿಯಾಗುವ ಅನುದಾನಕ್ಕೆ ಪೂರಕವಾಗಿ ಶೇ.100 ಆಯುಷ್‌ ಔಷಧಿಗಳನ್ನು ಸರ್ಕಾರವೇ ತಯಾರಿಸಿ ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ತ್ವರಿತವಾಗಿ ಆಯುಷ್‌ ಔಷಧ ತಯಾರಿಸಿ ಸರಬರಾಜು ಮಾಡುವ ಉದ್ದೇಶದಿಂದಲೂ ಬೆಳಗಾವಿಯಲ್ಲಿ ಆಯುಷ್‌ ಔಷಧ ತಯಾರಿಕಾ ಘಟಕ ಸ್ಥಾಪನೆಗೆ ಯೋಜಿಸಲಾಗಿತ್ತು.

ಬೆಳಗಾವಿಯಲ್ಲಿನ ಉದ್ದೇಶಿತ ಆಯುಷ್‌ ಔಷಧ ತಯಾರಿಕಾ ಘಟಕ ರದ್ದತಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಅಂತಹ ಯತ್ನ ನಡೆದಿದ್ದರೆ, ಖಂಡಿತಾ ಅದಕ್ಕೆ ಅವಕಾಶ ನೀಡಲ್ಲ. ಉದ್ದೇಶಿತ ಆಯುಷ್‌ ಔಷಧ ತಯಾರಿಕಾ ಘಟಕ ಸ್ಥಾಪನೆ ಮುಂದುವರಿಸುವುದಲ್ಲದೆ, ಅಗತ್ಯ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳುತ್ತೇನೆ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next