ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಗಡಿಭಾಗದ ಬೆಳಗಾವಿ ಯಲ್ಲಿ ಈಗ ಜಿಲ್ಲಾ ವಿಭಜನೆ ವಿಷಯ ಹೆಚ್ಚು ಆಸಕ್ತಿ ಹುಟ್ಟಿಸಿದೆ. ಕಳೆದ ಕೆಲವು ದಿನಗಳ ಹಿಂದೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲಾ ವಿಭಜನೆ ಸಂಬಂಧ ಮುಖ್ಯಮಂತ್ರಿಗಳನ್ನು ನಿಯೋಗದ ಮೂಲಕ ಭೇಟಿ ಮಾಡುವ ಮಾತು ಆಡಿರುವುದು ಜಿಲ್ಲಾ ರಚನೆ ಹೋರಾಟಗಾರರಲ್ಲಿ ಹೊಸ ಆಶಾಭಾವನೆ ಹುಟ್ಟಿಸಿದೆ.
ಈಗ ಬಜೆಟ್ ಅಧಿವೇಶನ ಬಂದಿದೆ. ಸಹಜ ವಾಗಿಯೇ ಜಿಲ್ಲೆಯ ಜನರಲ್ಲಿ ಹೊಸ ಹೊಸ ನಿರೀಕ್ಷೆ ಗಳು ಸಹಜ. ಅದರಲ್ಲಿ ಹೊಸ ಜಿಲ್ಲಾ ರಚನೆ ಬೇಡಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳಾಗಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿರುವವರು ಸರಕಾರದ ಕಡೆ ಕಾತರದಿಂದ ನೋಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ಸಿಹಿ ಸುದ್ದಿ ಬರಬಹುದೇ ಎಂಬುದು ಅವರ ಆಶಯ.
ಆಡಳಿತದ ಅನುಕೂಲತೆ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಚಿಕ್ಕೋಡಿ ಮತ್ತು ಗೋಕಾಕ ಭಾಗದ ಜನರು ಹೊಸ ಜಿಲ್ಲೆಗಳ ರಚನೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ. ಆದರೆ ವಿಭಜನೆ ಯಾವಾಗ ಎಂಬುದು ಮಾತ್ರ ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಕಾಡುತ್ತಿದೆ.
ಸುಮಾರು 45 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಈಗ 14 ತಾಲೂಕು ಗಳಿವೆ. ವಿಸ್ತೀರ್ಣದಲ್ಲಿ ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆ. ಅಥಣಿ ತಾಲೂಕು ಕೇಂದ್ರ ಜಿಲ್ಲಾ ಕೇಂದ್ರ ಸ್ಥಾನದಿಂದ 150 ಕಿಮೀ ದೂರದಲ್ಲಿದೆ. ಈ ತಾಲೂ ಕಿನ ಜನರು ಬೆಳಗಾವಿಗೆ ಬರಬೇಕಾದರೆ ಬಹಳ ಕಷ್ಟಪಡಬೇಕು. ಬಂದ ದಿನವೇ ಸರಕಾರಿ ಕೆಲಸ ಆಗುತ್ತದೆ ಎಂಬ ವಿಶ್ವಾಸ ಇಲ್ಲ. ಅಧಿಕಾರಿಗಳಿಗೂ ಸಹ ಇದು ತಲೆಬಿಸಿಯಾಗಿದೆ.
ಹೋರಾಟ ಇಂದು ನಿನ್ನೆಯದಲ್ಲ: ಬೆಳಗಾವಿ ಜಿಲ್ಲಾ ವಿಭಜನೆ ಹೋರಾಟಕ್ಕೆ ದಶಕಗಳ ಇತಿಹಾಸ ಇದೆ. ಆದರೆ ಹೋರಾಟ ನಿರೀಕ್ಷಿದಷ್ಟು ತೀವ್ರವಾಗಿಲ್ಲ. ಒಗ್ಗಟ್ಟಿನ ಹೋರಾಟದ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಚಿಕ್ಕೋಡಿ ತಾಲೂಕಿನ ಜನರು ಹೋರಾಟ ಮಾಡಿದರೆ ಅದಕ್ಕೆ ಅಥಣಿ, ರಾಯಭಾಗ, ನಿಪ್ಪಾಣಿ, ಹುಕ್ಕೇರಿ ತಾಲೂಕಿನ ಜನರಿಂದ ಪೂರ್ಣ ಪ್ರಮಾಣದ ಬೆಂಬಲ ಸಿಗುತ್ತಿಲ್ಲ. ಇನ್ನೊಂ ದೆಡೆ ಗೋಕಾಕ ತಾಲೂಕಿನ ಜನರು ಹೋರಾಟ ಆರಂಭ ಮಾಡಿದರೆ ಅದಕ್ಕೆ ರಾಮದುರ್ಗ, ಸವದತ್ತಿ, ಬೈಲಹೊಂಗಲ ತಾಲೂಕಿನ ಜನರ ಬೆಂಬಲ ಸಿಗು ತ್ತಿಲ್ಲ. ಇವೆರಡರ ನಡುವೆ ಬೆಳಗಾವಿ ಗಡಿ ವಿವಾದ ವಿಷಯ ತಾಂತ್ರಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದು ಹೋರಾಟಗಾರರಿಗೆ ಹಿನ್ನಡೆ ಉಂಟು ಮಾಡಿ ದರೆ ಸರಕಾರಕ್ಕೆ ವರದಾನವಾಗಿ ಪರಿಣಮಿಸಿದೆ.
ಜಿಲ್ಲೆಯ ರಾಜಕಾರಣಿಗಳು ಸಾಕಷ್ಟು ಪ್ರಭಾವಿ ಗಳಾಗಿ ದ್ದರೂ ಜಿಲ್ಲಾ ವಿಭಜನೆ ಕುರಿತು ಸಂಘಟಿತ ವಾಗಿ ಸರಕಾರದ ಮೇಲೆ ಒತ್ತಡ ಹಾಕುತ್ತಿಲ್ಲ. ಈ ನಾಯಕರು ಮನಸ್ಸು ಮಾಡಿದರೆ ಜಿಲ್ಲಾ ರಚನೆ ದೊಡ್ಡ ಸಮಸ್ಯೆ ಏನಲ್ಲ. ಯಾವುದೇ ಆತಂಕವಿಲ್ಲದೆ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳಾಗಿ ಘೋಷಣೆಯಾಗುತ್ತವೆ. ಆದರೆ ಇದಕ್ಕೆ ಯಾರೂ ಮನಸ್ಸು ಮಾಡುತ್ತಿಲ್ಲ. ಜಿಲ್ಲೆಯ ನಾಯಕರು ಈ ವಿಷಯದಲ್ಲಿ ಗಟ್ಟಿಯಾಗಿ ನಿಂತರೆ ಹೊಸ ಜಿಲ್ಲೆಯ ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಬಹುದು.
-ಕೇಶವ ಆದಿ