ಬೆಳಗಾವಿ: ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ರಜೆಗೆಂದು ಮನೆಗೆ ಬಂದಿದ್ದ ಮಗನನ್ನೇ ಗುಂಡಿಕ್ಕಿ ಕೊಂದ ಪಾಪಿ ತಂದೆಗೆ ಬೆಳಗಾವಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಬೈಲಹೊಂಗಲ ತಾಲೂಕಿನ ನಯಾನಗರದ ಆರೋಪಿ ವಿಠ್ಠಲ ಇಂಡಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶ ಬಸವರಾಜ ತೀರ್ಪು ನೀಡಿದರು. ಮಗ ಈರಣ್ಣ ವಿಠ್ಠಲ ಇಂಡಿ ಹತ್ಯೆಗೀಡಾಗಿದ್ದನು. ಈ ಕುರಿತು ಮೃತನ ಸಹೋದರಿ ಪ್ರೀತಿ ನೀಡಿದ ದೂರಿನನ್ವಯ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಏನಿದು ಘಟನೆ?: ತಂದೆ ವಿಠ್ಠಲ ಇಂಡಿಗೆ ದ್ವಿಚಕ್ರ ವಾಹನ ಖರೀದಿಸಲು ಹಣದ ಅವಶ್ಯಕತೆ ಇತ್ತು. ಮಗ ಈರಣ್ಣ ಹಣ ನೀಡಲು ನಿರಾಕರಿಸಿದ್ದನು ಎಂಬ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿತ್ತು. 2016 ಡಿಸೆಂಬರ್ 12ರಂದು ಜಗಳ ವಿಕೋಪಕ್ಕೆ ತಿರುಗಿ ಮಗನ ಮೇಲೆ ವಿಠ್ಠಲ ತನ್ನ ಬಳಿ ಇದ್ದ ರಿವಾಲ್ವರ್‌ದಿಂದ ಗುಂಡಿಕ್ಕಿ ಕೊಲೆ ಮಾಡಿದ್ದನು. ಬಿಡಿಸಲು ಬಂದಿದ್ದ ಪತ್ನಿ ಹಾಗೂ ಪುತ್ರಿ ಮೇಲೆಯೂ ವಿಠ್ಠಲ ಗುಂಡಿನ ದಾಳಿ ನಡೆಸಿದ್ದನು. ಪತ್ನಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ನಂತರ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಈ ಕುರಿತು ಬೈಲಹೊಂಗಲ ಠಾಣೆಯಲ್ಲಿ ಮೃತನ ಸಹೋದರಿ ಪ್ರೀತಿ ವಿಠ್ಠಲ ಇಂಡಿ ದೂರು ದಾಖಲಿಸಿದ್ದರು. ತನಿಖಾಧಿಕಾರಿ ಸಂಗನಗೌಡ ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 70 ದಾಖಲಾತಿ, 25 ಮುದ್ದೆಮಾಲುಗಳು ಹಾಗೂ 17 ಸಾಕ್ಷಿಗಳ ಆಧಾರದ ಮೇಲೆ ನ್ಯಾಯಾಲಯ ತೀರ್ಪು ನೀಡಿದೆ. ಅಭಿಯೋಜಕ ವಿದ್ಯಾಸಾಗರ ದಶರಥ ದರಬಾರೆ ಸರ್ಕಾರದ ಪರ ವಕಾಲತ್ತು ವಹಿಸಿದ್ದರು.
ಆರೋಪಿಯ ಹಿನ್ನೆಲೆ: ಆರೋಪಿ ವಿಠ್ಠಲ ಸೇನೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿಯಾಗಿದ್ದನು. ನಂತರ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದನು. ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಾಣಿ ಗ್ರಾಮದ ವಿಠ್ಠಲ ಇಬ್ಬರು ಪತ್ನಿಯರನ್ನು ಹೊಂದಿದ್ದಾನೆ. ಮೊದಲನೇ ಪತ್ನಿ ಮಲಕವ್ವ ಹಿಂಗಾಣಿ ಗ್ರಾಮದಲ್ಲಿ ಹಾಗೂ ಎರಡನೇ ಪತ್ನಿ ಅನುಸೂಯಾ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ನೆಲೆಸಿದ್ದರು. ಬೈಲಹೊಂಗಲದಲ್ಲಿ ಕೆಲಸ ಮಾಡುವಾಗ ಅನುಸೂಯ ಪರಿಚಯವಾಗಿ ನಂತರ ಇದು ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಿದ್ದರು. ಈ ದಂಪತಿಯ ಮೂವರ ಮಕ್ಕಳ ಪೈಕಿ ಹಿರಿಮಗ ಈರಣ್ಣ ಸೇನೆಗೆ ಸೇರಿಕೊಂಡಿದ್ದರು. ಮೊದಲನೇ ಹೆಂಡತಿಗೂ ಓರ್ವ ಪುತ್ರನಿದ್ದಾನೆ.