Advertisement
ಸವಣೂರು: ರಸ್ತೆ ಈಗಲೂ ಅಭಿವೃದ್ಧಿ ಕಂಡಿಲ್ಲ. ಡಾಮರು ಕಾಮಗಾರಿಗಾಗಿ ಜನಪ್ರತಿನಿಧಿಗಳಲ್ಲಿ ಗೋಗರೆದು ಸುಸ್ತಾಗಿದ್ದಾರೆ ನಾಗರಿಕರು. ಇದು ಬೆಳಂದೂರು-ಪೆರುವಾಜೆ ರಸ್ತೆಯ ಸ್ಥಿತಿ. ಈ ರಸ್ತೆಯಲ್ಲಿ ವಾಹನ ಸಂಚರಿಸುವುದು ಬಿಡಿ, ನಡೆದಾಡುವುದೂ ಕಷ್ಟಕರ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ನಿಂತರೆ, ಬೇಸಗೆಯಲ್ಲಿ ಧೂಳಿನದ್ದೆ ಚಿಂತೆ. ಇದರಿಂದ ಪರಿಸರದ ನೂರಾರು ಮನೆಗಳಿಗೆ, ಅಂಗನವಾಡಿ, ದೇವಸ್ಥಾನ, ಮಸೀದಿಗಳಿಗೆ ತೆರಳುವವರ ಪಾಡು ಹೇಳತೀರದು. ತೀರಾ ಹದೆಗೆಟ್ಟಿರುವ ಈ ರಸ್ತೆಯ ಮೂಲಕ ಕಂಪ, ಪಾತಾಜೆ, ಪೆರುವಾಜೆ, ಪೆರುವೋಡಿ ಮೊದಲಾದೆಡೆ ಹೋಗಬಹುದಾಗಿದ್ದು, ಈ ರಸ್ತೆಯಲ್ಲಿ ಬೆಳಂದೂರುನಿಂದ ಬೆಳ್ಳಾರೆಗೆ ಇರುವ ದೂರ ಕೇವಲ 9 ಕಿ.ಮೀ. ಆದರೆ ಈ ರಸ್ತೆಯ ದುರವಸ್ಥೆಯಿಂದ ಜನತೆ ಸುತ್ತುಬಳಸಿ ಪ್ರಯಾಣಿಸುವಂತಾಗಿದೆ.
ಈ ರಸ್ತೆಯ ಡಾಮರು ಕಾಮಗಾರಿ ಕುರಿತು ಕುದ್ಮಾರಿನಲ್ಲಿ ನಡೆದ ಬೆಳಂದೂರು ಗ್ರಾಮಸಭೆಯಲ್ಲಿ ನಡೆದ ಚರ್ಚೆ ರಾಜಕೀಯ ತಿರುವು ಪಡೆದಿತ್ತು. ಗರಿಷ್ಠ ಅನುದಾನವಿಲ್ಲದೆ ಈ ರಸ್ತೆಯನ್ನು ಅಭಿವೃದ್ಧಿ ನಡೆಸುವುದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೆಡೆ ರಸ್ತೆಯಲ್ಲಿ ಡಾಮರಿನ ಯಾವುದೇ ಕುರುಹು ಕೂಡ ಕಾಣಸಿಗದು. ಕಚ್ಚಾ ರಸ್ತೆಯ ರೀತಿಯಲ್ಲಿ ಇದೆ.
ಸುತ್ತು ಬಳಸಿ ಪ್ರಯಾಣ
ಗುಂಡಿನಾರಿನಿಂದ ಬೆಳಂದೂರು ತಲುಪಲು ಕೇವಲ 2 ಕಿ.ಮೀ. ಅಂತರ, ಆದರೆ ರಸ್ತೆಯ ದುಃಸ್ಥಿತಿಯಿಂದ ಗುಂಡಿ ನಾರು ಪರಿಸರದ ಜನರು ಬೆಳಂದೂರು ಬರಬೇಕಾದರೆ ಕಾಣಿಯೂರು ಮೂಲಕ 6.ಕಿ.ಮೀ. ಪ್ರಯಾಣಿಸಿ ಬೆಳಂದೂರು ತಲುಪಬೇಕಾಗಿದೆ. ಅದೇ ರೀತಿ ಬೆಳಂದೂರು ಸಮೀಪದ ಪಳ್ಳತ್ತಾರಿಗೆ ಹೋಗಲು ಬರೆಪ್ಪಾಡಿ ಮೂಲಕ ಪಳ್ಳತ್ತಾರುಗೆ ತಲುಪುತ್ತಾರೆ. ಬೆಳಂದೂರಿನಿಂದ ಪೆರುವಾಜೆಗೆ ಹೋಗಲು ಯಾವ ಆಟೋ ಚಾಲಕರು ಮುಂದೆ ಬರುತ್ತಿಲ್ಲ. ಈ ರಸ್ತೆಯಲ್ಲಿ ಸಿಗುವ ಬಾಡಿಗೆಗಿಂತ ಹೆಚ್ಚು ಹಣ ವಾಹನ ರಿಪೇರಿಗೆ ಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ.
Related Articles
ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಗೊಳಿಸಿ ಅಭಿವೃದ್ಧಿಪಡಿಸುವಂತೆ ಈಗಾಗಲೇ ಜಿಲ್ಲಾಧಿಕಾರಿ, ಶಾಸಕರಿಗೆ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಮಂಗಳೂರು ಇವರಿಗೆ ಮನವಿ ಸಲ್ಲಿಸಲಾಗಿದೆ. ಇದರ ಕಾಮಗಾರಿಗೆ 3 ಲಕ್ಷ ರೂ.ಗಳನ್ನು ಮಂಜೂರುಗೊಳಿಸಿ ಕಾಮಗಾರಿ ನಡೆಸಲಾಗಿದೆ. ದೊಡ್ಡ ಮೊತ್ತದ ಹಣ ಬೇಕಾಗಿರುವುದರಿಂದ ಶಾಸಕ, ಸಂಸದರಿಗೂ ಅನುದಾನ ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದು ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್ ತಿಳಿಸಿದ್ದಾರೆ.
Advertisement
ಫಲಿಸದ ಮನವಿಗಳುಈ ರಸ್ತೆಗೆ ಡಾಮರು ಹಾಕಲು ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಪ್ಯಾಚ್ ವರ್ಕ್ ಮಾಡುವುದರ ಬದಲು ಸಂಪೂರ್ಣ ಡಾಮರು ಕಾಮಗಾರಿಗೆ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು ಎಂದು ರಸ್ತೆಯ ಬಳಕೆದಾರ ಶರೀಫ್ ಪೆರುವಾಜೆ ಅವರ ಅಭಿಪ್ರಾಯ. ನಬಾರ್ಡ್‌ಗೆ ಪ್ರಸ್ತಾವನೆ
ಬೆಳಂದೂರು – ಪೆರುವಾಜೆ ರಸ್ತೆಯ ಅಭಿವೃದ್ಧಿಗಾಗಿ ನಬಾರ್ಡ್ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗ್ರಾಮ ಸಡಕ್ ಯೋಜನೆಯಲ್ಲಿ ಈ ರಸ್ತೆಗೆ ಅನುದಾನ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.
– ಎಸ್.ಅಂಗಾರ, ಶಾಸಕ, ಸುಳ್ಯ – ಪ್ರವೀಣ್ ಕುಮಾರ್