Advertisement

ಬೆಳಕಾಯಿತು ಬಾಗಲಕೋಟೆಗೆ ಶತಕದ ಸಂಭ್ರಮ

06:13 PM Jun 06, 2021 | Team Udayavani |

ಬಾಗಲಕೋಟೆ: ನಗರದ ಸಾಹಿತಿ ಡಾ|ಪ್ರಕಾಶ ಗ.ಖಾಡೆ ಸಂಯೋಜಿಸಿರುವ ಫೇಸ್‌ ಬುಕ್‌ ಲೈವ್‌ ಸರಣಿ ಉಪನ್ಯಾಸ ಮಾಲಿಕೆ ಬೆಳಕಾಯಿತು ಬಾಗಲಕೋಟೆ ಕಾರ್ಯಕ್ರಮ ನೂರು ಉಪನ್ಯಾಸ ಪೂರೈಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಶಿಷ್ಟ ಕ್ರಾಂತಿ ಮಾಡಿದೆ.

Advertisement

ಕೊರೊನಾ ಸಂಕಷ್ಟ, ಎಲ್ಲವೂ ಲಾಕ್‌ಡೌನ್‌ ಆದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಬಳಸಿಕೊಂಡು ಅವಿಭಜಿತ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಆಗಿಹೋದ ಸಾಧಕರ ಕುರಿತ ಈ ಸರಣಿ ಮಾಲಿಕೆ ವಿಶ್ವದೆಲ್ಲೆಡೆ ಕನ್ನಡಿಗರ ಪ್ರೀತಿಗೆ ಪ್ರಾಪ್ತವಾಗಿದೆ.

ಕಳೆದ ವರ್ಷ ಜುಲೈ 3ರಂದು ಆರಂಭವಾಗಿ ಇದೇ ಜೂನ್‌ 3ರಂದು ನೂರು ಉಪನ್ಯಾಸ ಪೂರೈಸಿದೆ. ನಿರಂತರವಾಗಿ ರವಿವಾರ ಮತ್ತು ಗುರುವಾರ ಬೆಳಗ್ಗೆ 8 ಗಂಟೆಗೆ ಪ್ರಸಾರವಾಗುತ್ತಿದೆ. ಸದಾ ಹೊಸದನ್ನು ಸೃಷ್ಟಿಸುವ ಡಾ|ಪ್ರಕಾಶ ಖಾಡೆ ಅವರಿಗೆ ಇಂಥದೊಂದು ಪರಿಕಲ್ಪನೆ ರೂಪಿಸಿಕೊಟ್ಟವರು ಸಾಹಿತಿ ಡಾ| ರಾಜಶೇಖರ ಮಠಪತಿ ಮತ್ತು ನಿರಂತರ ಮಾರ್ಗದರ್ಶನ ನೀಡಿದವರು ನಾಡಿನ ಖ್ಯಾತ ಸಾಹಿತಿ ಪ್ರೊ| ಬಿ.ಆರ್‌.ಪೊಲೀಸಪಾಟೀಲರು. ಖ್ಯಾತ ಅನುಭಾವಿ ಕವಿ ಮಧುರಚೆನ್ನರು ಉಸಿರಿದ್ದ ಬೆಳಕಾಯಿತು ಬಾಗಲಕೋಟೆ ಎಂಬ ಉಕ್ತಿಯನ್ನೇ ಶೀರ್ಷಿಕೆಯಾಗಿಟ್ಟುಕೊಂಡು ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಹುಟ್ಟಿ, ಇಲ್ಲವೇ ಈ ಜಿಲ್ಲೆಗಳನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡ ಸಾಧಕರನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿದೆ.

ಹಲವು ಕ್ಷೇತ್ರಗಳ ಸಾಧಕರು: ಸಾಹಿತ್ಯ, ಸಂಶೋಧನೆ, ಕಲೆ, ವಿಜ್ಞಾನ, ಕೃಷಿ, ರಂಗಭೂಮಿ, ಕ್ರೀಡೆ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಧಾರ್ಮಿಕ, ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಗಕೇ ಬೆಳಕಾದ ಸಾಧಕರನ್ನು ಇಲ್ಲಿ ನಾಡಿನ ವಿವಿಧ ಕ್ಷೇತ್ರದ ನೂರು ಪರಿಣಿತರು ಉಪನ್ಯಾಸ ನೀಡಿ ಪರಿಚಯಿಸಿದ್ದಾರೆ.

ಜನರಲ್‌ ಜಿ.ಜಿ.ಬೇವೂರ, ಮೊಹರೆ ಹನಮಂತರಾಯರು, ಅಮೀರಬಾಯಿ ಕರ್ನಾಟಕಿ, ಬೀಳೂರು ಗುರುಬಸವರು, ಹಾನಗಲ್ಲ ಕುಮಾರಸ್ವಾಮಿಗಳು, ಬಿ.ಡಿ.ಜತ್ತಿ, ಎಸ್‌.ಆರ್‌.ಕಂಠಿ, ರಾಮಣ್ಣ ಸೊನ್ನದ, ಸನಾದಿ ಅಪ್ಪಣ್ಣ, ಬಂಥನಾಳ ಶಿವಯೋಗಿಗಳು, ಇಳಕಲ್ಲ ಮಹಾಂತರು, ತೋಂಟದ ಸಿದ್ದಲಿಂಗ ಶ್ರೀ, ಕಂದಗಲ್ಲ ಹನಮಂತರಾಯರು, ಪಿ.ಬಿ. ಧುತ್ತರಗಿ, ಗಣಿತಜ್ಞ ಭಾಸ್ಕರಾಚಾರ್ಯ, ಕೃಷಿ ತಜ್ಞ ಡಾ| ಎನ್‌.ಪಿ.ಪಾಟೀಲ, ನೇತ್ರ ತಜ್ಞ ಎಂ.ಸಿ.ಮೋದಿ, ಗುರುದೇವ ರಾನಡೆ, ಪ್ರಸನ್ನ ವೆಂಕಟದಾಸರು, ಮಧುರಚೆನ್ನ, ಸತ್ಯಕಾಮ, ರಾವಬಹದ್ದೂರ, ಕುಮಾರ ಕಕ್ಕಯ್ಯ ಪೋಳ, ಗೌರಮ್ಮ ಚಲವಾದಿ, ಶಂಕರ ಕಟಗಿ, ಜಿ.ಬಿ.ಖಾಡೆ, ಚಂದ್ರವರ್ಮ ಬಿ.ಆರ್‌. ಕೊಟ್ಯಾಳಕರ, ಸೋಮಶೇಖರ ಸಾಲಿ, ಸಿಂಹಾಸನ ಮಾಮಲೇದಾರ, ಕೌಜಲಗಿ ನಿಂಗಮ್ಮ, ಗಂಗಮ್ಮ ಚಿನಿವಾರ ಮೊದಲಾದ ನೂರು ಸಾಧಕರನ್ನು ಇಲ್ಲಿ ಪರಿಚಯಿಸಲಾಗಿದೆ. ನಾಡಿನ ವಿದ್ವಾಂಸರಾದ ಪ್ರೊ| ಮಲ್ಲೇಪುರಂ ಜಿ.ವೆಂಕಟೇಶ, ಡಾ| ಪ್ರಜ್ಞಾ ಮತ್ತಿಹಳ್ಳಿ, ಡಾ| ವೀರಣ್ಣ ರಾಜೂರ, ಪ್ರಾ| ಚಂದ್ರಶೇಖರ ವಸ್ತ್ರದ, ಡಾ| ವೈ.ಎಂ.ಯಾಕೊಳ್ಳಿ, ಡಾ| ಬಸು ಬೇವಿನಗಿಡದ, ಡಾ| ಈಶ್ವರ ಮಂಟೂರ, ಸಿದ್ದರಾಮ ಮನಹಳ್ಳಿ, ಪ್ರಾ| ಎ.ಎಸ್‌.ಪಾವಟೆ, ಡಾ| ಚನ್ನಪ್ಪ ಕಟ್ಟಿ, ಡಾ| ಎಚ್‌.ಎಸ್‌. ಸತ್ಯನಾರಾಯಣ, ಡಾ| ಶಿವಾನಂದ ಕುಬಸದ, ಡಾ| ಅಶೋಕ ನರೋಡೆ, ಗೀತಾ ದಾನಶೆಟ್ಟಿ, ಡಾ| ಶಾರದಾ ಮುಳ್ಳೂರ, ಜಯಶ್ರೀ ಭಂಡಾರಿ, ದಾûಾಯಿಣಿ ಮಂಡಿ, ಚಂದ್ರಪ್ರಭಾ ಬಾಗಲಕೋಟ, ವಿಜಯಲಕ್ಷ್ಮೀ ಬದನೂರ, ಗೀತಾ ಶಿವಮೂರ್ತಿ ಡಾ| ಶಶಿಧರ ನರೇಂದ್ರ, ಡಾ| ಮುರ್ತುಜಾ ಒಂಟಿ. ಜಿ.ಕೆ.ತಳವಾರ, ಶಿವಾನಂದ ಶೆಲ್ಲಿಕೇರಿ, ಚಂದ್ರಶೇಖರ ದೇಸಾಯಿ ಹೀಗೆ ನೂರು ಜನ ಉಪನ್ಯಾಸಕರು ಈ ಸರಣಿಯಲ್ಲಿ ಉಪನ್ಯಾಸ ನೀಡಿ ಸಾರ್ಥಕತೆ ಮೆರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next