Advertisement
ಇದು ಸದಾ ಬರಗಾಲದ ನಾಡು ಎಂದೇ ಹಣೆಪಟ್ಟಿ ಹೊತ್ತಿರುವ ರಾಮದುರ್ಗ ತಾಲೂಕಿನ ದಾರುಣ ಚಿತ್ರ. ಇಲ್ಲಿಯ ಜನ ಸಮೃದ್ಧ ಮಳೆ, ಫಲವತ್ತಾದ ಬೆಳೆ, ಕೈತುಂಬ ಹಣ ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಜನ ಇದಾವುದನ್ನೂ ನೋಡಿಯೇ ಇಲ್ಲ.
Related Articles
Advertisement
ಗುಳೇ ಅನಿವಾರ್ಯಸರಕಾರ ಗುಳೇ ಹೋಗಬೇಡಿ ಎನ್ನುತ್ತಿದೆ. ಆದರೆ ಮನೆಯಲ್ಲಿ ಬಹಳ ಜನ ಇರುವಾಗ ಜೀವನ ನಡೆಸುವುದು ಕಷ್ಟದ ಕೆಲಸ. ಕೈಗೆ ಉದ್ಯೋಗ ಇಲ್ಲಾ ಎಂದರೆ ಮನಸ್ಸು ಬೇರೆ ಕಡೆ ವಾಲುತ್ತದೆ. ಹೀಗಾಗಿ ಎಷ್ಟೋ ಜನ ಅನಿವಾರ್ಯವಾಗಿ ಕಳೆದ ನಾಲ್ಕು ತಿಂಗಳಿಂದ ನೆರೆಯ ಗೋಕಾಕ, ಬೆಳಗಾವಿ ಅಲ್ಲದೆ ಮಹಾರಾಷ್ಟ್ರದ ಕೊಲ್ಲಾಪುರ, ಮೀರಜ, ಗೋವಾಕ್ಕೆ ಕೆಲಸದ ಮೇಲೆ ಹೋಗುತ್ತಿದ್ದಾರೆ. ಈಗಲೇ ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಭೀಕರವಾಗುತ್ತಿದೆ. ಬೇಸಿಗೆ ಬಂತೆಂದರೆ ನಮಗೆ ನೀರಿನ ತಾಪತ್ರಯ ತಪ್ಪಿದ್ದಲ್ಲ. ಈಗ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುತ್ತಿದೆ. ಕೆಲಸ ಮುಗಿಸಿ ಮನೆಗೆ ಹೋಗಿ ಅರಾಮ್ ಮಲಗುವಂತಿಲ್ಲ. ಸುಮ್ಮನೇ ಕೂಡುವ ಹಾಗಿಲ್ಲ. ರಾತ್ರಿಯಿಡೀ ನೀರಿಗಾಗಿ ಗುದ್ದಾಡಬೇಕು. ಅನೇಕ ಊರುಗಳಲ್ಲಿ ಮಧ್ಯರಾತ್ರಿಯಾದರೂ ನೀರು ತರುವ ಚಿತ್ರ ಕಾಣುತ್ತಲೇ ಇರುತ್ತದೆ ಎನ್ನುತ್ತಾರೆ ಕೆ. ಚಂದರಗಿ ಗ್ರಾಮದ ಮಾರುತಿ ಮಲ್ಲಪ್ಪ ದ್ಯಾಮಣ್ಣಿ. ನೀರಾವರಿ ಬಂದರೆ ಉಸಿರು
ಮಳೆಯ ಮೇಲೆ ರಾಮದುರ್ಗ ತಾಲೂಕಿನ ಜನ ಆಸೆಯನ್ನೇ ಬಿಟ್ಟಿದ್ದಾರೆ. ಈಗ ಅವರಿಗೆ ಕಾಣುತ್ತಿರುವುದು ನೀರಾವರಿ ಸೌಲಭ್ಯ ಮಾತ್ರ. ತಾಲೂಕಿನಲ್ಲಿ ಎರಡು ದೊಡ್ಡ ನೀರಾವರಿ ಯೋಜನೆಗಳಿದ್ದರೂ ಅವುಗಳ ಲಾಭ ಉತ್ತರ ಭಾಗದ ಕೆ. ಚಂದರಗಿ, ಎಂ. ಚಂದರಗಿ, ಗುದಿಗೊಪ್ಪ., ಮುರಕಟ್ನಾಳ ಸೇರಿದಂತೆ ಸುಮಾರು 15 ಹಳ್ಳಿಗಳಿಗೆ ಸಿಕ್ಕಿಲ್ಲ. ನಮ್ಮದು ಫಲವತ್ತಾದ ಭೂಮಿ. ಆದರೆ ಯಾವ ನೀರಾವರಿ ಯೋಜನೆಯೂ ಇಲ್ಲಿಲ್ಲ. ಸುಮಾರು ಆರು ಕಿಲೋಮೀಟರ್ ದೂರದಲ್ಲಿ ಗೋಕಾಕ ತಾಲೂಕಿನ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆಯ ಕಾಲುವೆ ಇದೆ. ಅದನ್ನು ಎಂ. ಚಂದರಗಿವರೆಗೆ ನಿರ್ಮಾಣ ಮಾಡಿ ನೀರು ಹರಿಸಿದರೆ ಸುತ್ತಲಿನ 15 ಬರಪೀಡಿತ ಹಳ್ಳಿಗಳಿಗೆ ಅನುಕೂಲವಾಗಲಿದೆ. ಆಗ ನಮಗೆ ಸರಕಾರದಿಂದ ಯಾವುದೇ ಸಹಾಯ ಬೇಡ. ಸಾಲಮನ್ನಾ ಬೇಡ. ನೆಮ್ಮದಿಯಿಂದ ಬದುಕುತ್ತೇವೆ. ನಮಗೆ ಕಾಲುವೆಗಳ ನಿರ್ಮಾಣ ಮಾಡಿಕೊಡುವವರೆಗೆ ಸರ್ಕಾರದ ಯಾವುದೇ ಸವಲತ್ತುಗಳು ಪ್ರಯೋಜನವಾಗುವುದಿಲ್ಲ. ಆದರೆ ಬರದ ಬರೆ ಮಾತ್ರ ಶಾಶ್ವತವಾಗುತ್ತದೆ ಎಂಬುದು ಸಿದ್ದಲಿಂಗಪ್ಪ ಹೊಸಮನಿ ನೋವು. ರಾಮದುರ್ಗ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಇಳಿಕೆಯಾಗಿದೆ. ಕೆ. ಚಂದರಗಿ ಹಾಗೂ ಗುದಿಗೊಪ್ಪ ಗ್ರಾಮಗಳ ಕೆರೆ ತುಂಬಿಸಿದರೆ ಅಲ್ಲಿನ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಲಿದೆ. ಈಗ ಗೋಕಾಕ ತಾಲೂಕಿನ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆಯಡಿ ನಮ್ಮ ಭಾಗಕ್ಕೂ ಕಾಲುವೆ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ರೈತರ ಬೇಡಿಕೆ ಇದೆ. ಈಗಾಗಲೇ ಈ ಯೋಜನೆಯಿಂದ ಹಿರೇಕೊಪ್ಪ ಬಾಗೋಜಿಕೊಪ್ಪ, ಹೊಸೂರು ಹಳ್ಳಿಗಳಿಗೆ ನೀರು ಕೊಡಲಾಗಿದೆ ಎಂಬುದು ರಾಮದುರ್ಗ ತಹಶೀಲಾರ್ ಆರ್. ವಿ. ಕಟ್ಟಿ ಹೇಳಿಕೆ. ತಾಲೂಕಿನಲ್ಲಿ ಪ್ರತಿ ವರ್ಷ ಭೀಕರ ಬರಗಾಲ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ನೀರಾವರಿ ಇಲಾಖೆಯಿಂದ 126 ಕೋಟಿ ರೂ. ವೆಚ್ಚದಲ್ಲಿ 19 ಕೆರೆಗಳನ್ನು ತುಂಬಿಸುವ ಯೋಜನೆ ಸಿದ್ಧಪಡಿಸಲಾಗಿದೆ. ಅದಕ್ಕೆ ಅನುಮೋದನೆ ದೊರೆತ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ತಹಶೀಲ್ದಾರ್ ಹೇಳುತ್ತಾರೆ.