Advertisement
ಉಪ ಚುನಾವಣೆಯಲ್ಲಿ ಗೆದ್ದು ಬಂದ ಎಲ್ಲ ಶಾಸಕರಿಗೆ ಸಚಿವ ಸ್ಥಾನ ಖಚಿತ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಕಷ್ಟು ಸಲ ಹೇಳಿರುವುದು ಜಿಲ್ಲೆಯಲ್ಲಿ ಎಷ್ಟು ಜನ ಸಚಿವರಾಗಬಹುದು ಎಂಬ ಕುತೂಹಲ ಮೂಡಿದೆ. ಉಪಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ ಹಾಗೂ ಅತ್ಯಂತ ಹಿರಿಯ ನಾಯಕ ಉಮೇಶ ಕತ್ತಿ ಸೇರಿದಂತೆ ಜಿಲ್ಲೆಯಲ್ಲಿ ಈಗ 13 ಜನ ಬಿಜೆಪಿ ಶಾಸಕರಿದ್ದಾರೆ. ಇದರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು. ಯಾರಿಗೆ ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂಬ ಸವಾಲು ಮುಖ್ಯಮಂತ್ರಿಯ ಮುಂದಿದೆ. ಈಗ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆ ಸಚಿವರಾಗಿದ್ದಾರೆ. ಇವರನ್ನು ಮುಂದುವರಿಸುವುದರೊಂದಿಗೆ ಇನ್ನೂ ನಾಲ್ವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Related Articles
Advertisement
ಜೊಲ್ಲೆ ಸ್ಥಾನಕ್ಕೆ ಕುತ್ತು ಬರುವುದೇ ?: ಒಂದು ಮೂಲದ ಪ್ರಕಾರ ಈಗ ಉಪಚುನಾವಣೆಯಲ್ಲಿ ಗೆದ್ದು ಬಂದ ಶಾಸಕರು ಸೇರಿದಂತೆ ನಾಲ್ವರಿಗೆ ಹೊಸದಾಗಿ ಸಚಿವ ಸ್ಥಾನ ನೀಡಿದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ಥಾನಕ್ಕೆ ಸಂಚಕಾರ ಬರಲಿದೆ ಎನ್ನಲಾಗುತ್ತಿದೆ. ಇದೇ ಕಾರಣದಿಂದ ಶಶಿಕಲಾ ಜೊಲ್ಲೆ ಹಾಗೂ ಅವರ ಪತಿ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಳೆದ ಐದಾರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದು ತಮ್ಮ ಸಚಿವ ಹುದ್ದೆಗೆ ಸಂಚಕಾರ ಬರದಂತೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ರಮೇಶ ಜಾರಕಿಹೊಳಿ ಅವರಿಗೂ ಜೊಲ್ಲೆ ದಂಪತಿಗೂ ಈಗ ಮೊದಲಿನ ಉತ್ತಮ ಬಾಂಧವ್ಯ ಇಲ್ಲ. ಜೊಲ್ಲೆ ಅವರು ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಹಾಗೂ ಟಿಕೆಟ್ ಕೊಡಿಸಲು ಪ್ರಯತ್ನ ಮಾಡಿದ್ದರು ಎಂಬ ಸಂಗತಿ ರಮೇಶ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ನೆಪದಲ್ಲಿ ರಮೇಶ ಅವರು ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ ಶಶಿಕಲಾ ಜೊಲ್ಲೆ ಅವರ ಸಚಿವ ಸ್ಥಾನಕ್ಕೆ ಕುತ್ತು ತರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ದೆಹಲಿ ಮಟ್ಟದಲ್ಲಿ ಬಹಳ ಪ್ರಭಾವಿ ಲಾಬಿ ಹೊಂದಿರುವುದರಿಂದ ಜೊಲ್ಲೆ ಅವರನ್ನು ಅಲುಗಾಡಿಸುವದು ಅಷ್ಟು ಸುಲಭದ ಮಾತಲ್ಲ ಎನ್ನಲಾಗುತ್ತಿದೆ.