ಬೆಳಗಾವಿ: ಅನಾಥ ಶವಗಳನ್ನು ಹಾಗೂ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಿರುವ ವಾರ್ಡ್ ನಂಬರ್ 7ರ ನೂತನ ಸದಸ್ಯ ಶಂಕರ ಪಾಟೀಲ ಅವರು ಗೆದ್ದ ದಿನವೇ ತಮ್ಮ ಸಂಭ್ರಮಾಚರಣೆ ಬದಿಗಿಟ್ಟು ಅನಾಥ ಶವದ ಅಂತ್ಯ ಸಂಸ್ಕಾರ ನಡೆಸಿ ಮಾದರಿಯಾಗಿದ್ದಾರೆ.
ರಸ್ತೆ ಅಪಘಾತದಲ್ಲಿ ಅನಾಥ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಶಂಕರ ಪಾಟೀಲ ಸ್ಥಳಕ್ಕೆ ಹಾಜರಾಗಿದ್ದಾರೆ. ಗೆಲುವಿನ ಸಂಭ್ರಮದಲ್ಲಿ ಇದ್ದ ಶಂಕರ ಅವರು ಕೂಡಲೇ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಥಳಕ್ಕೆ ಹೋಗಿ ಅನಾಥ ಶವ ತಂದು ಸದಾಶಿವ ನಗರದಲ್ಲಿ ಅಂತ್ಯ ಸಂಸ್ಕರ ನಡೆಸಿದ್ದಾರೆ. ಇತ್ತ ಗೆಲುವಿನ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ಅನಾಥ ಶವಗಳ ಅಂತಿಮ ವಿಧಿ ನಡೆಸಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.
ಕೋವಿಡ್ ಮಹಾಮಾರಿ ಅಪ್ಪಳಿಸಿದಾಗ ಮೊದಲ ಹಾಗೂ ಎರಡನೇ ಅಲೆಯಲ್ಲಿ ಪ್ರಾಣ ಬಿಟ್ಟ 200ಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಈ ಯುವಕನಿಗೆ ಪಾಲಿಕೆ ಚುನಾವಣೆಯಲ್ಲಿ ಜನರು ಗೆಲ್ಲಿಸಿದ್ದಾರೆ.
ಇದನ್ನೂ ಓದಿ:ಸಾಂಪ್ರದಾಯಿಕ ಮಾದರಿ ಬಳಸಿ ಲಸಿಕೆ ವಿತರಿಸಿ
ಬೆಳಗಾವಿಯ ಗಣಾಚಾರಿ ಗಲ್ಲಿಯ 32 ವರ್ಷದ ಯುವಕ ಶಂಕರ ಪಾಟೀಲ ಎಂಬ ಪಕ್ಷೇತರ ಅಭ್ಯರ್ಥಿ 114 ಮತಗಳ ಅಂತದಿಂದ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು ಜನರ ಸೇವೆ ಮಾಡುತ್ತ ಬಂದಿರುವ ಶಂಕರ ಪಾಟೀಲನ ಗೆಲುವು ವಿಶೇಷವಾಗಿದೆ.
ಕೆಲ ವರ್ಷಗಳ ಹಿಂದೆ ಶಂಕರ ಪಾಟೀಲ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ತಂದೆಯ ಆಟೋ ರಿಕ್ಷಾ ನಡೆಸಿ ಜೀವನ ಸಾಗಿಸುತ್ತಿದ್ದರು. ಬಳಿಕ ಸ್ನೇಹಿತರ ಸಹಾಯದಿಂದ ಕಂಪನಿಯೊಂದರಲ್ಲಿ ಸದ್ಯ ವೈದ್ಯಕೀಯ ಪ್ರತಿನಿಧಿ (ಎಂ.ಆರ್.) ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ಛಲ ಹೊಂದಿರುವ ಶಂಕರ ಪಾಟೀಲ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಕೊರೊನಾ ಹಾವಳಿಯಲ್ಲಿ ಪ್ರಾಣ ಬಿಟ್ಟ ಅನೇಕರ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಪಿಪಿಇ ಕಿಟ್ ಧರಿಸಿಕೊಂಡು ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಅನೇಕ ಕಡೆಗೆ ತಿರುಗಾಡಿ ಸ್ವತಃ ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಸ್ವತಃ ಎರಡು ಅಂಬ್ಯುಲೆನ್ಸ್ ಗಳನ್ನು ನೀಡಿ ಜನರ ಸೇವೆ ಮಾಡಿದ್ದಾರೆ.
ಸಮಾಜ ಸೇವೆ ಮಾಡಬೇಕೆಂಬ ಛಲ ಮೊದಲಿನಿಂದಲೂ ಇದೆ. 10 ವರ್ಷದಿಂದಲೂ ಸಮಾಜ ಸೇವೆ ಮಾಡುತ್ತ ಬಂದಿದ್ದೇವೆ. ಬಡವರಿಗೆ ಸಹಾಯ ಮಾಡುವ ಮನಸ್ಥಿತಿ ಬೆಳೆಯಿತು. ನಮ್ಮಕೆಲಸ ನಿಂತಿಲ್ಲ. ನನ್ನ ಮದುವೆಗೆ ಇಟ್ಟಿರುವ ಎರಡು ಲಕ್ಷ ರೂ. ಹಣವನ್ನು ಜನರಿಗೆ ಕೋವಿಡ್ ವೇಳೆ ಸಹಾಯ ಮಾಡಿದ್ದೇನೆ. ಚುನಾವಣೆಯಲ್ಲಿ ಎದುರಾಳಿಗಳು ಅತಿ ಹೆಚ್ಚಿನ ಹಣ ಬಲ ತೋಳ್ಬಲ ಪ್ರದರ್ಶಿಸಿದ್ದಾರೆ. ಯುವ ಪಡೆ ನಮ್ಮ ಹಿಂದೆ ಇದೆ. ಇನ್ನು ಮುಂದೆ ಮತ್ತೆ ನಮ್ಮ ಜವಾಬ್ದಾರಿ ಹೆಚ್ಚಾಗಿದೆ ಎನ್ನುತ್ತಾರೆ ಶಂಕರ ಪಾಟೀಲ.
ತಾನು ಕಂಪನಿಯೊಂದರಲ್ಲಿ ಎಂ.ಆರ್. ಆಗಿ ದುಡಿದು ಗಳಿಸಿದ ಹಣದಲ್ಲಿ ಮದುವೆ ಮಾಡಿಕೊಳ್ಳಲು 2 ಲಕ್ಷ ರೂ. ಹಣವನ್ನು ಪಾಲಕೆ ನೂತನ ಸದಸ್ಯ ಶಂಕರ ಪಾಟೀಲ ಕೂಡಿಟ್ಟಿದ್ದರು. ಆದರೆ ಕೊರೊನಾ ಸಂಕಷ್ಟದಲ್ಲಿ ಸಾಕಷ್ಟು ಜನ ತೊಂದರೆಗೀಡಾಗಿದ್ದನ್ನು ಮನಗಂಡು ಈ ಹಣವೆಲ್ಲ ಜನರಿಗೆ ನೀಡಬೇಕು ಎಂದುಕೊಂಡು ಸಹಾಯ ಮಾಡಿದ್ದಾರೆ. ಹಣವೆಲ್ಲವನ್ನೂ ಆಹಾರದ ಪೊಟ್ಟಣ, ಅಂಬ್ಯುಲೆನ್ಸ್, ಆಕ್ಸಿಜನ್ ಹಾಗೂ ದಿನ ಬಳಕೆಯ ಕಿಟ್‌ಗಳಿಗೆ ವ್ಯಯ ಮಾಡಿ ಜನರ ಪಾಲಿಗೆ ಸಂಜೀವಿನಿ ಆಗಿದ್ದಾರೆ.
ಭೈರೋಬಾ ಕಾಂಬಳೆ