Advertisement

ಉದ್ಯೋಗ ಖಾತ್ರಿ ಇದ್ದರೂ ತಪ್ಪದ ಗುಳೆ

09:42 AM Feb 04, 2019 | Team Udayavani |

ನರೇಗಾ ಯೋಜನೆಯಡಿ ಕೆಲಸ ಮಾಡುವ ಕೃಷಿ ಕಾರ್ಮಿಕರು ಪ್ರತಿನಿತ್ಯ ಗ್ರಾಪಂ, ಜಿಪಂ, ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ ಎಲ್ಲಿಯೂ ಹಣ ಪಾವತಿಯಾಗುವ ವಿಶ್ವಾಸ ಕಾಣುತ್ತಿಲ್ಲ. ಆದರೂ ಇವತ್ತಿಲ್ಲಾ ನಾಳೆ ಹಣ ಪಾವತಿಯಾಗುತ್ತದೆ ಎಂಬ ಭರವಸೆಗಳಿಂದ ಕೂಲಿ ಕೆಲಸ ಮಾಡಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಗುರಿ ಮೀರಿ ಮಾನವ ಉದ್ಯೋಗ ಸೃಷ್ಟಿ ಮಾಡಲಾಗಿದ್ದರೂ ದುಡಿದವರಿಗೆ ಕೂಲಿ ಹಣ ಪಾವತಿಸದಿರುವುದು ವಿಪರ್ಯಾಸ.

Advertisement

ಬೆಳಗಾವಿ: ಮುಂಗಾರು ಹಾಗೂ ಹಿಂಗಾರು ಬೆಳೆಯ ವೈಫಲ್ಯದಿಂದ ಸಂಪೂರ್ಣ ಬರ ಪೀಡಿತವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಕೆಲಸಕ್ಕಾಗಿ ಗುಳೆ ಹೋಗುವ ಆತಂಕ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ಜನರು ಕೆಲಸಕ್ಕೆ ಬೇರೆ ಕಡೆ ಅದರಲ್ಲೂ ನೆರೆ ರಾಜ್ಯಗಳಿಗೆ ಗುಳೆ ಹೋಗಬಾರದು ಎಂಬ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದ್ದರೂ ಕೂಲಿ ಮಾಡಿದ ಹಣ ಸಕಾಲಕ್ಕೆ ಪಾವತಿಯಾಗದೆ ಗುಳೆ ಹೋಗುವದಕ್ಕೆ ಅವಕಾಶ ಮಾಡಿಕೊಡುತ್ತಿದೆ.

ಬೆಳಗಾವಿ ಜಿಲ್ಲೆಗೆ ಈಗಾಗಲೇ ಮೂರು ಬಾರಿ ಬರ ಪೀಡಿತ ಪ್ರದೇಶಗಳ ಪರಿಶೀಲನೆಗೆ ಬಂದು ಹೋಗಿರುವ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರ ಮುಂದೆ ನರೇಗಾ ಕೆಲಸದ ಹಣ ಪಾವತಿಯಾಗುತ್ತಿಲ್ಲ. ಕೂಲಿಯ ಜೊತೆಗೆ ಅದರ ಹಣವೂ ಬೇಕು ಎಂದು ರೈತರು ಮನವಿ ಮಾಡಿದ್ದರು. ಆದರೆ ಕೆಲಸ ಇದೆ. ಹಣ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕಾರ್ಮಿಕರಿಗೆ ಬರದ ಜೊತೆಗೆ ನರೇಗಾ ಯೋಜನೆ ಸಹ ಕೈಕೊಟ್ಟಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಗುರಿಮೀರಿ ಮಾನವ ಉದ್ಯೋಗ ಸೃಷ್ಟಿ ಮಾಡಲಾಗಿದ್ದರೂ ಕೇಂದ್ರದಿಂದ 57.46 ಕೋಟಿ ರೂ. ಬಾಕಿ ಬರಬೇಕಿದೆ. ಜಿಲ್ಲೆಯ ಬಹುತೇಕ ಕಡೆ ಕೆರೆಗಳ ಹೂಳೆತ್ತುವ, ಕೃಷಿ ಹೊಂಡ ನಿರ್ಮಾಣ, ಹೊಲದಲ್ಲಿ ಬದು ನಿರ್ಮಾಣ ಸೇರಿದಂತೆ ಮೊದಲಾದ ಕೆಲಸಗಳು ಬರದಿಂದ ನಡೆದಿವೆ. ಪ್ರತಿನಿತ್ಯ ಸಾವಿರಾರು ಜನ ಈ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಕೂಲಿಗೆ ತಕ್ಕಂತೆ ಸಕಾಲಕ್ಕೆ ಹಣ ಬಾರದಿರುವದು ಕೃಷಿ ಕಾರ್ಮಿಕರಲ್ಲಿ ಆತಂಕ ಉಂಟು ಮಾಡಿದೆ.

ಬರದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಕಾರ್ಡ್‌ ಪಡೆದವರಿಗೆ 150 ದಿನಗಳ ಕಾಲ ಕೆಲಸ ನೀಡಲಾಗುತ್ತಿದೆ. ಪ್ರತಿ ದಿನಕ್ಕೆ 249 ರೂ. ಕೂಲಿ ನಿಗದಿ ಮಾಡಲಾಗಿದೆ. ಆದರೆ ಕೆಲ ತಿಂಗಳಿಂದ ಕೆಲಸದ ಹಣ ಇನ್ನೂ ಕಾರ್ಮಿಕರ ಖಾತೆಗೆ ಸಂದಾಯವಾಗಿಲ್ಲ. ಇದು ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ವಾರ್ಷಿಕ 83 ಲಕ್ಷ ಮಾನವ ದಿನ ಸೃಷ್ಟಿ ಗುರಿ ನಿಗದಿಪಡಿಸಲಾಗಿತ್ತು. ಜನವರಿ 26ರ ವರೆಗೆ 73 ಲಕ್ಷ ಮಾನವ ದಿನ ಸೃಷ್ಟಿ ಮಾಡಿ ಶೇ.117ರಷ್ಟು ಪ್ರಗತಿ ಸಾಧಿಸಲಾಗಿದೆ. ಆದರೆ ಇದರ ಕೂಲಿ ಹಾಗೂ ಸಾಮಗ್ರಿಗಳ ವೆಚ್ಚ ಭರಿಸಲು ಇದುವರೆಗೆ ಸಾಧ್ಯವಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ಬಾಕಿ ಇರುವದು ಅಧಿಕಾರಿಗಳಿಗೂ ಸಹ ತಲೆನೋವಾಗಿ ಪರಿಣಮಿಸಿದೆ. ಇವತ್ತಿಲ್ಲಾ ನಾಳೆ ಹಣ ಪಾವತಿಯಾಗುತ್ತದೆ ಎಂಬ ಭರವಸೆಗಳಿಂದ ಕೂಲಿ ಕೆಲಸ ಮಾಡಿಸುತ್ತಿದ್ದಾರೆ.

ನರೇಗಾ ಯೋಜನೆಯಡಿ ಕೆಲಸ ಮಾಡುವ ಕೃಷಿ ಕಾರ್ಮಿಕರು ಪ್ರತಿನಿತ್ಯ ಗ್ರಾಪಂ, ಜಿಪಂ, ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ ಎಲ್ಲಿಯೂ ಹಣ ಪಾವತಿಯಾಗುವ ವಿಶ್ವಾಸ ಕಾಣುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳತ್ತ ಬೊಟ್ಟು ಮಾಡುತ್ತಾರೆ. ಹೀಗಾದರೆ ನಾವು ಏನು ಮಾಡಬೇಕು ಎಂಬುದು ಕೂಲಿ ಕಾರ್ಮಿಕರ ಆರೋಪ.

ಜಿಲ್ಲಾಡಳಿತದ ಅಂಕಿ-ಅಂಶಗಳ ಪ್ರಕಾರ ಹುಕ್ಕೇರಿ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 8.16 ಕೋಟಿ ಬಾಕಿ ಇದೆ. ಖಾನಾಪುರ ತಾಲೂಕಿನಲ್ಲಿ 7.443 ಕೋಟಿ ರೂ. ಇದ್ದರೆ ರಾಯಬಾಗ ತಾಲೂಕಿನಲ್ಲಿ ಬಾಕಿ ಪ್ರಮಾಣ 6.56 ಕೋಟಿ ರೂ. ಇದೆ. ಸವದತ್ತಿ ತಾಲೂಕಿನಲ್ಲಿ ಅತೀ ಕಡಿಮೆ ಅಂದರೆ 4.36 ಕೋಟಿ ರೂ. ಬಾಕಿ ಪಾವತಿಯಾಗಬೇಕಿದೆ.

ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿ ಬರ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿದ್ದ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು, ರಾಜ್ಯದಲ್ಲಿ ಭೀಕರ ಬರದ ಹಿನ್ನೆಲೆಯಲ್ಲಿ ಜನರು ಗುಳೆ ಹೋಗಬಾರದು ಎಂಬ ಉದ್ದೇಶದಿಂದ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮಾನವ ದಿನಗಳನ್ನು 100 ರಿಂದ 150ಕ್ಕೆ ಹೆಚ್ಚಿಸಲಾಗಿದೆ. ಆದರೆ ಕೇಂದ್ರದಿಂದ ನಮಗೆ ಬರಬೇಕಿರುವ ಬಾಕಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರಿಗೆ ಹಣ ಪಾವತಿಯಲ್ಲಿ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಶೀಘ್ರವೇ ಪ್ರಧಾನಿಗೆ ಮನವಿ ಮಾಡಲಾಗುವುದು ಎಂದು ಹೇಳಿದ್ದರು.

ಅನಾವೃಷ್ಟಿ ಉಂಟಾದ ಸಂದರ್ಭದಲ್ಲಿ ನರೇಗಾ ಯೋಜನೆ ಬಹಳ ಪ್ರಯೋಜನಕಾರಿ. ಆದರೆ ಇಲ್ಲಿ ಯೋಜನೆಯ ಬಳಕೆ ಸರಿಯಾಗಿ ಆಗುತ್ತಿಲ್ಲ. ಜನರಿಗೆ ಸರಿಯಾಗಿ ಉದ್ಯೋಗ ಹಾಗೂ ಕೂಲಿ ಹಣ ನೀಡಬೇಕಾದ ರಾಜ್ಯ ಸರ್ಕಾರ ಕೇಂದ್ರವನ್ನು ದೂಷಿಸುತ್ತ ಕುಳಿತಿದೆ. ಲೋಪದೋಷಗಳು ಬಹಳ ಪ್ರಮಾಣದಲ್ಲಿ ಆಗುತ್ತಿವೆ. ರಾಜ್ಯ ಸರಕಾರ ಉದ್ಯೋಗ ಸೃಷ್ಟಿ ಮಾಡಿದ ಮೇಲೆ ಅದರ ವಿವರವನ್ನು ಕೇಂದ್ರಕ್ಕೆ ನೀಡಿದರೆ ಹಣ ಬಿಡುಗಡೆಯಾಗುತ್ತದೆ. ಆ ಕೆಲಸ ರಾಜ್ಯದಿಂದ ಆಗುತ್ತಿಲ್ಲ ಎಂಬುದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅಭಿಪ್ರಾಯ.

ಉದ್ಯೋಗ ಖಾತ್ರಿ ಕೆಲಸ ಎಲ್ಲ ಕಡೆ ನಡೆದಿದೆ. ಜನರೂ ಸಹ ಕೆಲಸಕ್ಕೆ ಬರುತ್ತಿದ್ದಾರೆ. ಆದರೆ ಕೆಲಸಕ್ಕೆ ತಕ್ಕಂತೆ ಹಣ ಪಾವತಿಯಾಗುತ್ತಿಲ್ಲ. ಇದರಿಂದ ಜನರು ತೊಂದರೆಗೆ ಸಿಲುಕಿದ್ದಾರೆ. ಮೇಲಿಂದ ಸಕಾಲಕ್ಕೆ ಹಣ ಬಂದರೆ ಎಲ್ಲವೂ ಸರಿಹೋಗುತ್ತದೆ. ಈ ಕೆಲಸ ಆದ್ಯತೆಯ ಮೇಲೆ ಆಗಬೇಕು ಎಂಬುದು ಗ್ರಾಪಂ ಕಾರ್ಯದರ್ಶಿಗಳ ಹೇಳಿಕೆ.

ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಸರಿಯಾಗಿ ಹಣ ಪಾವತಿ ಆಗುತ್ತಿಲ್ಲ. ಇದರಿಂದ ಗುಳೆ ಹೋಗುವುದು ನಿಂತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ ಅನುದಾನದ ವಿಷಯವಾಗಿ ತಿಕ್ಕಾಟ ನಡದೇ ಇದೆ. ಮುಖ್ಯವಾಗಿ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಅಂಕಿ-ಅಂಶ ವಾಸ್ತವ ಸ್ಥಿತಿಗೆ ಬಹಳ ದೂರವಾಗಿದೆ. ಕೂಲಿ ದಿನಗಳನ್ನು ಈಗಿರುವ 150 ದಿನಗಳಿಂದ 250 ದಿನಗಳವರೆಗೆ ಹೆಚ್ಚಿಸಬೇಕು. ಅಂದರೆ ಗುಳೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. • ಮಲ್ಲಿಕಾರ್ಜುನ ಜಕಾತಿ,
ಕರ್ನಾಟಕ ಕೃಷಿಕ ಸಂಘದ ಅಧ್ಯಕ್ಷ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next