Advertisement

Belagavi: ಕಿತ್ತೂರು ಉತ್ಸವಕ್ಕೆ ಎರಡು ಕೋಟಿ ರೂಪಾಯಿ ಬಿಡುಗಡೆ

05:18 PM Oct 21, 2023 | Team Udayavani |

ಬೆಳಗಾವಿ: ಪ್ರತಿ ವರ್ಷದಂತೆ ಈ ಬಾರಿಯೂ ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ಕಿತ್ತೂರಿನಲ್ಲಿ ನಡೆಯುವ ಉತ್ಸವದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿವಿಧ ಕಲಾವಿದರು ಭಾಗವಹಿಸಲಿದ್ದು, ಖ್ಯಾತ ಸಂಗೀತ
ನಿರ್ದೇಶಕ ಹಂಸಲೇಖ ಅವರು ಈ ಬಾರಿಯ ಉತ್ಸವಕ್ಕೆ ವಿಶೇಷ ಮೆರಗು ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಉತ್ಸವದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಚರಣೆಗೆ ತಯಾರಿ ಮಾಡಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಸಂಚರಿಸಿದ ವೀರಜ್ಯೋತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ
ನೀಡಿದ್ದಾರೆ ಎಂದರು.

ಪ್ರತಿ ವರ್ಷದಂತೆ ಕಿತ್ತೂರು ಕೋಟೆ ಆವರಣದಲ್ಲಿ ದಿ. 23 ರಿಂದ 25 ರವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಕಿತ್ತೂರು ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು. ಉತ್ಸವಕ್ಕಾಗಿ ಸರಕಾರ ಈಗಾಗಲೇ ಎರಡು ಕೋಟಿ
ಅನುದಾನ ಬಿಡುಗಡೆ ಮಾಡಿದ್ದು, ಯಾವುದೇ ರೀತಿಯಲ್ಲಿ ಅನುದಾನದ ಕೊರತೆಯಾಗಿಲ್ಲ ಎಂದು ಹೇಳಿದರು.

ಉತ್ಸವದ ಮೊದಲ ದಿನ ದಿ. 23ರಂದು ಪ್ರಸಿದ್ಧ ಗಾಯಕರಾದ ಸಂಚಿತ್‌ ಹೆಗಡೆ ಅವರು ಕಾರ್ಯಕ್ರಮ ನೀಡಲಿದ್ದಾರೆ. ಎರಡನೇ ದಿನ ದಿ.24 ರಂದು ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ಮೀಸಲಿಡಲಾಗಿದ್ದು, ಖ್ಯಾತ ಗಾಯಕಿ ಶಮಿತಾ ಮಲ್ನಾಡ ಅವರ ಕಾರ್ಯಕ್ರಮ ಉತ್ಸವದ ವಿಶೇಷ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದರು.

ಕಲಾವಿದರಿಗೆ ಆನ್‌ ಲೈನ್‌ ಪಾವತಿ: ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರು, ಅಂತರಾಷ್ಟ್ರೀಯ ಕಲಾವಿದರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿಯಂತೆ ಕಲಾವಿದರಿಗೆ ಆನ್‌ಲೈನ್‌ ಮೂಲಕ ವೇತನ ಪಾವತಿಸಲಾಗುವುದು ಎಂದು ಅವರು
ಹೇಳಿದರು. ಕಿತ್ತೂರು ಶಾಸಕ ಬಾಬಾಸಾಹೇಬ್‌ ಪಾಟೀಲ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಆಸನ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದರು. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕ ಆಸೀಫ್‌ (ರಾಜು) ಸೇಠ್‌ , ಮಹಾಪೌರ  ಶೋಭಾ ಸೋಮನಾಚೆ, ಉಪ ಮಹಾಪೌರ ರೇಷ್ಮಾ ಪಾಟೀಲ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.

ವೀರಜ್ಯೋತಿಗೆ ಅದ್ಧೂರಿ ಸ್ವಾಗತ ಬೆಳಗಾವಿ: ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ವೀರಜ್ಯೋತಿ ಯನ್ನು ನಗರದಲ್ಲಿ ಶುಕ್ರವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸೀಫ್‌ (ರಾಜು) ಸೇಠ್‌ ಅವರು ವೀರಜ್ಯೋತಿಗೆ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.

ಕಿತ್ತೂರು ಶಾಸಕ ಬಾಬಾಸಾಹೇಬ್‌ ಪಾಟೀಲ, ಮಹಾಪೌರ ಶೋಭಾ ಸೋಮನಾಚೆ, ಉಪಮಹಾಪೌರ ರೇಷ್ಮಾ ಪಾಟೀಲ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮೊದಲಾದವರು ಉಪಸ್ಥಿತರಿದ್ದರು. ನಂತರ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದ ವೀರಜ್ಯೋತಿಯನ್ನು ಚೆನ್ನಮ್ಮನ ಹುಟ್ಟೂರು ಕಾಕತಿ ಗ್ರಾಮಕ್ಕೆ ಬೀಳ್ಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next