ಬೆಳಗಾವಿ: ಕರ್ನಾಟಕ ರಾಜಕಾರಣಲ್ಲಿ ದಿನದಿಂದ ದಿನಕ್ಕೆ ಶಕುನಿ ರಾಜಕೀಯ ಜಾಸ್ತಿಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು.
ಸವದತ್ತಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೆಲ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ವೈಮನಸ್ಸು ತಂದಿಡುವುದೇ ಕೆಲಸವಾಗುತ್ತಿದೆ ಎಂದು ಕಿಡಿಕಾರಿದರು.
ರಾಜ್ಯಾಧ್ಯಕ್ಷರಿಂದ ಒಳ ಒಪ್ಪಂದದ ರಾಜಕೀಯ ನಡೆಯುತ್ತಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ್ ಅವರ ಬಗ್ಗೆ ಅಪಾರ ಗೌರವಿದೆ. ಅವರಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ. ಶಾಸಕ ಯತ್ನಾಳ್ ಅವರು, ಬೇಕಿದ್ದರೆ ತಮ್ಮ ಪಕ್ಷದ ಬಗ್ಗೆ ಮಾತಾಡಲಿ, ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವುದು ಬೇಡ ಎಂದರು.
ಅವರಿಗೆ ಗೊಂದಲ ಸೃಷ್ಟಿಸುವುದೇ ಕೆಲಸ. ಅನಾವಶ್ಯಕ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಮಾಡಿ, ಸಿಎಂ, ಡಿಸಿಎಂ ನಡುವೆ ಭಿನ್ನಮತ ತಂದಿಡುವ ಕೆಲಸವನ್ನು ಮೊದಲು ಬಿಡಲಿ ಎಂದು ಸಚಿವರು ತಿರುಗೇಟು ನೀಡಿದರು.
ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಮಾಡುವುದು ಪಕ್ಷದ ಶಾಸಕರು ಹಾಗೂ ಹೈಕಮಾಂಡ್ ಹೊರತು ಬಿಜೆಪಿ ರಾಜ್ಯಾಧ್ಯಕ್ಷರಲ್ಲ. ಒಳ ಒಪ್ಪಂದ ರಾಜಕಾರಣದ ಮಾತನ್ನು ಇನ್ಮುಂದಾದರೂ ಯತ್ನಾಳ್ ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಪದೆ ಪದೇ ಅನ್ಯಾಯ ಆಗುತ್ತಿದೆ. ಮೊದಲು ಅದನ್ನು ಸರಿ ಪಡಿಸಲಿ. ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ ಎಂದು ಹೆಬ್ಬಾಳ್ಕರ್ ತಿರುಗೇಟು ನೀಡಿದರು.