ಬೆಂಗಳೂರು: ಬೆಳಗಾವಿಯ ಎಸ್ಡಿಎ ರುದ್ರಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದ್ದು, ಕಾಂಗ್ರೆಸ್ ಸರಕಾರದಲ್ಲಿ “ಆತ್ಮಹತ್ಯಾ ಗ್ಯಾರಂಟಿ’ ಎಂದು ಆರೋಪಿಸಿದೆ.
ಉಪಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಇದು ಇನ್ನೊಂದು ಅಸ್ತ್ರವಾಗಿ ಪರಿಣಮಿಸಿದ್ದು, ಸಚಿವೆ ಹೆಬ್ಟಾಳ್ಕರ್ ರಾಜೀನಾಮೆಗೆ ಬಿಗಿಪಟ್ಟು ಹಿಡಿಯಲು ಬಿಜೆಪಿ ತೀರ್ಮಾನಿಸಿದೆ. ಈ ಸಂಬಂಧ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮೊದಲಾದವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ “ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ “ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರಂಟಿ’ ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಳೆದ 17 ತಿಂಗಳಲ್ಲಿ 4ನೇ ಪ್ರಕರಣ ಇದಾಗಿದ್ದು (ಎಸ್ಡಿಎ ರುದ್ರಣ್ಣ ಪ್ರಕರಣ) ಸಿದ್ದರಾಮಯ್ಯನವರೇ ನಿಮ್ಮ ಸರಕಾರದ ಭ್ರಷ್ಟಾಚಾರದ ದಾಹಕ್ಕೆ ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗಬೇಕು ? ಎಂದು ಪ್ರಶ್ನಿಸಿದರು.
ಈ ಆತ್ಮಹತ್ಯೆಗೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಅವರ ವರ್ಗಾವಣೆ ದಂಧೆಯೇ ಕಾರಣ ಎಂಬ ಅನುಮಾನವಿದ್ದು ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದಿದ್ದಾರೆ
ಸಚಿವೆ ರಾಜೀನಾಮೆ ನೀಡಲಿ
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಸುದ್ದಿಗಾರರ ಜತೆಗೆ ಮಾತನಾಡಿ, ಸಚಿವೆ ಹೆಬ್ಟಾಳ್ಕರ್ ಅವರ ಆಪ್ತ ಕಾರ್ಯದರ್ಶಿ ಸೋಮು ತಮ್ಮ ಆತ್ಮಹತ್ಯೆಗೆ ಕಾರಣವೆಂದು ಪತ್ರ ಬರೆದಿಟ್ಟು ಎಸ್ಡಿಎ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿ¨ªಾರೆ. ಪ್ರಕರಣದ ಹೊಣೆ ಹೊತ್ತು ಲಕ್ಷ್ಮೀ ಹೆಬ್ಟಾಳ್ಕರ್ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
“ಈ ಸಾವು ನ್ಯಾಯವೇ? ಕಾಂಗ್ರೆಸ್ ಸರಕಾರದ ಅಘೋಷಿತ ಸಾವು ಗ್ಯಾರಂಟಿ ಯೋಜನೆ. ರೈತರು, ಕಾರ್ಮಿಕರು, ಸರಕಾರಿ ಅಧಿಕಾರಿಗಳಿಗೆ ಈ ಸರಕಾರದ ಕೊಡುಗೆ ಸಾವೇ ಗ್ಯಾರಂಟಿ.” – ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ