Advertisement

ಪ್ರಾಧಿಕಾರದಲ್ಲಿ ಹಣವಿಲ್ಲ; ಪಾಲಿಕೆಗೆ ಸಂಬಂಧ ಇಲ್ಲ 

03:42 PM Sep 05, 2018 | Team Udayavani |

ಬೆಳಗಾವಿ: ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವ ಬೆಳಗಾವಿಯಲ್ಲಿ ಎರಡು ಪ್ರಮುಖ ಬಡಾವಣೆಗಳು ಹಸ್ತಾಂತರದ ಗೊಂದಲದಲ್ಲಿ ಅಗತ್ಯ ಮೂಲ ಸೌಲಭ್ಯಗಳಿಲ್ಲದೆ ದಿನನಿತ್ಯ ಪರದಾಡಬೇಕಾಗಿದೆ. ನಮ್ಮ ಬಡಾವಣೆಗಳನ್ನು ಅಭಿವೃದ್ಧಿ ಮಾಡಿ ಇಲ್ಲವೇ ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಿ ಎಂದು ರಾಮತೀರ್ಥ ನಗರ ಹಾಗೂ ಕುಮಾರಸ್ವಾಮಿ ಬಡಾವಣೆಯ ನಿವಾಸಿಗಳ ಬೇಡಿಕೆ ಅರಣ್ಯರೋದನವಾಗಿದೆ. ಈ ಎರಡೂ ಬಡಾವಣೆಗಳು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಂಡಿವೆ. ಇಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ದಾಖಲೆಗಳಿಗಷ್ಟೆ ಸೀಮಿತ. ಒಂದು ಬಡಾವಣೆ ನಿರ್ಮಾಣ ಮಾಡಿದ್ದೇವೆ ಎಂಬುದೇ ಪ್ರಾಧಿಕಾರದ ಸಾಧನೆ.

Advertisement

ರಾಮತೀರ್ಥ ನಗರದ ಜನರು ಕುಡಿಯುವ ನೀರು ಮೊದಲು ಮಾಡಿಕೊಂಡು ಎಲ್ಲದಕ್ಕೂ ಪರದಾಡಬೇಕಿದೆ. ನಗರ ವ್ಯಾಪ್ತಿಯಲ್ಲಿದ್ದರೂ ಅನಾಥ ಪ್ರಜ್ಞೆ. ಶಾಸಕರು ಆಗಾಗ ಬೇಟಿ ನೀಡಿದರೂ ಸಮಸ್ಯೆಗಳು ಪರಿಹಾರವಾಗಿಲ್ಲ. ಈ ಬಡಾವಣೆಗಳಿಂದ ಪಾಲಿಕೆಗೆ ಆಯ್ಕೆಯಾದ ಸದಸ್ಯರ ಐದು ವರ್ಷದ ಅವಧಿ ಮುಗಿಯುತ್ತ ಬಂದಿತು. ಆದರೆ ಇಲ್ಲಿಯ ಜನರ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.

ಸುಮಾರು 360 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ರಾಮತೀರ್ಥ ನಗರದಲ್ಲಿ ಎರಡು ಸಾವಿರಕ್ಕೂ ಅಧಿಕ ಮನೆಗಳಿವೆ. ಐದು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಆದರೆ ಜನಸಂಖ್ಯೆ ಅಧಾರದ ಮೇಲೆ ಇಲ್ಲಿ ಯಾವುದೇ ಅಗತ್ಯ ಸೌಲಭ್ಯ ಇಲ್ಲ. ಸುಮಾರು 50 ಎಕರೆ ಪ್ರದೇಶದ ಕುಮಾರಸ್ವಾಮಿ ಬಡಾವಣೆಯಲ್ಲಿ ಅಂದಾಜು 600 ಮನೆಗಳಿವೆ. ಅಲ್ಲಿಯೂ ಜನರ ಸಮಸ್ಯೆಗಳು ಪರಿಹಾರ ಕಂಡಿಲ್ಲ.

ಬಡಾವಣೆಗಳ ಸಮಗ್ರ ಅಭಿವೃದ್ಧಿಗೆ ಇಲ್ಲಿನ ಜನ ಪ್ರತಿಭಟನೆ, ಧರಣಿ ಸತ್ಯಾಗ್ರಹ ಮಾಡದ ದಿನಗಳೇ ಇಲ್ಲ. ಆದರೆ ಇದಾವುದೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಿವಿಗೆ ಬಿದ್ದಿಲ್ಲ. ಕಣ್ಣಿಗೆ ಕಂಡಿಲ್ಲ. ಪ್ರತಿಭಟನೆ ಮಾಡಿದಾಗ ಸಾಂತ್ವನದ ಮಾತುಗಳು ಬಂದಿವೆ. ಕಾಟಾಚಾರದ ಕೆಲವು ಕೆಲಸಗಳಾಗಿದೆ. ಮಾಡಿದ ಕೆಲಸಗಳು ಸಹ ತಾತ್ಕಾಲಿಕ.

ಈ ಎರಡೂ ಸರಕಾರದಿಂದ ಅಧಿಕೃತವಾಗಿ ನಿರ್ಮಾಣವಾಗಿದ್ದರೂ ಎಲ್ಲವೂ ಅವ್ಯವಸ್ಥೆಯಿದೆ. ಅದೇ ಪ್ರಾಧಿಕಾರದ ಬಳಿ ಇರುವ ಅನಧಿಕೃತ ಬಡಾವಣೆಯಲ್ಲಿ ಒಳಚರಂಡಿ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಲಿಕೆಯ 100 ಕೋಟಿ ಅನುದಾನದಲ್ಲಿ ಇಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇದಾವ ನ್ಯಾಯ ಎಂಬುದು ಮಾಜಿ ನಗರಸೇವಕ ಹನುಮಂತ ಉಪ್ಪಾರ ಪ್ರಶ್ನೆ.

Advertisement

ಒಳಚರಂಡಿ ಸಮಸ್ಯೆ
ಗಟಾರು ಹಾಗೂ ಒಳಚರಂಡಿ ಈ ಬಡಾವಣೆಯ ಜನರನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ. ಜನರ ಒತ್ತಾಯಕ್ಕೆ ಮಣಿದು ಎರಡು ವರ್ಷದ ಹಿಂದೆ ಐದು ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ರಸ್ತೆ ಮತ್ತು ಗಟಾರು ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿದ್ದು ಒಂದು ತಿಂಗಳ ಅವಧಿಯಲ್ಲೇ ಹಾಳಾಗಿ ಹೋಗಿವೆ. ಕೆಲವು ಕಡೆ ರಸ್ತೆಗಳನ್ನು ಹುಡುಕಬೇಕಾದ ಸ್ಥಿತಿ ಇದೆ. ಒಳಚರಂಡಿ ವ್ಯವಸ್ಥೆ ಇಲ್ಲದೆ ಶೌಚಾಲಯದ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತಿದೆ. ಆದರೂ ಪ್ರಾಧಿಕಾರದ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವಂತಿದ್ದಾರೆ. ರಾಮತೀರ್ಥ ನಗರದಲ್ಲಿ ಕಸದ ವಿಲೇವಾರಿ ಇನ್ನೊಂದು ದೊಡ್ಡ ಸಮಸ್ಯೆ. ವಾರದಲ್ಲಿ ಒಂದೆರಡು ಬಾರಿ ಮಾತ್ರ ಇಲ್ಲಿನ ಮನೆಗಳ ಕಸ ವಿಲೇವಾರಿಯಾಗುತ್ತಿದೆ. 

ಹಸ್ತಾಂತರ ಸಮಸ್ಯೆ
ರಾಮತೀರ್ಥ ನಗರ ಹಾಗೂ ಕುಮಾರಸ್ವಾಮಿ ನಗರದ ಸಮಸ್ಯೆಗಳು ಬಗೆಹರಿಯಬೇಕಾದರೆ ಮೊದಲು ಅಗತ್ಯ ಸೌಲಭ್ಯ ಕಲ್ಪಿಸಿ ನಂತರ ಇದನ್ನು ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಬೇಕಿದೆ. ಆದರೆ ಈ ಬಡಾವಣೆಗಳನ್ನು ಎಲ್ಲ ರೀತಿಯಿಂದ ಅಭಿವೃದ್ಧಿ ಪಡಿಸಲು ಪ್ರಾಧಿಕಾರದಬಳಿ ಹಣ ಇಲ್ಲ. ರಾಮತೀರ್ಥ ನಗರದ ಸಮಗ್ರ ಅಭಿವೃದ್ಧಿಗೆ ಕನಿಷ್ಠ 32 ಕೋಟಿ ರೂ. ಬೇಕು. ಕುಮಾರವ್ಯಾಸ ನಗರದ ಅಭಿವೃದ್ಧಿಗೆ ಐದು ಕೋಟಿ ರೂ. ಅಗತ್ಯವಿದೆ. ಆದರೆ ಇಷ್ಟೊಂದು ಹಣವನ್ನು ವೆಚ್ಚಮಾಡಲು ಪ್ರಾಧಿಕಾರಕ್ಕೆ ಆಗುತ್ತಿಲ್ಲ. ಇದರಿಂದ ಹಸ್ತಾಂತರ ಪ್ರಸ್ತಾವನೆ ದೊಡ್ಡ ಕಗ್ಗಂಟಾಗಿದೆ. ಈ ಹಿಂದೆ ಸತೀಶ ಜಾರಕಿಹೊಳಿ ಸಚಿವರಾಗಿದ್ದಾಗ ಈ ಬಡಾವಣೆಗಳನ್ನು 89 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡಿ ಪಾಲಿಕೆಗೆ ಹಸ್ತಾಂತರ ಮಾಡಲು ನಿರ್ಣಯಕೈಗೊಳ್ಳಲಾಗಿತ್ತು. ಆದರೆ ಮುಂದೆ ಏನು ಆಗಲಿಲ್ಲ. ಈ ನಿರ್ಣಯ ಎಲ್ಲಿ ಹೋಯಿತು ಎಂಬುದು ಇಲ್ಲಿನ ಜನರ ಪ್ರಶ್ನೆ.

ಎರಡೂ ಬಡಾವಣೆಗಳಲ್ಲಿ ಬಹಳ ಸಮಸ್ಯೆಗಳಿವೆ. ಸಂಪೂರ್ಣ ಅಭಿವೃದ್ಧಿಪಡಿಸಲು ನಗರಾಭಿವೃದ್ಧಿ ಪ್ರಾಧಿಕಾರದ ಬಳಿ ಹಣ ಇಲ್ಲ. ಹೀಗಾಗಿ ಈ ಬಡಾವಣೆಗಳನ್ನು ಹಸ್ತಾಂತರ ಮಾಡಲಾಗುತ್ತಿಲ್ಲ. ಇದನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಂಡು ಎರಡೂ ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳಲಾಗುವುದು.
. ಬಸಪ್ಪ ಚಿಕ್ಕಲದಿನ್ನಿ, ಮಹಾಪೌರ

ನಾನು ಹೆಸರಿಗಷ್ಟೇ ಈ ಕ್ಷೇತ್ರದ ಪಾಲಿಕೆ ಸದಸ್ಯೆ. ನನ್ನ ಅವಧಿಯಲ್ಲಿ ಸಾಧ್ಯವಾಷ್ಟು ಕೆಲಸಗಳನ್ನು ಮಾಡಬೇಕು ಎಂದುಕೊಂಡಿದ್ದೆ. ಆದರೆ ಇದಕ್ಕೆ ಅನುದಾನವನ್ನೇ ಕೊಡಲಿಲ್ಲ. ಈ ಬಡಾವಣೆ ಪಾಲಿಕೆಗೆ ಹಸ್ತಾಂತರವಾಗಿಲ್ಲ ಎಂಬ ಕಾರಣಕ್ಕೆ ಪಾಲಿಕೆಯಿಂದ ಹಣ ಬಿಡುಗಡೆಯಾಗುತ್ತಿಲ್ಲ. ಪ್ರಾಧಿಕಾರದಲ್ಲಿ ಹಣ ಇಲ್ಲ. ಹೀಗಾಗಿ ನಾನು ಬಡಾವಣೆಗೆ ಹೋದರೆ ಸಾಕು ಅಲ್ಲಿನ ಜನರಿಂದ ಬೈಗುಳ ತಿನ್ನಬೇಕಾಗಿದೆ. ನಾನೂ ಸಹ ಅಸಹಾಯಕಿ. ಹಿಂದಿನ ಶಾಸಕರು ಈ ಬಡಾವಣೆಗೆ ಒಂದೂ ಪೈಸೆಯೂ ಬಿಡುಗಡೆ ಮಾಡದಂತೆ ನೋಡಿಕೊಂಡರು.
. ಶಾಂತಾ ಉಪ್ಪಾರ, ಪಾಲಿಕೆ ಸದಸ್ಯೆ

ಸರಕಾರದ ಮುಂದೆ ಸದ್ಯ ಈ ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರ ಮಾಡುವ ಪ್ರಸ್ತಾವನೆ ಇಲ್ಲ. ಪ್ರಾಧಿಕಾರವು ರಾಮತೀರ್ಥ ನಗರದ ಸಮಗ್ರ ಅಭಿವೃದ್ಧಿ ಮಾಡಿದ ಮೇಲಷ್ಟೇ ಅದು ಪಾಲಿಕೆಗೆ ಹಸ್ತಾಂತರ ಮಾಡಬೇಕು. ಅದಕ್ಕೆ ಸುಮಾರು 32 ಕೋಟಿ ರೂ. ಅಗತ್ಯವಿದೆ. ಆದರೆ ಇಷ್ಟು ಹಣ ಪ್ರಾಧಿಕಾರದಲ್ಲಿ ಇಲ್ಲ. ಈ ವರ್ಷ ಸಹ ಇದುವರೆಗೆ ಯಾವುದೇ ತೀರ್ಮಾನ ಆಗಿಲ್ಲ.
. ಶಶಿಧರ ಕುರೇರ, ಪಾಲಿಕೆ ಆಯುಕ್ತ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next