ಬೆಳಗಾವಿ: ಒಂದು ತಿಂಗಳ ಹೆಣ್ಣು ಮಗುವನ್ನು ಒಂದೂವರೆ ಲಕ್ಷ ರೂ. ಗೆ ಮಾರಾಟ ಮಾಡಲು ಯತ್ನಿಸಿದ ವೈದ್ಯ ಸೇರಿ ಐವರನ್ನು ಮಾಳಮಾರುತಿ ಠಾಣೆ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಮಹಾದೇವಿ ಉರುಫ್ ಪ್ರಿಯಾಂಕಾ ಬಾಹುಬಲಿ ಜೈನ, ಸವದತ್ತಿ ತಾಲೂಕಿನ ಹಂಚಿನಾಳದ ಸದ್ಯ ಕಿತ್ತೂರಿನ ವೈದ್ಯ ಡಾ. ಅಬ್ದುಲ್ ಗಫಾರ್ ಹುಸೇನಸಾಬ ಲಾಡಖಾನ, ಬೈಲಹೊಂಗಲ ತಾಲೂಕಿನ ತುರಕರ ಶೀಗಿಹಳ್ಳಿ ಗ್ರಾಮದ ಚಂದನ ಗಿರಿಮಲ್ಲಪ್ಪ ಸುಬೇಧಾರ, ಸಂಪಗಾಂವ ಗ್ರಾಮದ ಪವಿತ್ರಾ ಸೋಮಪ್ಪ ಮಡಿವಾಳರ, ಧಾರವಾಡ ತಾಲೂಕಿನ ಹೊಸಟ್ಟಿ ಗ್ರಾಮದ ಪ್ರವೀಣ ಮಂಜುನಾಥ ಮಡಿವಾಳರ ಎಂಬಾತರನ್ನು ಬಂಧಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಸತ್ತು ಕೇಂದ್ರದ ಸಂಯೋಜಕ ರಾಜಕುಮಾರ ಸಿಂಗಪ್ಪ ರಾಠೋಡ ನೀಡಿರುವ ದೂರಿನ ಮೇರೆಗೆ ಮಗು ಮಾರಾಟ ಮಾಡಲು ಯತ್ನಿಸಿದಾಗ ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ಪ್ರವೀಣ ಮಡಿವಾಳರ ಹಾಗೂ ಪವಿತ್ರಾ ಮಡಿವಾಳರ ಮಧ್ಯೆ ಲೈಂಗಿಕ ಸಂಬಂಧದಲ್ಲಿ ಒಂದು ತಿಂಗಳ ಹಿಂದೆ ಹೆಣ್ಣು ಮಗು ಹುಟ್ಟಿತ್ತು. ಇದರ ಗರ್ಭಪಾತ ಮಾಡಲು ಡಾ. ಅಬ್ದುಲಗಫಾರ ಲಾಡಖಾನ್ ಬಳಿ ಇವರು ಹೋಗಿದ್ದರು. ಯಾರಿಗೂ ಗೊತ್ತಾಗದಂತೆ ಗರ್ಭಪಾತ ಮಾಡುವಂತೆ ಕೇಳಿದ್ದರು. ಆದರೆ ವೈದ್ಯ ಲಾಡಖಾನ ಹೆರಿಗೆ ಮಾಡಿ ಮಗುವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಪ್ರವೀಣ ಹಾಗೂ ಪವಿತ್ರಾ ಮುಂದಿನ ದಿನಗಳಲ್ಲಿ ಮದುವೆ ಆಗುವುದಾಗಿ ತಿಳಿಸಿದ್ದಾರೆ.
30 ತಿಂಗಳ ಕಾಲ ಮಗುವನ್ನು ವೈದ್ಯ ಲಾಡಖಾನ್ ಆರೈಕೆ ಮಾಡಿ, ತನ್ನ ಆಸ್ಪತ್ರೆಯ ಸಿಬ್ಬಂದಿ ಚಂದನ ಸುಬೇಧಾರ ಕಡೆಯಿಂದ 60 ಸಾವಿರ ರೂ.ಗೆ ಪ್ರಿಯಂಕಾ ಜೈನರಗೆ ಮಾರಾಟ ಮಾಡಿದ್ದರು. ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿರುವ ಪ್ರಿಯಂಕಾಗೆ ಹಾಗೂ ವೈದ್ಯ ಲಾಡಖಾನಗೂ ಪರಿಚಯವಿತ್ತು. ಈ ಮಗುವನ್ನು ಪವಿತ್ರಾ 60 ಸಾವಿರ ರೂ.ಗೆ ಖರೀದಿಸಿ ಮತ್ತೊಬ್ಬರಿಗೆ 1.40 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪ್ರಿಯಂಕಾ ಹಾಗೂ ವೈದ್ಯ ಲಾಡಖಾನ ಸೇರಿದಂತೆ ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗು ಮಾರಾಟದ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಸಿ ಕಲಂ 500, 363, 370 0, 4.2. ಮತ್ತು 80, 81 ಮಕ್ಕಳ ಸಂರಕ್ಷಣಾ ಕಾಯ್ದೆ-2015ರಡಿ ಪ್ರಕರಣದ ದಾಖಲಿಸಲಾಗಿದೆ.
ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿಗಳಾದ ರೋಹನ್ ಜಗದೀಶ, ಪಿ.ವಿ. ಸ್ನೇಹ ಮಾರ್ಗದರ್ಶನದಲ್ಲಿ ಮಾಳಮಾರುತಿ ಪೊಲೀಸ್ ಇನ್ಸಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದಲ್ಲಿ ಪಿಎಸ್‌ಐ ರಾಮಗೌಡ ಸಂಕನಾಳ, ಸಿಬ್ಬಂದಿಗಳಾದ ಕೆ.ಬಿ. ಗೌರಾಣಿ ಹಾಗೂ ಜಾಸ್ಮೀನ್ ಮುಲ್ಲಾ ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.