Advertisement

ಮೊದಲ ದಿನವೇ ವಿಧಾನ ಮಂಡಲ ಖಾಲಿ ಖಾಲಿ

12:29 AM Dec 20, 2022 | Team Udayavani |

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳ ಸಹಿತವಾಗಿ ರಾಜ್ಯದ ಪ್ರಮುಖ ವಿಷಯಗಳ ಸುದೀರ್ಘ‌ ಚರ್ಚೆಗೆ ಸುವರ್ಣ ವಿಧಾನಸೌಧದಲ್ಲಿ ಆರಂಭವಾದ ಅಧಿವೇಶನದಲ್ಲಿ ಮೊದಲ ದಿನವೇ ವಿಧಾನಸಭೆಯಲ್ಲಿ ಖಾಲಿ ಖಾಲಿ.

Advertisement

ಅಧಿವೇಶನಕ್ಕೆ ಬಹುತೇಕ ಶಾಸಕರು ಗೈರಾಗಿದ್ದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ನಿಲುವಳಿ ಸೂಚನೆ ಮಂಡನೆ ಸಂದರ್ಭದಲ್ಲಿ ಸದನದ ಒಳಗೆ ಮೂರೂ ಪಕ್ಷಗಳಿಂದ ಒಟ್ಟು ಐವತ್ತು ಸದಸ್ಯರೂ ಇರಲಿಲ್ಲ. ಸಭಾನಾಯಕರಾದ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಷಯದ ಮೇಲೆ ಮಾತನಾಡುವ ಸಂದರ್ಭದಲ್ಲೂ ಬಹುತೇಕ ಸದಸ್ಯರು ಸದನದಲ್ಲಿ ಇರಲಿಲ್ಲ.

ಪ್ರಮುಖರ ಗೈರು
ವೈಯುಕ್ತಿಕ ಕಾರಣದಿಂದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕೆ.ಎಸ್‌. ಈಶ್ವರಪ್ಪ ಅವರು ಸಭಾಧ್ಯಕ್ಷಕರಿಗೆ ಪತ್ರ ಬರೆದಿದ್ದಾರೆ. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಕೂಡ ಸದನದಲ್ಲಿ ಕಾಣಿಸಿಕೊಂಡಿಲ್ಲ. ಸಂಪುಟಕ್ಕೆ ಸೇರಿಸಿಕೊಳ್ಳದ್ದಕ್ಕೆ ಈಶ್ವರಪ್ಪ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದಿದ್ದಾರೆ.

ವಿಧಾನ ಪರಿಷತ್‌
ವಿಧಾನ ಪರಿಷತ್‌ನಲ್ಲಿ ಮೊದಲ ದಿನ ಸುಮಾರು 50ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು. ಪ್ರಮುಖವಾಗಿ ಆಡಳಿತ ಪಕ್ಷದ ಸದಸ್ಯರಾದ ಸಿ.ಪಿ.ಯೋಗೇಶ್ವರ್‌ ಸದನಕ್ಕೆ ಆಗಮಿಸಿರಲಿಲ್ಲ. ಎಚ್‌. ವಿಶ್ವನಾಥ ಸುವರ್ಣಸೌಧಕ್ಕೆ ಆಗಮಿಸಿದ್ದರೂ ಕಲಾಪದಲ್ಲಿ ಪಾಲ್ಗೊಂಡಿರಲಿಲ್ಲ.

ಗಣ್ಯರಿಗೆ ಸಂತಾಪ
ಇತ್ತೀಚೆಗೆ ನಿಧನ ಹೊಂದಿದ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ, ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್‌ ಸಮದ್‌ ಸಿದ್ದಿಕಿ, ಮಾಜಿ ಸಂಸದ ಕೊಳೂರು ಬಸನಗೌಡ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌, ಮಾಜಿ ಶಾಸಕರಾದ ಜಬ್ಟಾರ್‌ ಖಾನ್‌ ಹೊನ್ನಳ್ಳಿ, ಎಸ್‌.ಎಸ್‌. ಪೂಜಾರಿ, ಸುಧೀಂದ್ರ ರಾವ್‌ ಕಸ್ಬೆ, ಎನ್‌ ಟಿ. ಬೋಪಣ್ಣ, ಶ್ರೀಶೈಲಪ್ಪ ಬಿದರೂರು, ಕುಂಬಳೆ ಸುಂದರ್‌ ರಾವ್‌, ಶಂಕರ ಗೌಡ ಎಸ್‌. ಪಾಟೀಲ್‌, ನಟ ಲೋಹಿತಾಶ್ವ, ಯಕ್ಷಗಾನ ಕಲಾವಿದ ಬಂಗಾರ್‌ ಆಚಾರ್‌, ಕೆರೆ ನಿರ್ಮಾತೃ ಕಲ್ಮನೆ ಕಾಮೇಗೌಡ, ವೇದಾಂತ ವಿದ್ವಾನ್‌ ಆರ್‌.ಎಲ್‌. ಕಶ್ಯಪ್‌ ಸಹಿತ ಅಗಲಿದ ಹಲವು ಗಣ್ಯರಿಗೆ ಸೋಮವಾರ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next