Advertisement

Belagavi: ರಕ್ಕಸಕೊಪ್ಪ ನೀರಿನ ಮಟ್ಟ ತಗ್ಗಿದರೂ ನೋ ಟೆನ್ಶನ್‌

06:17 PM May 16, 2023 | Team Udayavani |

ಬೆಳಗಾವಿ: ಬೇಸಿಗೆ ಕಾಲ ಬಂತೆಂದರೆ ನೀರಿನ ಬವಣೆ ಸಹಜ. ಅದರಂತೆ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ
ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟ ತಗ್ಗಿದ್ದರಿಂದ ಸದ್ಯ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ನೀರಿನ ಮಟ್ಟ ತಗ್ಗಿದರೂ ಜೂನ್‌ ಮಧ್ಯದವರೆಗೂ ಈ ನೀರನ್ನು ಸಮರ್ಪಕವಾಗಿ ಪೂರೈಸಬಹುದಾಗಿದೆ.

Advertisement

ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕಿಂತಲೂ ಈ ಸಲ ತುಸು ಕಡಿಮೆ ಆಗಿದೆ. ಈಗ 2453.75 ಅಡಿವರೆಗೆ ಉಳಿದುಕೊಂಡಿದೆ. ಇಷ್ಟೇ ನೀರನ್ನು ಜೂನ್‌ ಅಂತ್ಯದವರೆಗೂ ಪೂರೈಸಬಹುದಾಗಿದೆ ಎಂದು ಅ ಧಿಕಾರಿಗಳು ಅಂದಾಜಿಸಿದ್ದಾರೆ.

ಬೆಳಗಾವಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯವರು ನೋಡಿಕೊಳ್ಳುತ್ತಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಬೆಳಗಾವಿ ನಗರದಲ್ಲಿ 6-7 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಫೆಬ್ರುವರಿ ಯಿಂದಲೇ ಈ ನೀರಿನ ಮಟ್ಟ ಇಳಿಮುಖ
ಆಗುತ್ತಿದೆ. ಫೆಬ್ರುವರಿಯಿಂದ ಮೇ ವರೆಗೆ ಒಟ್ಟು 14 ಅಡಿ ವರೆಗೆ ನೀರು ತಗ್ಗಿದೆ.

ಬೇಸಿಗೆ ತಾಪ ಹೆಚ್ಚುತ್ತಿರುವುದರಿಂದ ನೀರು ಕಡಿಮೆ ಆಗುತ್ತಿದೆ. ಜೂನ್‌ ಮೊದಲ ವಾರದಲ್ಲಿ ಮಳೆ ಆಗದಿದ್ದರೆ ನೀರಿನ ತೊಂದರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ನಗರ ಹಾಗೂ ನಗರದ ಹೊರವಲಯದ ಜನರು ನೀರಿಲ್ಲದೇ ಪರದಾಡುವಂತಾಗಿದ್ದು, ಬೋರ್‌ ವೆಲ್‌ ಹಾಗೂ ಬಾವಿಗಳೂ ಬತ್ತುವ ಸ್ಥಿತಿಗೆ ಬಂದಿವೆ.

ನೀರು ಮಟ್ಟ ತಗ್ಗಲು ಕಾರಣ: ಜಾಸ್ತಿ ಬಿಸಿಲು ಇರುವುದರಿಂದ ನೀರು ತಗ್ಗುತ್ತಿದೆ. ಜತೆಗೆ ಈ ಜಲಾಶಯದ ಸುತ್ತಲೂ ಅನೇಕರು ಅಕ್ರಮವಾಗಿ ನೀರನ್ನು ಪಂಪ್‌ ಮಾಡಿಕೊಳ್ಳುತ್ತಿದ್ದಾರೆ.  ಓಪನ್‌ ಬೋರ್‌ ಮೂಲಕ ಪಂಪ್‌ ಮಾಡಿಕೊಳ್ಳುತ್ತಿರುವುದರಿಂದ ನೀರು ತಗ್ಗುತ್ತಿದೆ. ಅಕ್ರಮವಾಗಿ ಈ ನೀರನ್ನು ಕದಿಯುತ್ತಿದ್ದರೂ ಈ  ಬಗ್ಗೆ ಸಂಬಂ ಧಿಸಿದ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಕಠಿಣ ಕ್ರಮ ಕೈಗೊಂಡರೆ ಅರ್ಧದಷ್ಟು ನೀರನ್ನು ತಡೆದು ಸಾರ್ವಜನಿಕರಿಗೆ ಪೂರೈಸಬಹುದಾಗಿದೆ.

Advertisement

ನಗರದ ಜನಸಂಖ್ಯೆ 6 ಲಕ್ಷಕ್ಕೂ ಹೆಚ್ಚಿದ್ದು, 58 ವಾರ್ಡುಗಳಲ್ಲಿ 83 ಸಾವಿರಕ್ಕೂ ಹೆಚ್ಚು ನಳ ಜೋಡಣೆ ಮಾಡಲಾಗಿದೆ. ಇದಕ್ಕೆ ಎಲ್‌ ಆ್ಯಂಡ್‌ ಟಿ ಕಂಪನಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಏಪ್ರಿಲ್‌ ಹಾಘೂ ಮೇ ಮೊದಲ ವಾರದಲ್ಲಿ ಸಾಮಾನ್ಯವಾಗಿ ಅಕಾಲಿಕ ಮಳೆ ಆಗುವುದು ಸಹಜ. ಆದರೆ ಈ ಬಾರಿ ಮಳೆ ಆಗದಿರುವುದು ಸಮಸ್ಯೆ ಮತ್ತಷ್ಟು ಬಿಗಾಡಿಯಿಸಿದೆ. ಪ್ರತಿ ತಿಂಗಳು ಹಂತ ಹಂತವಾಗಿ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವುದು ತಲೆ  ನೋವಾಗಿ ಪರಿಣಮಿಸಿದೆ.

ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟ ಫೆಬ್ರುವರಿ ತಿಂಗಳಲ್ಲಿ 2465 ಅಡಿ ಇತ್ತು. ಮೇ ತಿಂಗಳಲ್ಲಿ ಅದರ ಪ್ರಮಾಣ ಕಡಿಮೆ ಆಗಿದೆ. ಇನ್ನು ಒಂದು ಅಡಿ ಜಾಸ್ತಿಯಾದರೂ ಅದನ್ನು ಒಂದು ತಿಂಗಳ ಮಟ್ಟಿಗೆ ಪೂರೈಸಲು ಸಾಧ್ಯವಿದೆ. 2475.45 ಅಡಿ ಸಂಗ್ರಹ ಸಾಮರ್ಥ್ಯ ಇದ್ದು, ಇದನ್ನು ಒಂದು ಅಡಿವರೆಗೂ ಹೆಚ್ಚಿಸಿದರೂ ಸಮಸ್ಯೆ ನೀಗಿಸಬಹುದಾಗಿದೆ.

ನೀರಿನ ಸಾಮರ್ಥ್ಯ ಹೆಚ್ಚಿಸಲು ಹಿಂದೇಟು
ಸಾಮಾನ್ಯವಾಗಿ ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟ ಈ ಮುಂಚೆ 2478 ಅಡಿ ವರೆಗೂ ಇರುತ್ತಿತ್ತು. ಅದರ ಪ್ರಮಾಣವನ್ನು ಕೆಲ ವರ್ಷಗಳಿಂದ ಕಡಿಮೆ ಮಾಡಲಾಗಿದೆ. ಹೆಚ್ಚಿನ ನೀರನ್ನು ಜಲಾಶಯ ತಡೆದುಕೊಳ್ಳುವುದಿಲ್ಲ ಎಂಬ ಆತಂಕವೂ ಇದೆ. ಈ ಕಾರಣಕ್ಕಾಗಿ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಇಲಾಖೆ ಹಿಂದೇಟು ಹಾಕುತ್ತಿದೆ.

ಕುಡಿಯುವ ನೀರಿನ ಸಮಸ್ಯೆ ಆಗಲ್ಲ
ಪ್ರತಿನಿತ್ಯ ಬೆಳಗಾವಿ ನಗರಕ್ಕೆ 54 ಎಂಎಲ್‌ಡಿ ನೀರು ಬೇಕಾಗುತ್ತದೆ. ಆದರೆ ಇಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ.
ಸದ್ಯ 40-45 ಎಂಎಲ್‌ಡಿ ನೀರು ಮಾತ್ರ ಪೂರೈಸಲಾಗುತ್ತದೆ. ಅದಕ್ಕಾಗಿ 6-7 ದಿನಗಳಿಗೆ ಒಮ್ಮೆ ನೀರನ್ನು ಪೂರೈಸುವ ಕಾರ್ಯ ನಡೆದಿದೆ. 2019ರಲ್ಲಿಯೂ ಇದೇ ರೀತಿಯಾಗಿ ಸಮಸ್ಯೆ ಆಗಿತ್ತು. ಆಗ ತೆಗೆದುಕೊಂಡ ನಿರ್ಧಾರದಂತೆಯೇ ಈಗಲೂ ಕಂಪನಿಯವರು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಜೂನ್‌ ಅಂತ್ಯದವರೆಗೆ ಏನೂ ಸಮಸ್ಯೆ ಆಗುವುದಿಲ್ಲ ಅಂತಾರೆ ಅಧಿಕಾರಿಗಳು.

ನಗರದಲ್ಲಿ ಸದ್ಯ 6 ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದೇವೆ. ನೀರಿನ ಪ್ರಮಾಣ ತಗ್ಗಿದರೂ ಜೂನ್‌ ಅಂತ್ಯದವರೆಗೆ ನಗರದ
ಜನತೆಗೆ ನೀರು ಪೂರೈಸುತ್ತೇವೆ. ಕೆಲವು ಕಡೆಗೆ ಪೈಪ್‌ ಒಡೆದು ಹೋಗುತ್ತಿರುವುದು ನೀರು ಪೂರೈಕೆಗೆ ವ್ಯತ್ಯಯವಾಗುತ್ತಿದೆ.
ನಗರದ 10 ವಾರ್ಡುಗಳಲ್ಲಿ 24×7 ನೀರನ್ನು ಪೂರೈಸುತ್ತಿದ್ದು, ಇದರಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ.
ರವಿಕುಮಾರ,
ಮ್ಯಾನೇಜರ್‌ ಎಲ್‌ ಆ್ಯಂಡ್‌ ಟಿ ಕಂಪನಿ

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next