ಚಿಕ್ಕೋಡಿ: ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅ.3 ರಂದು ಶೆಫರ್ಡ ಇಂಡಿಯಾ ಇಂಟರ್‌ನ್ಯಾಷನಲ್ ಸಂಘಟನೆಯ 9 ನೇ ವಾರ್ಷಿಕ ರಾಷ್ಟ್ರೀಯ ಪ್ರತಿನಿಧಿಗಳ ಮಹಾಸಮಾವೇಶ ಮತ್ತು ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಮ್ಮಿಕೊಳ್ಳಲಾಗಿದೆ.
ಸುಮಾರು 1.50 ಲಕ್ಷ ಕುರುಬ ಸಮಾಜ ಬಾಂಧವರು ಸೇರುವ ನಿರೀಕ್ಷೆ ಇದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇತಿಹಾಸದುದ್ದಕ್ಕೂ ಬೆಳಗಾವಿ ಜಿಲ್ಲೆಯ ಕುರುಬ ಸಮಾಜದ ಕೊಡುಗೆ ದೊಡ್ಡದು, ಹೀಗಾಗಿ ಶೆಫರ್ಡ ಇಂಡಿಯಾ ಇಂಟರನ್ಯಾಷನಲ್ ಸಂಘಟನೆಯ ಸಮಾವೇಶ ಬೆಳಗಾವಿಯಲ್ಲಿಯೇ ಆಯೋಜಿಸಲಾಗಿದೆ ಎಂದು ಹೇಳಿದರು.
ಬೆಳಗಾವಿಯು ಗೋವಾ, ಮಹಾರಾಷ್ಟ್ರ. ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ಮುಂತಾದ ರಾಜ್ಯಗಳಿಗೆ ಅತೀ ಸಮೀಪ ಇರುವ ಕೇಂದ್ರವಾಗಿರುವುದರಿಂದ ರಾಷ್ಟ್ರೀಯ ಕುರುಬ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ಸಮಾವೇಶದಲ್ಲಿ ಕರ್ನಾಟಕ ರಾದ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭವ್ಯ ರಾಷ್ಟ್ರೀಯ ಸನ್ಮಾನ ನಡೆಯಲಿದೆ. ದೇಶದ ವಿವಿಧ ರಾಜ್ಯಗಳಿಂದ ಹರಿಯಾಣದ ರಾಜ್ಯಪಾಲ ಭಂಡಾರು ದತ್ತಾತ್ರೇಯ, ಗೋವಾದ ಮಾಜಿ ಉಪಮುಖ್ಯಮಂತ್ರಿ ಚಂದ್ರಕಾಂತ, ರಾಜ್ಯದ ವಿವಿಧ ಸಚಿವರಾದ ಎಸ್.ಪಿ.ಸಿಂಗ ಬಗೇಲ್, ಯಕುಬ್‌ಸಿಂಗ, ಆದಿತ್‌ಪಾಲ್, ಉಷಾ ಶ್ರೀಚರಣ, ಮಹಾರಾಷ್ಟ್ರದ ಮಾಜಿ ಸಂಸದ ವಿಕಾಸ ಮಹಾತೆ, ಗುಜರಾತ್ ಮಾಜಿ ಸಂಸದ ಸಾಗರ ರಾಯಕ, ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ, ಸಂಘಟನೆ ರಾಷ್ಟ್ರೀಯ ಸಂಚಾಲಕ ಎಚ್.ಎಂ.ರೇವಣ್ಣ ಆಗಮಿಸಲಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಿತ್ತೂರ ಕರ್ನಾಟಕದ ಶಾಸಕರು, ಸಂಸದರು ಸೇರಿದಂತೆ ನಾಯಕರು ಪಕ್ಷಾತೀತವಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಂದು ನಡೆಯುವ ಸಮಾವೇಶದಲ್ಲಿ ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಮತ್ತು ಕುರುಬ ಸಮಾಜದ ವತಿಯಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಕುರಿತು ಠರಾವು ಪಾಸ್ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ನಸಲಾಪೂರೆ, ತಾಲೂಕು ಅಧ್ಯಕ್ಷ ಲಕ್ಷ್ಮಣ ಡಂಗೇರ, ಯುವ ಘಟಕದ ರಾಜ್ಯ ಸಂಚಾಲಕ ಶಿವು ಮರ‍್ಯಾಯಿ, ಸಂಘದ ರಾಜ್ಯ ಸಂಚಾಲಕ ವಿನಾಯಕ ಬನ್ನಟ್ಟಿ, ಹಾಲುಮತ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾದೇವ ಕವಲಾಪೂರೆ, ನ್ಯಾಯವಾದಿ ಎಂ.ಕೆ.ಪೂಜೇರಿ, ಬೀರಾ ಬನ್ನೆ, ಮುಖಂಡ ಸಿದ್ದಪ್ಪ ಮರ‍್ಯಾಯಿ, ನ್ಯಾಯವಾದಿ ಎಲ್.ಬಿ.ಪುಜೇರಿ, ಸುರೇಶ ಹೆಗಡೆ, ರಾಮಣ್ಣಾ ಬನ್ನಟ್ಟಿ, ಸಿದ್ದು ನರಟ್ಟಿ ಮುಂತಾದವರು ಇದ್ದರು.