Advertisement

ರಾಷ್ಟ್ರಾಭಿಮಾನವೇ ಕೇಸರೀಕರಣ: ಸಂಸದ ಅಂಗಡಿ

04:29 PM Oct 15, 2018 | Team Udayavani |

ಬೆಳಗಾವಿ: ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕೆಲಸ ನಡೆದಿದೆ. ಕೇಸರೀಕರಣ ಎನ್ನುವುದು ರಾಷ್ಟ್ರಾಭಿಮಾನ, ಸ್ವಾಭಿಮಾನ, ಭಾರತದ ಗೌರವವಾಗಿದ್ದರಿಂದ ಇದಕ್ಕೆ ಸದಾಕಾಲ ಹೋರಾಟ ಮಾಡಲಾಗುವುದು ಸಂಸದ ಸುರೇಶ ಅಂಗಡಿ ಹೇಳಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಾಡಹಬ್ಬ ಉತ್ಸವ ಸಮಿತಿಯಿಂದ ನಡೆದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ನೆರೆ ರಾಷ್ಟ್ರಗಳ ವಲಸೆಯಿಂದ ಆಗುವ ಪರಿಣಾಮಗಳು ಕುರಿತು ಮಾತನಾಡಿದ ಅವರು, ಮೊದಲಿನಿಂದಲೂ ಭಾರತವನ್ನು ಕೇಸರಿಮಯ ಮಾಡುವ ಕಾರ್ಯ ನಡೆದಿದ್ದು, ತಮ್ಮ ಗುರಿಯೂ ಕೇಸರೀಕರಣ ಮಾಡುವುದಾಗಿದೆ ಎಂದರು.

Advertisement

ದೇಶದ ಪರಂಪರೆ ಅರಿಯುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಭಾರತದಲ್ಲಿ ಕೇಸರೀಕರಣ ಮಾಡದೇ ಬೇರೆ ಯಾವ ದೇಶದಲ್ಲಿ ಮಾಡಲು ಸಾಧ್ಯವಿದೆ. ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ದಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿವೆ. ದೇಶದಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ಸೇರಿಸಿಕೊಂಡಿದ್ದಾರೆ. ಅವರಿಂದಲೂ ದೇಶವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ತಮ್ಮ ಆಡಳಿತಾವಧಿಯ ಸಾಧನೆ ಬಗ್ಗೆ ವಿವರಿಸಿದ ಸಂಸದ ಅಂಗಡಿ, ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸುವ ಮೂಲಕ ಬೆಳಗಾವಿಯ ಶಿಖರ ಮೇಲಕ್ಕೇರಿಸಿದ್ದೇವೆ. ಮಹದಾಯಿ ನದಿ ಯೋಜನೆಯ ವಿವಾದವನ್ನೂ ಕೂಡಲೇ ಬಗೆಹರಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹಿಂದೂಸ್ತಾನದಲ್ಲಿ ಹಿಂದೂಗಳ ಪರವಾಗಿ ಮಾತನಾಡಿದರೆ ಅನ್ಯ ಧರ್ಮಿಯರ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ. ಆದರೆ ಮತಕ್ಕಾಗಿ ಜಾತಿಯ ಸಂಘಟನೆ ನಿರ್ಮಿಸಿಕೊಂಡು ಒಂದೇ ಧರ್ಮದ ಪರವಾಗಿ ಮಾತನಾಡುವವರನ್ನು ಧರ್ಮ ವಿರೋಧಿ ಎನ್ನುವುದಿಲ್ಲ ಎಂದರು.

ಹಿಂದೂಗಳ ಪರ ಮಾತನಾಡಿದವರಿಗೆ ಮುಸ್ಲಿಂ ವಿರೋಧಿ ಎನ್ನುತ್ತಾರೆ. ಆದರೆ ಲಿಂಗಾಯತ ಸಂಘ ನಿರ್ಮಿಸಿಕೊಂಡು ಲಿಂಗಾಯತ ಪರವಾಗಿ ಮಾತನಾಡುವವರನ್ನು ಬ್ರಾಹ್ಮಣ ವಿರೋಧಿ ಎಂದು ಹೇಳುವುದಿಲ್ಲ. ಹಿಂದೂ ಮತದಾರರನ್ನು ಜಾತಿ ಮೇಲೆ ಅಳೆಯಲಾಗುತ್ತದೆ. ಮುಸ್ಲಿಮರನ್ನು ಧರ್ಮದ ಮೇಲೆ ಗುರುತಿಸಲಾಗುತ್ತದೆ ಎಂದರು. ವೋಟ್‌ ಬ್ಯಾಂಕ್‌ ಮತ್ತು ಇಲ್ಲಿನ ರಾಜಕೀಯ ವ್ಯವಸ್ಥೆಯಿಂದಾಗಿ ಭಾರತಕ್ಕೆ ಅಕ್ರಮವಾಗಿ ನುಸುಳುವ ಬಾಂಗ್ಲಾದೇಶ, ಪಾಕಿಸ್ತಾನ, ಮಯನ್ಮಾರ ದೇಶದ ವಲಸಿಗರಿಗೆ ಪಡಿತರ ಚೀಟಿ, ಆಧಾರ್‌ ಕಾರ್ಡ್‌ಗಳನ್ನು ವಿತರಿಸಿ ಆಶ್ರಯ ಕೊಡಲಾಗುತ್ತಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಕ್ಕೆ ತುಂಬಾ ಅಪಾಯಕಾರಿ ಎಂದರು. ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ಅಧ್ಯಕ್ಷತೆ ವಹಿಸಿದ ಡಾ| ಎಚ್‌.ಬಿ. ರಾಜಶೇಖರ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next